ನಿಷ್ಠಾವಂತರಿಗೆ ಮಾತ್ರ ಟಿಕೆಟ್: ರಾಹುಲ್ ಗಾಂಧಿ
ಬೆಂಗಳೂರು, ಜೂ.12: ರಾಜ್ಯದ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿಯುತ್ತಿರುವ ನಿಷ್ಠಾವಂತರಿಗೆ ಮಾತ್ರ ಟಿಕೆಟ್ ನೀಡಲಾಗುವುದೆಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಘೋಷಿಸಿದ್ದಾರೆ.
ಸೋಮವಾರ ನಗರದ ಸೆಂಟ್ರಲ್ ಕಾಲೇಜಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಕೆಪಿಸಿಸಿ ಸರ್ವ ಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹೆಲಿಕಾಪ್ಟರ್‌ನಲ್ಲಿ ಬರುವವರು, ಶಿಫಾರಸ್ಸು ಪತ್ರ ತೆಗೆದುಕೊಂಡು ಬರುವವರಿಗೆ ಟಿಕೆಟ್ ಸಿಗಲ್ಲ ಎಂದು ಸ್ಪಷ್ಟಪಡಿಸಿದರು.
ದೊಡ್ಡ ನಾಯಕರಾಗಿರಲಿ, ಸಾಮಾನ್ಯ ಕಾರ್ಯಕರ್ತರೇ ಆಗಿರಲಿ, ಜನತೆಯೊಂದಿಗೆ ಗುರುತಿಸಿಕೊಂಡು, ಅವರ ಸಮಸ್ಯೆಗಳಿಗೆ ಸ್ಪಂದಿಸಿ, ಪಕ್ಷಕ್ಕಾಗಿ ದುಡಿಯುತ್ತಿರುವ ನಿಷ್ಠಾವಂತರಿಗೆ ಮಾತ್ರ ಈ ಬಾರಿ ವಿಧಾನಸಭಾ ಚುನಾವಣೆಯ ಟಿಕೆಟ್ ನೀಡಲಾಗುವುು ಎಂದು ರಾಹುಲ್‌ಗಾಂಧಿ ಹೇಳಿದರು.
ಕೆಲ ದಿನಗಳ ಹಿಂದೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ನೇತೃತ್ವದ ಐದು ಜನರ ತಂಡವನ್ನು ರಾಜ್ಯಕ್ಕೆ ಆಗಮಿಸಿ, ಪಕ್ಷ ಸಂಘಟನೆಯ ವಿಚಾರದಲ್ಲಿ ನಿಮ್ಮೆಂದಿಗೆ ನಡೆಸಿದ ಚರ್ಚೆ ತೃಪ್ತಿ ತಂದಿದೆಯಾ ಎಂದು ರಾಹುಲ್ ಕೇಳಿದ ಪ್ರಶ್ನೆಗೆ ಕಾರ್ಯಕರ್ತರೆಲ್ಲ ಜೋರಾದ ಧ್ವನಿಯಲ್ಲಿ ಹೌದು ಎಂದು ಸಮ್ಮತಿ ಸೂಚಿಸಿದರು.
ಕಾಂಗ್ರೆಸ್ ಪಕ್ಷ ಒಂದು ಕುಟುಂಬವಿದ್ದಂತೆ. ಏಕಕಾಲದಲ್ಲಿ ಎಲ್ಲರನ್ನೂ ಸಂತೋಷವಾಗಿಡಲು ಸಾಧ್ಯವಿಲ್ಲ. ಆದರೆ, ಎಲ್ಲರನ್ನೂ ಅಪ್ಪಿಕೊಳ್ಳಲಾಗುವುದು. ಪಕ್ಷದ ಹಿರಿಯರೆ ಆಗಲಿ, ಸಾಮಾನ್ಯ ಕಾರ್ಯಕರ್ತನೇ ಆಗಿರಲಿ ಜನಸಂಪರ್ಕ ಹೊಂದಿರಬೇಕು. ರಾಜ್ಯ ಸರಕಾರದ ಜನಪ್ರಿಯ ಯೋಜನೆಗಳನ್ನು ಹಾಗೂ ಸಂಬಂಧಪಟ್ಟ ಇಲಾಖೆಯ ಸಾಧನೆಗಳನ್ನು ಸಚಿವರಿಂದ ಹಿಡಿದು ಪ್ರತಿಯೊಬ್ಬ ಕಾರ್ಯಕರ್ತ ಜನರಿಗೆ ಮಾಹಿತಿ ನೀಡಬೇಕು ಎಂದು ಅವರು ಸೂಚನೆ ನೀಡಿದರು.
