ಬಿಜೆಪಿ ಯುಟರ್ನ್ ಸರಕಾರ, ಮುಂದಿನ ಪ್ರಧಾನಿ ರಾಹುಲ್‌ ಗಾಂಧಿ: ಸಿದ್ದರಾಮಯ್ಯ

Update: 2017-06-12 17:38 GMT

ಬೆಂಗಳೂರು, ಜೂ.12: ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಯುಟರ್ನ್ ಸರಕಾರ ಅಧಿಕಾರ ನಡೆಸುತ್ತಿದ್ದು, ಇವರನ್ನು ನಿಯಂತ್ರಿಸಲು ಮುಂದೆ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದು ರಾಹುಲ್ ಗಾಂಧಿ ಪ್ರಧಾನಿಯಾಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಸೋಮವಾರ ನಗರದ ಸೆಂಟ್ರಲ್ ಕಾಲೇಜಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಕೆಪಿಸಿಸಿ ಸರ್ವ ಸದಸ್ಯರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಈ ಹಿಂದೆ ನರೇಂದ್ರ ಮೋದಿ ಅವರು ಆಧಾರ್, ಜಿಎಸ್‌ಟಿ, ನರೇಗಾ ಯೋಜನೆಯನ್ನು ವಿರೋಧಿಸಿದ್ದರು. ಆದರೆ, ಈಗ ಅದನ್ನೆ ಹೊಗಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಮೋದಿಯವರ ಮೂರು ವರ್ಷದ ಕೊಡುಗೆ ಶೂನ್ಯ. ಬರೀ ಭಾಷಣ ಮಾಡಿಕೊಂಡು ತಿರುಗಾಡುತ್ತಿದ್ದಾರೆ. ಹಿಂದುತ್ವದ ಹೆಸರಿನಲ್ಲಿ ದೇಶ ಹಾಳು ಮಾಡುತ್ತಿದ್ದಾರೆ. ಆದರೆ, ಕಾಂಗ್ರೆಸ್ ಪಕ್ಷ ಎಲ್ಲ ಜಾತಿ, ಧರ್ಮದವರ ಪರವಾಗಿ ಇದೆ ಎಂದು ಮುಖ್ಯಮಂತ್ರಿ ಹೇಳಿದರು.

ಕಳೆದ ಮೂರು ವರ್ಷಗಳಲ್ಲಿ ದೇಶ ಯಾವುದೇ ಅಭಿವೃದ್ದಿ ಕಂಡಿಲ್ಲ. ಯುಪಿಎ ಸರಕಾರದ ನರೇಗಾ, ಆಧಾರ್, ಜಿಎಸ್‌ಟಿ ಸೇರಿದಂತೆ ಹಲವು ಜನಪ್ರಿಯ ಯೋಜನೆಗಳನ್ನು ಮುಂದುವರೆಸಿ, ಅದನ್ನು ತಮ್ಮ ಸಾಧನೆ ಎಂದು ಬಿಜೆಪಿ ಸರಕಾರ ಸುಳ್ಳು ಹೇಳುತ್ತಿದೆ ಎಂದು ಅವರು ದೂರಿದರು.

ಆರಂಭದಿಂದಲೂ ಬಿಜೆಪಿಯವರು ಸಾಮಾಜಿಕ ನ್ಯಾಯದ ವಿರೋಧಿಗಳು. ಈಗ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಬಿಜೆಪಿ ನಡಿಗೆ ದಲಿತರ ಕಡೆಗೆ ಎಂದು ಹೊರಟಿದ್ದಾರೆ. ಮೀಸಲಾತಿ ಪುನರ್ ಪರಿಶೀಲನೆ ನಡೆಸಬೇಕು ಎಂದು ಆರೆಸ್ಸೆಸ್ ಹೇಳುತ್ತದೆ. ಅವರ ಕಚೇರಿಯಲ್ಲಿ ಅಂಬೇಡ್ಕರ್ ಭಾವಚಿತ್ರ ಹಾಕದವರಿಂದ ನಾವು ಪಾಠ ಕಲಿಯಬೇಕಿಲ್ಲ ಎಂದು ಸಿದ್ದರಾಮಯ್ಯ ತೀರುಗೇಟು ನೀಡಿದರು.

ಮಹಾತ್ಮ ಗಾಂಧೀಜಿಯವರನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಚತುರ ಬನಿಯಾ ಎಂದು ಕರೆಯುತ್ತಾರೆ. ಮಾನ, ಮರ್ಯಾದೆ ಮೂರು ಕಾಸು ಇಲ್ಲದ ಇವರು ದೇಶ ಆಳಲು ಅರ್ಹರಲ್ಲ ಎಂದು ಸಿದ್ದರಾಮಯ್ಯ ಕಿಡಿಕಾರಿದರು.

