ಭಾರತದ ಅತ್ಯಂತ ಜನಪ್ರಿಯ ಖಾದ್ಯ ಸಮೋಸಾದ ಮೂಲ ಗೊತ್ತೇ?

Update: 2017-06-12 09:44 GMT

ಸಮೋಸಾದ ಹೆಸರು ಕೇಳಿದರೇ ಬಾಯಲ್ಲಿ ನೀರೂರತ್ತದೆ. ಸಂಜೆಯ ಚಹಾದ ಜೊತೆಗೆ ಸಮೋಸಾ ಇದ್ದರೆ ಆ ಸುಖವೇ ಬೇರೆ. ಆದರೆ ಈ ಸ್ವಾದಿಷ್ಟ ಸಮೋಸಾ ನಮ್ಮ ದೇಶಕ್ಕೆ ಬಂದಿದ್ದು ಎಲ್ಲಿಂದ ಎನ್ನುವುದು ಗೊತ್ತೇ? ಸಮೋಸಾದ ಪಯಣದ ಕಥೆ ಇಲ್ಲಿದೆ.

1526ರಲ್ಲಿ ಭಾರತಕ್ಕೆ ಕಾಲಿಟ್ಟಿದ್ದ ಮೊಘಲರು ತಮ್ಮಿಂದಿಗೆ ಸ್ವಾದಿಷ್ಟ ಖಾದ್ಯಗಳ ತಯಾರಿಕೆಯ ಜ್ಞಾನವನ್ನೂ ಹೊತ್ತು ತಂದಿದ್ದರು. ಆದರೆ ಆಗಲೂ ಸಮೋಸಾ ತನ್ನ ಜನಪ್ರಿಯತೆಯನ್ನು ಉಳಿಸಿಕೊಂಡಿತ್ತು. ಮೊಘಲರ ಕಾಲದಲ್ಲಿ ಸಮೋಸಾ ಇತ್ತು ಎನ್ನುವುದನ್ನು 16ನೇ ಶತಮಾನದ ಮೊಘಲ್ ದಾಖಲೆ ಐನ್-ಇ-ಅಕ್ಬರಿಯು ದೃಢಪಡಿಸಿದೆ.

ಇರಾನಿನ ಇತಿಹಾಸಕಾರ ಅಬುಲ್‌ಫಝ್ಲ ಬೇಹಕಿ(995-1077)ಯ ಬರವಣಿಗೆ ಗಳಲ್ಲಿ ಸಮೋಸಾ ಎಂದು ನಾವು ಈಗ ಕರೆಯುವ ಖಾದ್ಯವು ಮೊದಲ ಬಾರಿಗೆ ಉಲ್ಲೇಖಗೊಂಡಿತ್ತು. ಅದನ್ನು ಆಗ ‘ಸಂಬುಸಕ್’ ಅಥವಾ ‘ಸಂಬುಸಜ್’ ಎಂದು ಕರೆಯಲಾಗುತ್ತಿತ್ತು.

ಮುಸ್ಲಿಂ ವ್ಯಾಪಾರಿಗಳ ಆಗಮನದೊಂದಿಗೆ ಗರಿಗರಿಯಾದ ಸಮೋಸಾ ಕೂಡ 13 ಅಥವಾ 14ನೇ ಶತಮಾನದಲ್ಲಿ ಭಾರತ ಉಪಖಂಡವನ್ನು ಪ್ರವೇಶಿಸಿತ್ತು ಮತ್ತು ಬಳಿಕ ಹಲವಾರು ಮುಸ್ಲಿಂ ಅರಸೊತ್ತಿಗೆಗಳ ಭೋಜನಶಾಲೆಗಳಲ್ಲಿ ಸಮೋಸಾ ಪ್ರಮುಖವಾಗಿ ರುತ್ತಿತ್ತು.

 ಮಧ್ಯ ಏಷ್ಯಾದ ಈ ತಿಂಡಿ ಶೀಘ್ರವೇ ದಕ್ಷಿಣ ಏಷ್ಯಾದ ಜನರ ಮನಸ್ಸನ್ನು ಗೆದ್ದುಕೊಂಡಿತ್ತು. ಇಂದು ಸಂಬುಸಕ್ ಏಷ್ಯಾದ್ಯಂತ ವಿವಿಧ ಹೆಸರುಗಳಲ್ಲಿ ಮತ್ತು ವಿವಿಧ ಅವತಾರಗಳಲ್ಲಿ ದೊರೆಯುತ್ತದೆ.ಅಫಘಾನಿಸ್ತಾನದ ಪರ್ವತ ಶ್ರೇಣಿಗಳ ಮೂಲಕ ಭಾರತಕ್ಕೆ ಆಗಮಿಸಿದ್ದ 14ನೇ ಶತಮಾನದ ಮೊರಾಕ್ಕೋದ ಅನ್ವೇಷಕ ಇಬ್ನ್ ಬತುತಾ ಆಗಿನ ದಿಲ್ಲಿ ದೊರೆ ಮುಹಮ್ಮದ್ ಬಿನ್ ತುಘ್ಲಕ್‌ನ ಅರಮನೆಯಲ್ಲಿ ಭೋಜನವನ್ನು ಸವಿದಿದ್ದ.