ಮೋದಿ ಸಾಧನೆ ಶೂನ್ಯ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಮೂರು ವರ್ಷಗಳಲ್ಲಿ ನೂರು ಅಂಕಗಳಿಗೆ ಶೂನ್ಯ ಸಾಧನೆ ಮಾಡಿದೆ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರವು ಕೇಂದ್ರ ಸರಕಾರಕ್ಕಿಂತ ಹತ್ತರಷ್ಟು ಉತ್ತಮ ಸಾಧನೆ ಮಾಡಿದೆ. ಯುಪಿಎ ಸರಕಾರದ ಯೋಜನೆಗಳನ್ನೆ ಮುಂದುವರೆಸಿಕೊಂಡು ಹೋಗುತ್ತಿರುವ ಮೋದಿ ಸರಕಾರ ಯಾರಿಗೆ ಏನು ಮಾಡಿದೆ ಎಂಬುದನ್ನು ಹೇಳಲಿ ಎಂದು ರಾಹುಲ್‌ಗಾಂಧಿ ಸವಾಲು ಹಾಕಿದರು.
ಸುಳ್ಳು ಮಾತು ಬೇಡ ಮೋದಿ: ನಮ್ಮ ದೇಶ ಅಪಾರ ಯುವಶಕ್ತಿ ಹೊಂದಿದೆ. ಆದರೆ, ಚುನಾವಣೆ ವೇಳೆ ಪ್ರತಿವರ್ಷ 2 ಕೋಟಿ ಉದ್ಯೋಗ ಸೃಷ್ಟಿ ಮಾಡಲಾಗುವುದೆಂದು ನರೇಂದ್ರ ಮೋದಿ ಭರವಸೆ ನೀಡಿದ್ದರು. ಆದರೆ, ಕಳೆದ ವರ್ಷ ಒಂದು ಲಕ್ಷ ಉದ್ಯೋಗವೂ ಸೃಷ್ಟಿಯಾಗಿಲ್ಲ. ಈ ಸತ್ಯಾಂಶವನ್ನು ಕಾಂಗ್ರೆಸ್ ಕಾರ್ಯಕರ್ತರು ಜನರಿಗೆ ತಿಳಿಸಬೇಕು. ಬಿಜೆಪಿಯ ನಿಜ ಬಣ್ಣ ಬಯಲು ಮಾಡಬೇಕೆಂದು ಅವರು ಕರೆ ನೀಡಿದರು.
ಮೆಕ್ ಇನ್ ಇಂಡಿಯಾ, ಸ್ವಚ್ಛ್ ಭಾರತ್, ಕನೆಕ್ಟ್ ಇಂಡಿಯಾ ಅಲ್ಲದೆ, ನಾನು ಹೆಸರುಗಳನ್ನು ಮರೆತು ಹೋಗಿದ್ದೇನೆ ಎಂದ ಅವರು, ಸ್ಟಾರ್ಟ್ ಅಪ್ ಇಂಡಿಯಾ, ಸ್ಟಾಂಡ್ ಅಪ್ ಇಂಡಿಯಾ, ಸಿಟ್ ಡೌನ್ ಇಂಡಿಯಾ, ಮೂವ್ ಲೆಫ್ಟ್ ಇಂಡಿಯಾ, ಗೋ ಬ್ಯಾಕ್ ಇಂಡಿಯಾ ಎನ್ನುವ ಯೋಜನೆಗಳು ಯುವಕರ ಏಳಿಗೆಗೆ ಯಾವುದೇ ರೀತಿಯಲ್ಲೂ ಪೂರಕವಾಗಿಲ್ಲ ಎಂದು ಅವರು ವ್ಯಂಗ್ಯವಾಡಿದರು.
ಚುನಾವಣೆ ವೇಳೆಯಲ್ಲಿ ಜಾತಿಗಳನ್ನು ವಿಂಗಡಿಸಿ ಜಗಳ ಮಾಡಿ ಗೆಲುವು ಸಾಧಿಸುವುದು ಬಿಜೆಪಿ ಮತ್ತು ಆರೆಸ್ಸೆಸ್‌ನ ಕೆಲಸವಾಗಿ ಬಿಟ್ಟಿದೆ. ಉತ್ತರಪ್ರದೇಶದಲ್ಲೂ ಹೀಗೆ ಆಗಿದೆ. ಆದರೆ, ದೇಶದ ಭವಿಷ್ಯಕ್ಕಾಗಿ ಕಾಂಗ್ರೆಸ್‌ನ ಜಾತ್ಯತೀತತೆ, ಸಹಬಾಳ್ವೆ ಸಿದ್ದಾಂತದ ಬಗ್ಗೆ ಜನರಿಗೆ ತಿಳಿಸಬೇಕು ಎಂದು ಅವರು ಹೇಳಿದರು.