ಎಲ್ಲಾ ವರ್ಗದವರಿಗೂ ಸೌಕರ್ಯ: ದಲಿತರು, ಶೋಷಿತರು, ಶಿಕ್ಷಣ ವಂಚಿತರು ಸೇರಿದಂತೆ ಎಲ್ಲ ವರ್ಗದವರಿಗೂ ಕಾಂಗ್ರೆಸ್ ಪಕ್ಷ ಸೌಕರ್ಯಗಳನ್ನೂ ನೀಡಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಹೇಳಿದರು.

2018ರಲ್ಲಿ ಮತ್ತೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು ಜನಸಾಮಾನ್ಯರ ಕಷ್ಟಕಾರ್ಪಣ್ಯಗಳನ್ನು ಹೋಗಲಾಡಿಸಲಿದೆ. ಬಿಜೆಪಿ ಸರಕಾರ ಮೂರು ವರ್ಷಗಳ ಕಾಲ ಆಡಳಿತ ನಡೆಸಿದರೂ, ಜನರ ವಿಶ್ವಾಸಗಳಿಸುವಲ್ಲಿ ವಿಫಲವಾಗಿದೆ. ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲಪಡಿಸಿ, ದೇಶಾದ್ಯಂತ ಕಾಂಗ್ರೆಸ್ ಪಕ್ಷದ ಶಕ್ತಿಯನ್ನು ತೋರಿಸಬೇಕು ಎಂದು ಕರೆ ನೀಡಿದರು.

ಪುನರ್ ಸಂಘಟನೆಗೆ ಒತ್ತು:   ಪಕ್ಷದ ಪುನರ್ ಸಂಘಟನೆಗೆ ರಾಹುಲ್‌ಗಾಂಧಿ ಹೆಚ್ಚು ಒತ್ತು ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಎಲ್ಲ್ಲ ರಾಜ್ಯಗಳಿಗೂ ಭೇಟಿ ನೀಡಿ ದೇಶದಲ್ಲಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಬೇಕೆಂದು ಮುಂದಾಗಿರುವ ರಾಹುಲ್ ಗಾಂಧಿ ಅವರಿಗೆ ಸಂಪೂರ್ಣ ಸಹಕಾರ ನೀಡಲಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಹೇಳಿದರು.

ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ದೇಶದಲ್ಲಿ ಯಾವ ರೀತಿಯಲ್ಲಿ ಕಾಂಗ್ರೆಸ್ ಪಕ್ಷವನ್ನು ಆಡಳಿತಕ್ಕೆ ತಂದರೋ, ಅದೇ ರೀತಿಯಲ್ಲಿ ಕಾಂಗ್ರೆಸ್ ಪಕ್ಷ ಮುಂದಿನ ದಿನಗಳಲ್ಲಿ ಅಧಿಕಾರಕ್ಕೆ ಬರಲಿದೆ. ಬರೇ ಆಶ್ವಾಸನೆಗಳನ್ನಷ್ಟೆ ನೀಡಿ ರೈತರು, ಜನಸಾಮಾನ್ಯರ ವಿರುದ್ಧವಾಗಿ ಆಡಳಿತ ನಡೆಸುತ್ತಿರುವ ನರೇಂದ್ರಮೋದಿ ನೇತೃತ್ವದ ಬಿಜೆಪಿ ಸರಕಾರವನ್ನು ಕಿತ್ತೊಗೆಯಬೇಕೆಂದು ಅವರು ಕರೆ ನೀಡಿದರು.

ರಾಹುಲ್ ಬೆಂಗಳೂರಿನಿಂದ ಸ್ಪರ್ಧಿಸಬೇಕು: ಕೆಪಿಸಿಸಿ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷರೂ ಆಗಿರುವ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಮಾತನಾಡಿ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಬೆಂಗಳೂರಿನಿಂದ ಸ್ಪರ್ಧಿಸಬೇಕೆಂಬುದು ನಮ್ಮ ಆಶಯ ಎಂದರು.