ತಾನು ಸವಿದಿದ್ದ ಊಟವನ್ನು ವರ್ಣಿಸಿರುವ ಬತುತಾ, ದಿಲ್ಲಿ ಸುಲ್ತಾನನ ಅರಮನೆ ಯಲ್ಲಿನ ಸಮೋಸಾ ತುಂಬ ರುಚಿಯಾಗಿತ್ತು. ಪುಟ್ಟ ಕಾಳುಗಳು, ಮಾಂಸದ ತುಣುಕು, ಬಾದಾಮ್, ಪಿಸ್ತಾ ಮತ್ತು ಅಕ್ರೋಟ್‌ಗಳನ್ನೊಳಗೊಂಡಿದ್ದ ಸಮೋಸಾವನ್ನು ಮೂರನೇ ಸುತ್ತಿನಲ್ಲಿ ಪಲಾವ್‌ಗೆ ಮುನ್ನ ಬಡಿಸಲಾಗಿತ್ತು ಎಂದಿದ್ದಾನೆ.

ಖ್ಯಾತ ಸೂಫಿ ಕವಿ ಅಮೀರ್ ಖುಸ್ರೋ ಅವರು ಸಮೋಸಾದ ಬಗ್ಗೆ ದಿಲ್ಲಿ ಸುಲ್ತಾನರಿಗೆ ಇದ್ದ ಪ್ರೀತಿಯ ಬಗ್ಗೆ ತನ್ನ ಬರೆದಿದ್ದಾರೆ.

ತನ್ಮಧ್ಯೆ ಭಾರತದ ಇತರೆಡೆ ಪೋರ್ಚುಗೀಸರು ಪರಿಚಯಿಸಿದ್ದ ಬಟಾಟೆ ಜನಪ್ರಿಯ ವಾಗಿತ್ತು. ಮುಂದಿನ ಇನ್ನೂರು ವರ್ಷಗಳಲ್ಲಿ ಬಟಾಟೆ ಹೆಚ್ಚುಕಡಿಮೆ ಎಲ್ಲ ಭಾರತೀಯ ಪಾಕಗಳಲ್ಲಿ ಪ್ರಮುಖ ಸ್ಥಾನವನ್ನು ಪಡೆದುಕೊಂಡಿತ್ತು. ಜನರ ಬೆಳಗಿನ ತಿಂಡಿ, ಮಧ್ಯಾಹ್ನದ ಮತ್ತು ರಾತ್ರಿಯ ಊಟಗಳಲ್ಲಿ ಪರಿವರ್ತನೆಯನ್ನು ತಂದ ಬಟಾಟೆ ಎಲ್ಲ ವಿಧಗಳಲ್ಲಿಯೂ ಮಾಂಸದ ಖಾದ್ಯಗಳಿಗೆ ಸ್ಪರ್ಧೆ ನೀಡತೊಡಗಿತ್ತು. ಈ ಬಟಾಟೆ ಅದಾಗಲೇ ಎಲ್ಲರ ಮನಸ್ಸು ಗೆದ್ದಿದ್ದ ಸಂಬುಸಕ್ ಅನ್ನೂ ಬದಲಾಯಿಸಿಬಿಟ್ಟಿತ್ತು.

ಆಧುನಿಕ ಸಮೋಸಾ ಕಿವುಚಿದ ಬಟಾಟೆ,ಹಸಿರು ಬಟಾಣಿ,ಈರುಳ್ಳಿ,ಹಸಿಮೆಣಸು ಮತ್ತು ವಿವಿಧ ಸಾಂಬಾರ ವಸ್ತುಗಳ ಮಿಶ್ರಣವಾಗಿ ಪುನರ್‌ಜನ್ಮ ಕಂಡಿರುವ,ಚಟ್ಟಿಯೊಂದಿಗೆ ತಿನ್ನುವ ಸಾದಿಷ್ಟ ಖಾದ್ಯವಾಗಿದೆ. ಜೊತೆಗೆ ಮಟನ್ ಸಮೋಸಾ,ಚಿಕನ್ ಸಮೋಸಾಗಳೂ ತುಂಬ ಜನಪ್ರಿಯವಾಗಿವೆ.

ಇಂದು ಭಾರತದಲ್ಲಿ ವಿವಿಧ ರೀತಿಗಳಲ್ಲಿ ಸಮೋಸಾಗಳನ್ನು ತಯಾರಿಸಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News