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದಿಂದ ದೇಶ ವ್ಯಾಪಿ ಭಯದ ವಾತಾವರಣ ನಿರ್ಮಾಣವಾಗಿದೆ. ದಲಿತರು, ಅಲ್ಪಸಂಖ್ಯಾತರಲ್ಲಿ ಈ ಭಯ ಜಾಸ್ತಿಯಾಗಿದೆ ಎಂದ ಅವರು, ಸಿಎಂ ಸಿದ್ದರಾಮಯ್ಯ ಸರಕಾರ ಎಲ್ಲ ಸಮುದಾಯದ ಬಡವರ ಪರ ಕೆಲಸ ಮಾಡಿದೆ. ಇದು ಕಾಂಗ್ರೆಸ್ ಆಡಳಿತದ ಲಕ್ಷಣ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ರೈತರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ಮೋದಿ ಸರಕಾರ ವಿಫಲವಾಗಿದೆ. ಅವರಿಗೆ ಪ್ರಚಾರವೇ ಮುಖ್ಯವಾಗಿದೆ. ಆದರೆ, ಅದು ಜನರ ಹಣ. ಮುಂದಿನ ಚುನಾವಣೆ ಸಾಮೂಹಿಕ ನಾಯಕತ್ವದಲ್ಲಿಯೆ ನಡೆಯಲಿದೆ ಎಂದು ರಾಹುಲ್ ಗಾಂಧಿ ನುಡಿದರು.
ಸರ್ವ ಸದಸ್ಯರ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ.ಹರಿಪ್ರಸಾದ್, ಕಾರ್ಯದರ್ಶಿ ಸತೀಶ್ ಜಾರಕಿಹೊಳಿ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ದಿನೇಶ್‌ಗುಂಡೂರಾವ್, ಎಸ್.ಆರ್.ಪಾಟೀಲ್, ಪ್ರಚಾರ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಕೇಂದ್ರ ಸಚಿವರಾದ ಕೆ.ಎಚ್.ಮುನಿಯಪ್ಪ, ಕೆ.ರಹ್ಮಾನ್‌ಖಾನ್, ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮಿಹೆಬ್ಬಾಳ್ಕರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
‘ಅಮಿತ್ ಶಾಗೆ ಉತ್ತರ ನೀಡುವ ಅಗತ್ಯವಿಲ್ಲ’ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯನ್ನು ‘ಚತುರ ಬನಿಯಾ’ ಎಂದು ಹೇಳಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಬಗ್ಗೆ ಪ್ರತಿಕ್ರಿಯಿಸಿದ ರಾಹುಲ್‌ಗಾಂಧಿ, ಅಮಿಶ್ ಶಾ ಹೇಳಿಕೆಯಿಂದ ಗಾಂಧೀಜಿ ಅವರ ವ್ಯಕ್ತಿತ್ವಕ್ಕೆ ಧಕ್ಕೆ ಆಗುವುದಿಲ್ಲ. ಅವರ ಆದರ್ಶ ದೇಶಕ್ಕೆ ಗೊತ್ತಿದೆ. ಯಾರು ಬ್ರಿಟಿಷರ ಜೊತೆ ಕೈಜೋಡಿಸಿದ್ದರು. ಯಾರು ಪತ್ರ ಬರೆದಿದ್ದರು. ಯಾರು ಸ್ವಾತಂತ್ರಕ್ಕಾಗಿ ಜೈಲಿಗೆ ಹೋಗಿದ್ದರು ಎನ್ನುವುದು ಎಲ್ಲರಿಗೂ ಗೊತ್ತಿದೆ ಎಂದು ಮಾರ್ಮಿಕವಾಗಿ ನುಡಿದರು.
‘ಕೊನೆ ಕ್ಷಣದಲ್ಲಿ ಪಕ್ಷಕ್ಕೆ ಬರುವವರ ವಿರುದ್ಧ ಕ್ರಮ’
ಚುನಾವಣೆ ಸಂದರ್ಭದಲ್ಲಿ ಟಿಕೆಟ್‌ಗಾಗಿ ಮಾತ್ರ ಬೇರೆ ಪಕ್ಷಗಳಿಂದ ಕಾಂಗ್ರೆಸ್ ಪಕ್ಷಕ್ಕೆ ಬರುವವರು ಸ್ಥಾನವಿಲ್ಲ. ಪಕ್ಷದ ಬಲವರ್ಧನೆಗೆ ದುಡಿಯದ ಶಾಸಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ, ಜನರ ಸಮಸ್ಯೆಗಳ ಸ್ಪಂದಿಸದೆ ಇರುವಂತಹ ಶಾಸಕರ ಪಟ್ಟಿಯನ್ನೂ ನೀಡುವಂತೆ ಕೆಪಿಸಿಸಿಗೆ ಸೂಚಿಸಿದ್ದೇನೆ’.
-ರಾಹುಲ್‌ಗಾಂಧಿ, ಉಪಾಧ್ಯಕ್ಷ, ಎಐಸಿಸಿ