‘ರೈತರ ಸಾಲ ಮನ್ನಾ’: ರಾಷ್ಟ್ರೀಯ ನೀತಿ ಅಗತ್ಯ: ಡಾ.ಜಿ.ಪರಮೇಶ್ವರ್

Update: 2017-06-11 14:40 GMT

ಬೆಂಗಳೂರು, ಜೂ.11: ರೈತರ ಸಾಲ ಮನ್ನಾ ಕುರಿತು ಕೇಂದ್ರ ಸರಕಾರ ಸ್ಪಷ್ಟ ನಿಲುವನ್ನು ಪ್ರಕಟಿಸಬೇಕು. ಅಲ್ಲದೆ, ಈ ವಿಚಾರಕ್ಕೆ ಸಂಬಂಧಿಸಿದಂತೆ ‘ರಾಷ್ಟ್ರೀಯ ನೀತಿ’ ರೂಪಿಸಬೇಕೆಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಆಗ್ರಹಿಸಿದ್ದಾರೆ.

ರವಿವಾರ ನಗರದ ಕ್ವೀನ್ಸ್‌ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ಯನ್ನುದ್ದೇಶಿಸಿ ಮಾತನಾಡಿದ ಅವರು, ಗಣ್ಯಾತಿಗಣ್ಯರ ವಾಹನಗಳ ಮೇಲಿನ ಕೆಂಪು ದೀಪಗಳನ್ನು ತೆಗೆಯಲು ರಾತ್ರೋರಾತ್ರಿ ತೀರ್ಮಾನ ಕೈಗೊಳ್ಳುವ ಕೇಂದ್ರ ಸರಕಾರ, ರೈತರ ಸಾಲಮನ್ನಾ ವಿಚಾರದಲ್ಲಿ ರಾಷ್ಟ್ರೀಯ ನೀತಿ ರೂಪಿಸಲು ಮೀನಾ-ಮೇಷ ಎಣಿಸುತ್ತಿರುವುದು ಸರಿಯಲ್ಲ ಎಂದರು.

ಕೇಂದ್ರ ಸರಕಾರವು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ರೈತರ ಸಾಲ ಮನ್ನಾ ಮಾಡಿದರೆ, ರಾಜ್ಯ ಸರಕಾರವು ಸಹಕಾರಿ ಬ್ಯಾಂಕುಗಳಲ್ಲಿನ ಸಾಲ ಮನ್ನಾ ಮಾಡಲು ಸಿದ್ಧವಿದೆ. ಸಹಕಾರಿ ಸಂಘ ಹಾಗೂ ಬ್ಯಾಂಕುಗಳಲ್ಲಿ ಶೇ.22ರಷ್ಟು ಮಂದಿ ಮಾತ್ರ ಸಾಲ ಪಡೆದಿದ್ದರೆ, ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಶೇ.78ರಷ್ಟು ರೈತರು ಸಾಲ ಪಡೆದಿದ್ದಾರೆ ಎಂದು ಅವರು ಹೇಳಿದರು.

ರಾಜ್ಯ ಸರಕಾರವು ಸಹಕಾರ ಸಂಘಗಳು, ಬ್ಯಾಂಕುಗಳ ರೈತರ ಸಾಲ ಮನ್ನಾ ಮಾಡಿದರೆ, ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ರೈತರ ಸಾಲ ಹಾಗೆಯೇ ಉಳಿಯುತ್ತದೆ. ಸಾಲ ಮನ್ನಾ ಮಾಡುವ ಪ್ರಯೋಜನ ಎಲ್ಲರಿಗೂ ಸಿಗಬೇಕು ಎಂಬುದು ನಮ್ಮ ಉದ್ದೇಶ. ಹಾಗಾಗಿ, ರಾಷ್ಟ್ರೀಕೃತ ಬ್ಯಾಂಕುಗಳ ಸಾಲ ಮನ್ನಾ ಅಗತ್ಯವಿದೆ ಎಂದು ಪರಮೇಶ್ವರ್ ತಿಳಿಸಿದರು.

