ಪರಿಷತ್ ಸಭಾಪತಿ ಶಂಕರಮೂರ್ತಿ ವಿರುದ್ಧ ಅವಿಶ್ವಾಸ ಇಂದು ಚರ್ಚೆ

Update: 2017-06-12 17:31 GMT

ಬೆಂಗಳೂರು, ಜೂ.12: ವಿಧಾನ ಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ ವಿರುದ್ಧ ಸಲ್ಲಿಸಿರುವ ಅವಿಶ್ವಾಸ ಕುರಿತ ನೋಟಿಸ್ ಗಡುವು ಸೋಮವಾರಕ್ಕೆ ಮುಗಿಯಲಿದ್ದು, ಮಂಗಳವಾರ ಸದನದಲ್ಲಿ ಚರ್ಚೆಯಾಗಲಿದೆ.

 ಶಂಕರಮೂರ್ತಿ ಅವರನ್ನು ಸಭಾಪತಿ ಸ್ಥಾನದಿಂದ ಕೆಳಗಿಳಿಸುವ ಪ್ರಯತ್ನವಾಗಿ ಕಾಂಗ್ರೆಸ್ ಸದಸ್ಯರು ವಿ.ಎಸ್.ಉಗ್ರಪ್ಪನೇತೃತ್ವದಲ್ಲಿ ಮೇ 30ಕ್ಕೆ ನೋಟಿಸ್ ಸಲ್ಲಿಸಿದ್ದರು. ಅದು ಸದನದಲ್ಲಿ ಚರ್ಚೆಯಾಗಲು 14 ದಿನಗಳ ಸಮಯ ಬೇಕಾಗುತ್ತದೆ.

ಹೀಗಾಗಿ, ಉಗ್ರಪ್ಪಸಲ್ಲಿಸಿದ್ದ ನೋಟಿಸ್‌ಗೆ ಜೂನ್ 12ರಂದು 14 ದಿನಗಳಾಗುತ್ತವೆ. ಜೂನ್ 13ರಂದು ಸದನದ ಕಲಾಪ ಪಟ್ಟಿಯಲ್ಲಿ ಈ ನೋಟಿಸ್ ವಿಚಾರವನ್ನು ಸೇರಿಸಬೇಕಾಗುತ್ತದೆ. ಅಂದು ಸಭಾಪತಿ ಅವರು ಅವಕಾಶ ನೀಡಿದಾಗ ನೋಟಿಸ್ ನೀಡಿದ್ದವರು ಅವಿಶ್ವಾಸ ಗೊತ್ತುವಳಿ ಮಂಡನೆಗೆ ಅವಕಾಶ ಕೇಳಬೇಕಾಗುತ್ತದೆ. ಆ ಸಂದರ್ಭದಲ್ಲಿ ಕನಿಷ್ಠ 10 ಮಂದಿ ಬೆಂಬಲ ನೀಡಬೇಕಾಗುತ್ತದೆ. ಆನಂತರ ಸಭಾಪತಿ ಸ್ಥಾನದಲ್ಲಿರುವವರ ವಿರುದ್ಧ ಅವಿಶ್ವಾಸ ಮಂಡಿಸಲು ಅವಕಾಶ ಲಭಿಸುತ್ತದೆ. ಅಲ್ಲಿಂದ 5 ದಿನಗಳ ಒಳಗಾಗಿ ಅವಿಶ್ವಾಸ ನಿರ್ಣಯ ಮಂಡಿಸಬೇಕಾಗುತ್ತದೆ.

 ಅಂದರೆ ಜೂನ್ 13ರಂದು ಸದನದಲ್ಲಿ ಪ್ರಸ್ತಾಪವಾದರೆ ನಂತರದ ಮೂರು ದಿನಗಳಲ್ಲಿ ಮಾತ್ರ ಅವಿಶ್ವಾಸ ನಿರ್ಣಯ ಮಂಡಿಸಿ ಸಭಾಪತಿ ಅವರನ್ನು ಕೆಳಗಿಳಿಸಬೇಕಾಗುತ್ತದೆ. ಏಕೆಂದರೆ, ಸದನ ಜೂನ್ 16ರಂದು ಅಂತ್ಯವಾಗುವುದರಿಂದ ಅವಿಶ್ವಾಸ ನಿರ್ಣಯ ಮಂಡನೆಗೆ ತೀರಾ ಕಡಿಮೆ ಸಮಯ ಇರುತ್ತದೆ. ಹೀಗಾಗಿ, ಕಾಂಗ್ರೆಸ್ ಮಾಡಿರುವ ಈ ಪ್ರಯತ್ನಕ್ಕೆ ಜೆಡಿಎಸ್ ಬೆಂಬಲ ನೀಡಿದರೆ ಕೇವಲ ಮೂರೇ ದಿನಗಳಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಿ ಯಶ ಸಾಧಿಸಬಹುದು. ಇಲ್ಲವಾದರೆ ಈ ಅಧಿವೇಶನದಲ್ಲಿ ಪದಚ್ಯುತಿ ಕಷ್ಟಸಾಧ್ಯ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಪರಿಷತ್ತಿನ ಒಟ್ಟು 75 ಮಂದಿ ಸದಸ್ಯ ಬಲದಲ್ಲಿ ಕಾಂಗ್ರೆಸ್ 32 ಸದಸ್ಯರನ್ನು ಹೊಂದಿದ್ದು, ಪಕ್ಷೇತರರಾದ ಬೈರತಿ ಸುರೇಶ್, ಎಂ.ಡಿ.ಲಕ್ಷ್ಮೀನಾರಾಯಣ, ವಿವೇಕರಾವ್ ಪಾಟೀಲ್ ಅವರಿಂದಾಗಿ ಕಾಂಗ್ರೆಸ್ ಬಲ 35ಕ್ಕೇರಿದೆ. ಆದರೆ ಸಭಾಪತಿ ಸೇರಿ ಬಿಜೆಪಿ 23 ಮಂದಿ ಸದಸ್ಯ ಬಲ ಹೊಂದಿದೆ. ಇನ್ನು ಜೆಡಿಎಸ್ 13 ಸದಸ್ಯರನ್ನು ಹೊಂದಿದೆ. ಇದಲ್ಲದೆ ಪಕ್ಷೇತರರಾದ ಡಿ.ಯು. ಮಲ್ಲಿಕಾರ್ಜುನ್ ಮತ್ತು ಯತ್ನಾಳ್ ಕೂಡ ಇದ್ದಾರೆ. ನಾಮ ನಿರ್ದೇಶನ ಸದಸ್ಯರು ಒಂದು ಸ್ಥಾನ ಮತ್ತು ವಿಮಲಾಗೌಡ ನಿಧನದಿಂದ ತೆರವಾಗಿರುವ ಒಂದು ಸ್ಥಾನ ಖಾಲಿ ಇದೆ. ಒಟ್ಟಾರೆ 73 ಸದಸ್ಯ ಬಲವಿದೆ. ಆದರೆ ಸಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿ ಯಶ ಸಾಧಿಸಲು ಕಾಂಗ್ರೆಸ್ಸಿಗೆ 38 ಮತ ಬೇಕಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News