ಶೀಘ್ರದಲ್ಲಿಯೇ 22 ಸಾವಿರ ಹುದ್ದೆಗಳ ಭರ್ತಿ: ಎಚ್.ಆಂಜನೇಯ
ಬೆಂಗಳೂರು, ಜೂ.12: ಹೈದ್ರಾಬಾದ್ ಕರ್ನಾಟಕ ಪ್ರದೇಶಕ್ಕೆ ಮೀಸಲಾಗಿರುವ 6,853 ಡಿ.ವರ್ಗದ ಹುದ್ದೆಗಳು ಸೇರಿ 22 ಸಾವಿರ ಹುದ್ದೆಗಳನ್ನು ಈ ವರ್ಷದಲ್ಲಿಯೇ ಭರ್ತಿ ಮಾಡಿಕೊಳ್ಳಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಹೇಳಿದ್ದಾರೆ.
ಸೋಮವಾರ ವಿಧಾನ ಪರಿಷತ್‌ನ ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿ ಸದಸ್ಯ ಅಮರನಾಥ ಪಾಟೀಲ್ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, ಪ್ರಥಮ ದರ್ಜೆ ಗುಮಾಸ್ತರು, ಅಧಿಕಾರಿ ವರ್ಗದ ಹುದ್ದೆಗಳನ್ನು ಈ ವರ್ಷ್ಯಾಂತ್ಯದಲ್ಲಿ ಕೆಪಿಎಸ್‌ಸಿ ಜಿಲ್ಲಾ ನೇಮಕಾತಿ ಸಮಿತಿ ಮೂಲಕ ನೇರ ನೇಮಕಾತಿ ಹಾಗೂ ಮುಂಬಡ್ತಿ ಮೂಲಕ ಸಮಾಜ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ಹೇಳಿದರು.
ಸಂವಿಧಾನದ 371(ಜೆ)ಪ್ರಕಾರ ಹೈಕ ಪ್ರದೇಶಕ್ಕೆ ವಿವಿಧ ಇಲಾಖೆಗಳಿಂದ ಆ ಭಾಗದ ನಿರುದ್ಯೋಗಿಗಳಿಗೆ ಹುದ್ದೆಗಳನ್ನು ನೀಡಲಾಗುವುದು ಎಂದು ಹೇಳಿದರು.
ಸಂವಿಧಾನದ 371(ಜೆ) ಪ್ರಕಾರ ಹೈಕ ಭಾಗದಲ್ಲಿ ಸಮಾಜ ಕಲ್ಯಾಣ ಇಲಾಖೆಯಲ್ಲಿ 3198 ಹುದ್ದೆಗಳು ಖಾಲಿ ಇವೆ. ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ 192 ಹುದ್ದೆಗಳು, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಲ್ಲಿ 934 ಹುದ್ದೆಗಳು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ 2539 ಹುದ್ದೆಗಳು ಖಾಲಿ ಇವೆ ಎಂದು ಹೇಳಿದರು.