ರಮಝಾನ್ ತಿಂಗಳಲ್ಲಿ ವಿಶೇಷ ಕಾಳಜಿ ತೋರಿಸುವ ಮುಸ್ಲಿಮೇತರ ಸ್ನೇಹಿತರು

Update: 2017-07-01 16:55 GMT

ರಮಝಾನ್ ಬಂತೆಂದರೆ ಸಾಕು ಮುಸ್ಲಿಮರಲ್ಲಿ ಮಾತ್ರವಲ್ಲ ಮುಸ್ಲಿಮೇತರರಲ್ಲಿ ಆಗುವ ಬದಲಾವಣೆ ಗಮನಾರ್ಹವಾದುದು. ಅದು ಈ ತಿಂಗಳ ವಿಶೇಷವೆಂದು ಹೇಳಬಹುದು. ಯಾವತ್ತೂ ಧರ್ಮದ ವಿಧಿವಿಧಾನದ ಬಗ್ಗೆ ಹೆಚ್ಚು ಮಾತನಾಡದ ನನ್ನ ಸ್ನೇಹಿತರು ರಮಝಾನ್ ಬಂತೆಂದರೆ ಸಾಕು ನನ್ನನ್ನು ಕಂಡೊಡನೆಯೇ "ಹ್ಯಾಪಿ ರಮಝಾನ್" ಎಂದು ಹಾರೈಸುತ್ತಾರೆ. "ಉಪವಾಸ ಇದ್ದೀರಾ" ಎಂದು ಕೇಳತೊಡಗುತ್ತಾರೆ, ಬೆಳಗ್ಗಿನಿಂದ ರಾತ್ರಿಯವರೆಗೆ ಏನೂ ತಿನ್ನಲಿಕ್ಕಿಲ್ಲವಾ, ನೀರೂ ಕುಡೀಬಾರ್ದ, ಹಸಿವಾಗಲ್ವಾ? ಎಂದು ಒಂದೇ ಸಮನೆ ಕುತೂಹಲದ ಪ್ರಶ್ನೆಗಳನ್ನು ಕೇಳತೊಡಗುತ್ತಾರೆ. 

ಸಿಗರೇಟು, ಬೀಡಿ ಎಳೆಯುವ ಬೀಡ ತಿನ್ನುವ ಇನ್ನೂ ಕೆಲವು ಸ್ನೇಹಿತರು ಸಿಗರೇಟು ಹಿಡಿದ ಕೈಯನ್ನು ಮರೆಗೆ ಸರಿಸುತ್ತಾರೆ. "ಉಪವಾಸ ಅನ್ವಯವಾಗುವುದು ನನಗೆ, ನಿಮಗಲ್ಲ" ಎಂದು ಅವರಿಗೆ ಮನವರಿಕೆ ಮಾಡಿದರೆ, ಅದು "ನಿಮ್ಮ ಉಪವಾಸದ ಮೇಲಿನ ನಮ್ಮ ಗೌರವ" ಎಂದು ಪ್ರತಿಪಾದಿಸುತ್ತಾರೆ.

ಕೆಲವು ಸಂದರ್ಭಗಳಲ್ಲಿ ನಾನು ಕೆಲಸಕ್ಕಾಗಿ ಜನರನ್ನು ಕರೆದಾಗ, ರಮಝಾನಿನ ಮಹತ್ವಕ್ಕೆ ಪ್ರಧಾನ್ಯತೆ ನೀಡಿ ಮಾಡಿಕೊಟ್ಟದ್ದೂ ಇದೆ. ಬೇರೆಲ್ಲಾ ಕೆಲಸ ಬಿಟ್ಟು ನಿಮಗೆ ರಮಝಾನ್ ತಿಂಗಳಾದ ಕಾರಣ ಬೇಗ ಮಾಡಿಕೊಟ್ಟಿದ್ದೇವೆ ಎಂದು ಹೇಳಿ ಹೋಗುತ್ತಾರೆ. ನನ್ನ ಕೆಲಸದ ಸ್ಥಳದಲ್ಲಿನ ಸ್ನೇಹಿತರಿಗೆ ಮನೆಯಿಂದ ತಿಂಡಿ ತಂದುಕೊಟ್ಟರೆ, ಅದನ್ನು ನನಗೆ ಕಾಣದಂತೆ ತಿಂದುಬರುತ್ತಾರೆ.  ಎಲ್ ಪಿಜಿ ಗ್ಯಾಸ್ ಗೆ ಕೊರತೆ ಇದ್ದಂತಹ ಸಂದರ್ಭದಲ್ಲೊಮ್ಮೆ ಮನೆಯಲ್ಲಿ ಗ್ಯಾಸ್ ಖಾಲಿಯಾಗಿತ್ತು, ಏಜೆಂಟರಲ್ಲಿ ಆ ಬಗ್ಗೆ ವಿಚಾರಿಸಿದಾಗ ನನ್ನ ಸರದಿ ಅಲ್ಲದಿದ್ದರೂ ರಮಝಾನ್ ತಿಂಗಳೆಂದು ಹೆಚ್ಚು ಮಾತನಾಡದೆ ಗ್ಯಾಸ್ ಕೊಟ್ಟದ್ದೂ ಇದೆ.

ಹೀಗೆ ಮುಸ್ಲಿಮೇತರರಲ್ಲಿ ಉಂಟಾಗುವ ಇಂತಹ ವಿಶೇಷ ಭಾವನೆ ಬೇರೆ ಸಂದರ್ಭದಲ್ಲಿ ಕಂಡು ಬರುವುದು ಕಡಿಮೆ. ಇಂತಹ ಒಂದು ಸಾರ್ವತ್ರಿಕ ಪರಿವರ್ತನೆ ರಮಝಾನ್ ನ ಒಂದು ವೈಶಿಷ್ಟ್ಯವೆಂದು ನನಗನಿಸುತ್ತದೆ.

-ಝುಬೇರ್ ಅಹಮದ್, ಕೊಪ್ಪ

Writer - ಝುಬೇರ್ ಅಹಮದ್

contributor

Editor - ಝುಬೇರ್ ಅಹಮದ್

contributor

Similar News