2018ರಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂಬ ಭರವಸೆ ಇದೆ. 2019ರಲ್ಲಿ ದೇಶದಲ್ಲಿ ಕಾಂಗ್ರೆಸ್ ಸರಕಾರ ಅದಿಕಾರಕ್ಕೆ ಬಂದು ಸಮಾಜದಲ್ಲಿ ಬಹಳಷ್ಟು ಸುಧಾರಣೆಗಳಾಗಲಿವೆ. ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಮುಖ್ಯ.ಬಿಜೆಪಿ ಸರಕಾರ ಆಡಳಿತದಲ್ಲಿ ವೈಫಲ್ಯವನ್ನು ಕಂಡಿದೆ. ಈ ಹಿಂದೆ ಚಿಕ್ಕಮಗಳೂರಿನಿಂದ ಇಂದಿರಾಗಾಂಧಿ ಸ್ಪರ್ಧಿಸಿದ್ದರು. ಬಳ್ಳಾರಿಯಿಂದ ಸೋನಿಯಾ ಗಾಂಧಿ ಸ್ಪರ್ಧಿಸಿದ್ದರು. ಅದೇ ರೀತಿ, ಬೆಂಗಳೂರಿನಿಂದ ರಾಹುಲ್‌ಗಾಂಧಿ ಸ್ಪರ್ಧಿಸಬೇಕು ಎಂಬುದು ನಮ್ಮ ಇಚ್ಛೆಯಾಗಿದೆ ಎಂದು ಅವರು ವಿವರಿಸಿದರು. 

‘ವ್ಯಕ್ತಿ ಪೂಜೆ ಬಿಟ್ಟು, ಪಕ್ಷ ಕಟ್ಟಿ’

‘ವ್ಯಕ್ತಿಪೂಜೆ ಮಾಡುವುದನ್ನು ಬಿಟ್ಟು ಪಕ್ಷ ಕಟ್ಟುವುದಕ್ಕೆ ಅವಕಾಶ ನೀಡಬೇಕು. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ದೇಶದಲ್ಲಿ ಶಾಂತಿ, ನೆಮ್ಮದಿಯಿಂದ ಜನ ಬದುಕಬಹುದಾಗಿದೆ. ಇಲ್ಲ ಸಲ್ಲದ ಯೋಜನೆಗಳನ್ನು ಜಾರಿ ಮಾಡಿ ಜನಸಾಮಾನ್ಯರಿಗೆ ತೊಂದರೆ ನೀಡುವ ಬಿಜೆಪಿ ಪಕ್ಷದ ಆಡಳಿತ ವೈಖರಿ ಸರಿಯಿಲ್ಲ’
-ಡಿ.ಕೆ.ಶಿವಕುಮಾರ್, ಇಂಧನ ಸಚಿವ

‘ಪ್ರಜಾಪ್ರಭುತ್ವ ಇರುವಲ್ಲಿ ಭಿನ್ನಮತ ಇರುವುದು ಸಾಮಾನ್ಯ. ಕಾಂಗ್ರೆಸ್‌ನಲ್ಲೂ ಭಿನ್ನಮತವಿದೆ. ನಾವು ವೇಣುಗೋಪಾಲ್ ಜೊತೆ ಈ ಬಗ್ಗೆ ಚರ್ಚಿಸಿ ಎಲ್ಲವನ್ನೂ ಸರಿ ಮಾಡಿದ್ದೇವೆ. ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಬೇಕು. ರಾಹುಲ್‌ಗಾಂಧಿ ಅವರನ್ನು ಪ್ರಧಾನ ಮಂತ್ರಿಯನ್ನಾಗಿ ಮಾಡಬೇಕು’
-ಸಿದ್ದರಾಮಯ್ಯ,ಮುಖ್ಯಮಂತ್ರಿ


‘ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ’ ಕಾಂಗ್ರೆಸ್‌ನಲ್ಲಿ ಅತ್ಯಂತ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುವ ಹಲವಾರು ನಾಯಕರಿದ್ದಾರೆ. ಮೋದಿ ನೇತೃತ್ವದ ಬಿಜೆಪಿ ಸರಕಾರ ತಾವು ಜನತೆಗೆ ಬರೆ ಆಶ್ವಾಸನೆಗಳನ್ನು ನೀಡುತ್ತಿದ್ದು, ಜನಸಾಮಾನ್ಯರ ಶೇ.25ರಷ್ಟು ಬೇಡಿಕೆಗಳನ್ನೂ ಈಡೇರಿಸಲಿಲ್ಲ. ಇದನ್ನು ಕಾಂಗ್ರೆಸ್ ಪಕ್ಷ ಉಪಯೋಗಿಸಿಕೊಳ್ಳಬೇಕು. ಅದೇರೀತಿ, ರಾಜ್ಯ ಸರಕಾರ ಶೇ.95 ರಷ್ಟು ಈಡೇರಿಸಿರುವ ಆಶ್ವಾಸನೆಗಳ ಬಗ್ಗೆ ಪ್ರತಿಯೊಬ್ಬರಿಗೆ ತಿಳಿಸಬೇಕು’ 
-ಕೆ.ಸಿ ವೇಣುಗೋಪಾಲ್,ರಾಜ್ಯ ಕಾಂಗ್ರೆಸ್ ಉಸ್ತುವಾರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News