×
Ad

ಬೆಂಗಳೂರೂ-ತಿರುಪತಿ ಪ್ಯಾಕೇಜ್ ಟೂರ್: ಕೆಎಸ್ಸಾರ್ಟಿಸಿಯಿಂದ ಮತ್ತೊಂದು ಬಸ್ ಸೇರ್ಪಡೆ

Update: 2017-06-12 22:07 IST

ಬೆಂಗಳೂರು, ಜೂ.12: ಕೆಎಸ್ಸಾರ್ಟಿಸಿಯ ಬೆಂಗಳೂರು-ತಿರುಪತಿ ಪ್ಯಾಕೇಜ್ ಟೂರ್‌ಗೆ ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನೆಲೆಯಲ್ಲಿ ಮತ್ತೊಂದು ಬಸ್ಸು ಜೂ.15ರಿಂದ ಸೇರ್ಪಡೆಗೊಳ್ಳಲಿದೆ.

ಕೆಎಸ್ಸಾರ್ಟಿಸಿ ಮೇ.12 ರಂದು ತಿರುಪತಿಗೆ ಒಂದು ಬಸ್ಸಿನೊಂದಿಗೆ ಪ್ಯಾಕೇಜ್ ಟೂರ್ ಆರಂಭಿಸಿತ್ತು. ಈ ಪ್ಯಾಕೇಜ್‌ಟೂರ್‌ಗೆ ಕಳೆದ ಒಂದು ತಿಂಗಳ ಅವಧಿಯಲ್ಲಿ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಮತ್ತೊಂದು ಬಸ್ಸ್ ಅನ್ನು ಸೇರ್ಪಡೆಗೊಳಿಸಲು ಕೆಎಸ್ಸಾರ್ಟಿಸಿ ಮುಂದಾಗಿದೆ.

ಎರಡನೆ ಪ್ಯಾಕೇಜ್ ಟೂರ್ ಬಸ್ ಜಯನಗರ 4ನೆ ಬ್ಲಾಕ್‌ನಿಂದ ಹೊರಡಲಿದ್ದು, ಸೌತ್ ಎಂಡ್ ಸರ್ಕಲ್, ನಾಗಸಂದ್ರ, ಎನ್.ಆರ್. ಕಾಲನಿ, ವಿ.ವಿ.ಪುರಂ, ಲಾಲ್ ಬಾಗ್, ಶಾಂತಿನಗರ, ಮೆಯೋಹಾಲ್, ದೊಮ್ಮಲೂರು, ಮಾರತ್‌ಹಳ್ಳಿ, ವೈಟ್ ಫೀಲ್ಡ್, ಕಾಡುಗೋಡಿ, ಹೊಸಕೋಟೆ ಮಾರ್ಗವಾಗಿ ತಿರುಪತಿಗೆ ತೆರಳಲಿದೆ.

ಪ್ರತಿ ದಿನ ರಾತ್ರಿ 10 ಗಂಟೆಗೆ ಬೆಂಗಳೂರಿನಿಂದ ಕೆಎಸ್ಸಾರ್ಟಿಸಿ ಐರಾವತ ಡೈಮಂಡ್ ಕ್ಲಾಸ್ ಬಸ್ ಹೊರಡಲಿದ್ದು, ತಿರುಪತಿಯ ಹೊಟೇಲ್‌ನಲ್ಲಿ ಪ್ರೆಶ್ ಅಪ್, ಉಪಾಹಾರ, ಪದ್ಮಾವತಿ ದೇವಿ ದೇವಸ್ಥಾನ ದರ್ಶನ, ತಿರುಪತಿ-ತಿರುಮಲಕ್ಕೆ ಎಪಿಎಸ್‌‌ಆರ್‌ಟಿಸಿ ಸಾರಿಗೆ ವ್ಯವಸ್ಥೆ, ತಿರುಮಲದಲ್ಲಿ ಶೀಘ್ರ ದರ್ಶನ, ಊಟದ ವ್ಯವಸ್ಥೆಯನ್ನು ಪ್ಯಾಕೇಜ್‌ಟೂರ್ ಒಳಗೊಂಡಿದ್ದು, ಮರುದಿನ ತಿರುಪತಿಯಿಂದ ಮಧ್ಯಾಹ್ನ 2 ಗಂಟೆಗೆ ಹೊರಟು ರಾತ್ರಿ 8 ಗಂಟೆಗೆ ಬೆಂಗಳೂರಿಗೆ ತಲುಪಲಿದೆ.

ಭಾನುವಾರದಿಂದ ಗುರುವಾರದವರೆಗೆ ವಯಸ್ಕರಿಗೆ 2 ಸಾವಿರ ರೂ. 6-12 ವರ್ಷದೊಳಗಿನ ಮಕ್ಕಳಿಗೆ 1700 ರೂ. ಹಾಗೂ ಶುಕ್ರವಾರ ಮತ್ತು ಶನಿವಾರದಂದು ವಯಸ್ಕರಿಗೆ 2500 ರೂ. ಮಕ್ಕಳಿಗೆ 2000 ರೂ. ದರವನ್ನು ನಿಗದಿಪಡಿಸಿದ್ದು, 30 ದಿನಗಳ ಮೊದಲು ಮುಂಗಡ ಆಸನ ಕಾಯ್ದಿರಿಸಬಹುದಾಗಿದೆ ಎಂದು ಕೆಎಸ್ಸಾರ್ಟಿಸಿ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News