ಕೇಂದ್ರ ಸರಕಾರವು ದೇಶಾದ್ಯಂತ ರೈತರು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಪಡೆದಿರುವ 1.40 ಲಕ್ಷ ಕೋಟಿ ರೂ.ಸಾಲ ಮನ್ನಾ ಮಾಡುವ ತೀರ್ಮಾನ ಕೈಗೊಳ್ಳಲಿ. ಈ ಹಿಂದೆ ಮನಮೋಹನ್‌ಸಿಂಗ್ ಅಧಿಕಾರವಧಿಯಲ್ಲಿ 72 ಸಾವಿರ ಕೋಟಿ ರೂ.ಸಾಲ ಮನ್ನಾ ಮಾಡಲಾಗಿತ್ತು ಎಂದು ಅವರು ತಿಳಿಸಿದರು.

ಪೆಟ್ರೋಲಿಯಂ ಉತ್ಪನ್ನಗಳ ಮಾರಾಟದಲ್ಲಿ 2.50 ಲಕ್ಷ ಕೋಟಿ ರೂ.ಗಳ ಆದಾಯಗಳಿಸಿರುವ ಕೇಂದ್ರ ಸರಕಾರವು, ಅದನ್ನು ರೈತರ ಕಲ್ಯಾಣಕ್ಕೆ ವರ್ಗಾವಣೆ ಮಾಡಲಿ. ಕೇಂದ್ರ ಸರಕಾರ ಸಾಲ ಮನ್ನಾ ವಿಚಾರದಲ್ಲಿ ಖಚಿತ ನಿಲುವು ಪ್ರಕಟಿಸದಿದ್ದರೆ, ನಾವು ಯಾವುದೆ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ. ರೈತರ ಹಿತಾಸಕ್ತಿಯನ್ನು ದೃಷ್ಠಿಯಲ್ಲಿಟ್ಟುಕೊಂಡು ರಾಜ್ಯ ಸರಕಾರ ಒಂದು ತೀರ್ಮಾನಕ್ಕೆ ಬರಲಿದೆ ಎಂದು ಪರಮೇಶ್ವರ್ ಹೇಳಿದರು.

ರಾಜ್ಯಕ್ಕೆ ರಾಹುಲ್‌ಗಾಂಧಿ ಆಗಮನ: ನ್ಯಾಷನಲ್ ಹೆರಾಲ್ಡ್ ಸ್ಮರಣ ಸಂಚಿಕೆ ಲೋಕಾರ್ಪಣೆ ಸಮಾರಂಭ ಹಾಗೂ ಕೆಪಿಸಿಸಿ ಸರ್ವ ಸದಸ್ಯರ ಸಭೆಯಲ್ಲಿ ಪಾಲ್ಗೊಳ್ಳಲು ಜೂ.12ರಂದು ಎಐಸಿಸಿ ಉಪಾಧ್ಯಕ್ಷ ರಾಹುಲ್‌ಗಾಂಧಿ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ ಎಂದು ಪರಮೇಶ್ವರ್ ತಿಳಿಸಿದರು.

ವಸಂತನಗರದಲ್ಲಿರುವ ಅಂಬೇಡ್ಕರ್ ಭವನದಲ್ಲಿ ಮಧ್ಯಾಹ್ನ 12.45ಕ್ಕೆ ನಡೆಯಲಿರುವ ಕಾರ್ಯಕ್ರಮದಲ್ಲಿ ರಾಹುಲ್‌ಗಾಂಧಿಯೊಂದಿಗೆ ಉಪರಾಷ್ಟ್ರಪತಿ, ರಾಜ್ಯಪಾಲ ಹಾಗೂ ಮುಖ್ಯಮಂತ್ರಿ ಭಾಗವಹಿಸಲಿದ್ದಾರೆ. ಇದೊಂದು ರಾಜಕೀಯ ರಹಿತ ಕಾರ್ಯಕ್ರಮವಾಗಿರಲಿದೆ ಎಂದು ಅವರು ಹೇಳಿದರು.

