ಮುಂದಿನ ಐದು ವರ್ಷಗಳಲ್ಲಿ ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆ: ಸಂತೋಷ್ ಲಾಡ್

Update: 2017-06-12 17:33 GMT

ಬೆಂಗಳೂರು, ಜೂ.12: ಮುಂದಿನ ಐದು ವರ್ಷಗಳಲ್ಲಿ ರಾಜ್ಯದಲ್ಲಿ ಬಾಲಕಾರ್ಮಿಕ ಪದ್ಧತಿಯನ್ನು ನಿರ್ಮೂಲನೆ ಮಾಡಲು ವಿವಿಧ ಕಾರ್ಯಯೋಜನೆಗಳನ್ನು ರೂಪಿಸಲಾಗಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ತಿಳಿಸಿದ್ದಾರೆ.

ಸೋಮವಾರ ಕಾರ್ಮಿಕ ಇಲಾಖೆ ನಗರದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆದ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಾಲಕಾರ್ಮಿಕ ಪದ್ಧತಿಯಲ್ಲಿ ತೊಡಗಿರುವ ಬಾಲಕರನ್ನು ಪತ್ತೆ ಮಾಡಿ, ಅವರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಕಾನೂನು ಶಾಲೆಯ ಜೊತೆಗೂಡಿ ಮೊಬೈಲ್ ಆಪ್‌ನ್ನು ಸಿದ್ಧಪಡಿಸಲಾಗುತ್ತಿದೆ ಎಂದು ತಿಳಿಸಿದರು.

ಬಾಲಕಾರ್ಮಿಕ ಹುಡುಗ ಅಥವಾ ಹುಡುಗಿ ಪತ್ತೆಯಾದ ತಕ್ಷಣ ಅವರ ವಿವರವನ್ನು ಮೊಬೈಲ್ ಆಪ್‌ನಲ್ಲಿ ಅಳವಡಿಸಲಾಗುವುದು. ನಂತರ ಆ ಬಾಲಕಾರ್ಮಿಕನ ಸಂಪೂರ್ಣ ವಿದ್ಯಾಭ್ಯಾಸ ಮುಗಿಯುವವರೆಗೆ ಮಾರ್ಗದರ್ಶನ, ವೃತ್ತಿ ಕೌಶಲ್ಯ ತರಬೇತಿ ಪಡೆಯುವವರೆಗೆ ಸಂಪರ್ಕ ಸಾಧಿಸುವ ಉದ್ದೇಶ ಹೊಂದಲಾಗಿದೆ ಎಂದು ಅವರು ಹೇಳಿದರು.

ರಾಜ್ಯದಲ್ಲಿ ಜಿಲ್ಲಾವಾರು ಬಾಲಕಾರ್ಮಿಕರನ್ನು ಪತ್ತೆ ಹಚ್ಚಲು ಸಮೀಕ್ಷೆ ನಡೆಸಲಾಗುತ್ತಿದೆ. ಯಾವ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಾಲಕಾರ್ಮಿಕರಿದ್ದಾರೆ ಎಂದು ಪತ್ತೆ ಮಾಡಿ, ಆ ಜಿಲ್ಲೆಗಳಲ್ಲಿಯೇ ಬಾಲಕಾರ್ಮಿಕ ಪುನರ್ ವಸತಿ ಕೇಂದ್ರ ಸ್ಥಾಪಿಸುವುದು ಸೇರಿದಂತೆ ಮತ್ತಿತರ ಸೌಲಭ್ಯಗಳನ್ನು ಕಲ್ಪಿಸುವ ಯೋಜನೆಯನ್ನು ಹೊಂದಲಾಗಿದೆ ಎಂದು ಅವರು ತಿಳಿಸಿದರು.

ದೇಶದಲ್ಲಿ ಶೇ.78.39ರಷ್ಟು ಬಾಲ ಕಾರ್ಮಿಕರು ಉತ್ತರ ಪ್ರದೇಶ, ಬಿಹಾರ, ರಾಜಸ್ತಾನ, ಮಧ್ಯಪ್ರದೇಶ, ಮಹಾರಾಷ್ಟ್ರ, ಆಂಧ್ರಪ್ರದೇಶ ಹಾಗೂ ಪಶ್ಚಿಮ ಬಂಗಾಳದಲ್ಲಿದೆ. ಕರ್ನಾಟಕದಲ್ಲಿ 2.16ಮಿಲಿಯನ್ ಬಾಲ ಕಾರ್ಮಿಕರನ್ನು ಹೊಂದುವ ಮೂಲಕ ಹತ್ತನೆ ಸ್ಥಾನದಲ್ಲಿದೆ ಎಂದು ಅವರು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಬೆಂಗಳೂರು ನಗರ ಜಿಲ್ಲಾ ಪಂಚಾಯತ್ ಅಧ್ಯಕ್ಷ ಮುನಿರಾಜು, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷೆ ಡಾ.ಕೃಪಾ ಅಮರ್ ಆಳ್ವ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News