ಆನಂತರ, ಸೆಂಟ್ರಲ್ ಕಾಲೇಜು ಆವರಣದಲ್ಲಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಮಧ್ಯಾಹ್ನ 3 ಗಂಟೆಗೆ ಕೆಪಿಸಿಸಿ ಸರ್ವ ಸದಸ್ಯರ ಸಭೆಯಲ್ಲಿ ರಾಹುಲ್‌ಗಾಂಧಿ ಪಾಲ್ಗೊಳ್ಳಲಿದ್ದು, ರಾಷ್ಟ್ರ ರಾಜಕಾರಣ, ಮುಂಬರುವ ವಿಧಾನಸಭಾ ಚುನಾವಣೆಗೆ ಪಕ್ಷದ ಸಂಘಟನೆ ಸೇರಿದಂತೆ ವಿವಿಧ ವಿಚಾರಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎಂದು ಅವರು ತಿಳಿಸಿದರು.

ಕೆಪಿಸಿಸಿ ಸರ್ವ ಸದಸ್ಯರ ಸಭೆಯಲ್ಲಿ ಎಲ್ಲ ಸಂಸದರು, ಶಾಸಕರು, ಸಚಿವರು, ಯುವ ಕಾಂಗ್ರೆಸ್, ಮಹಿಳಾ ಕಾಂಗ್ರೆಸ್ ಸೇರಿದಂತೆ ಮುಂಚೂಣಿ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು ಸೇರಿದಂತೆ 1500 ಮಂದಿ ಪಾಲ್ಗೊಳ್ಳಲಿದ್ದಾರೆಎಂದು ಪರಮೇಶ್ವರ್ ಹೇಳಿದರು.

ಅಮಿತ್ ಶಾ ವಿರುದ್ಧ ವಾಗ್ದಾಳಿ : ರಾಷ್ಟ್ರಪಿತ ಮಹಾತ್ಮಗಾಂಧಿಯನ್ನು ‘ಚತುರ ವ್ಯಾಪಾರಿ’ಎಂದಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿಕೆಯನ್ನು ಕಾಂಗ್ರೆಸ್ ಪಕ್ಷ ತೀವ್ರವಾಗಿ ಖಂಡಿಸಿದೆ. ಅಮಿತ್ ಶಾ ತಮ್ಮ ಹೇಳಿಕೆಗೆ ಕೂಡಲೆ ದೇಶದ ಕ್ಷಮೆಯಾಚಿಸಬೇಕು ಎಂದು ಅವರು ಆಗ್ರಹಿಸಿದರು.

ಮಹಾತ್ಮಗಾಂಧಿಗೆ ಮಾಡಿರುವ ಅವಮಾನ, ದೇಶಕ್ಕೆ ಮಾಡಿರುವ ಅವಮಾನದಂತೆ. ವಿಶ್ವಮಟ್ಟದ ನಾಯಕರಾಗಿರುವ ಮಹಾತ್ಮಗಾಂಧಿಯನ್ನು ಯಾರೊಬ್ಬರಿಗೂ ಹೋಲಿಸಲು ಸಾಧ್ಯವಿಲ್ಲ ಎಂದು ಪರಮೇಶ್ವರ್ ಹೇಳಿದರು.

ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರು ಬಗ್ಗೆ ಬಿಜೆಪಿ ಮುಖಂಡ ಗೋವಿಂದ ಕಾರಜೋಳ ನೀಡಿರುವ ಹೇಳಿಕೆ ಅತ್ಯಂತ ಖಂಡನಾರ್ಹ. ದೇಶ ಹಾಗೂ ಕಾಂಗ್ರೆಸ್ ಪಕ್ಷದ ಇತಿಹಾಸವನ್ನು ಬಿಜೆಪಿಯವರು ಸರಿಯಾಗಿ ಅರ್ಥಮಾಡಿಕೊಂಡಿಲ್ಲ. ಪಂಚವಾರ್ಷಿಕ ಯೋಜನೆ ಸೇರಿದಂತೆ ತಮ್ಮ ದೂರದೃಷ್ಠಿಯ ಮೂಲಕ ಜವಾಹರಲಾಲ್ ದೇಶದ ಅಭಿವೃದ್ಧಿಗೆ ಅಡಿಪಾಯ ಹಾಕಿದರು ಎಂದು ಪರಮೇಶ್ವರ್ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ಗುಂಡೂರಾವ್, ಕೆಪಿಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ವಿ.ಆರ್.ಸುದರ್ಶನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News