20 ತಿಂಗಳಲ್ಲಿ ಬಯಲು ಸೀಮೆ ಜಿಲ್ಲೆಗಳಿಗೆ ನೀರು: ಎಂ.ಬಿ.ಪಾಟೀಲ್
ಬೆಂಗಳೂರು, ಜೂ.13: ಎತ್ತಿನಹೊಳೆ ಯೋಜನೆ ಮೂಲಕ ಮುಂದಿನ 18-20 ತಿಂಗಳಲ್ಲಿ ಬಯಲು ಸೀಮೆ ಜಿಲ್ಲೆಗಳ ಕೆರೆಗಳಿಗೆ ನೀರು ಹರಿಸುವುದಾಗಿ ಜಲ ಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಭರವಸೆ ನೀಡಿದ್ದಾರೆ.
ಮಂಗಳವಾರ ವಿಧಾನಸಭೆಯಲ್ಲಿ ನಿಯಮ 69ರಡಿ ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಿಗೆ ಎತ್ತಿನಹೊಳೆ ಯೋಜನೆಯಿಂದ ಶಾಶ್ವತ ಕುಡಿಯುವ ನೀರು ಸೌಲಭ್ಯ ಒದಗಿಸುವ ಸಂಬಂಧ ಜೆಡಿಎಸ್ ಶಾಸಕರು ನಡೆಸಿದ ಚರ್ಚೆಗೆ ಅವರು ಉತ್ತರಿಸಿದರು.
ರಾಜ್ಯ ಸರಕಾರವು ಬಯಲುಸೀಮೆ ಜಿಲ್ಲೆಗಳಿಗೆ ಶಾಶ್ವತ ಕುಡಿಯುವ ನೀರು ಸೌಲಭ್ಯ ಒದಗಿಸುವ ಉದ್ದೇಶದಿಂದ ಆದ್ಯತೆಯ ಮೇರೆಗೆ ಈ ಯೋಜನೆಯನ್ನು ಕೈಗೆತ್ತಿಕೊಂಡಿದೆ. ಹಣಕಾಸಿನ ತೊಂದರೆಯಿಲ್ಲ, ಕಾಮಗಾರಿಯು ಭರದಿಂದ ಸಾಗುತ್ತಿದ್ದು, ಯೋಜನೆಯ ಅನುಷ್ಠಾನದಲ್ಲಿ ವಿಳಂಬವಾಗುವುದಿಲ್ಲ ಎಂದು ಅವರು ಹೇಳಿದರು.
ಸದಾನಂದಗೌಡರು ಮುಖ್ಯಮಂತ್ರಿಯಾಗಿದ್ದಾಗ ಎತ್ತಿನ ಹೊಳೆ ಯೋಜನೆಗೆ ಚಾಲನೆ ನೀಡಲಾಯಿತು. ಆನಂತರ ಜಗದೀಶ್‌ಶೆಟ್ಟರ್ ಮುಖ್ಯಮಂತ್ರಿಯಾದರು.
ಆದರೆ, ನಮ್ಮ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಈ ಯೋಜನೆಗೆ ವೇಗ ಸಿಕ್ಕಿದೆ ಎಂದು ಎಂ.ಬಿ.ಪಾಟೀಲ್ ತಿಳಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ಸದಸ್ಯ ವೈ.ಎ.ನಾರಾಯಣಸ್ವಾಮಿ, ವಾರಾಹಿ ಯೋಜನೆಯನ್ನು 9 ಕೋಟಿ ರೂ.ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿತ್ತು. ಆದರೆ, ಯೋಜನೆ ಪೂರ್ಣಗೊಳ್ಳುವಾಗ 550 ಕೋಟಿ ರೂ.ಗಳಿಗೆ ತಲುಪಿತು. ಇದೀಗ ನೀವು ಎತ್ತಿನಹೊಳೆ ಯೋಜನೆಗೆ 12 ಸಾವಿರ ಕೋಟಿ ರೂ.ಗಳನ್ನು ಮೀಸಲಿಟ್ಟಿದ್ದೀರಾ, ಯಾವ ಕಾಲಮಿತಿಯಲ್ಲಿ ಈ ಯೋಜನೆ ಪೂರ್ಣಗೊಳ್ಳಲಿದೆ ಎಂಬುದು ನಮ್ಮ ನಿರೀಕ್ಷೆಯಾಗಿದೆ ಎಂದರು.
ಎತ್ತಿನ ಹೊಳೆ ಯೋಜನೆಯಲ್ಲದೆ ಪರ್ಯಾಯ ನೀರಿನ ಲಭ್ಯತೆ ಬಗ್ಗೆ ಕೇಂದ್ರ ಜಲ ಆಯೋಗದ ಮಾಜಿ ಅಧ್ಯಕ್ಷ ಎ.ಕೆ.ಬಜಾಜ್ ನೇತೃತ್ವದಲ್ಲಿ ಸಮಿತಿ ರಚಿಸಿದ್ದು, ಜು.7ರೊಳಗೆ ವರದಿ ನೀಡುವಂತೆ ಸೂಚಿಸಲಾಗಿದೆ. ಕೆಸಿ ವ್ಯಾಲಿ, ಮೇಕೆದಾಟು, ಲಿಂಗನಮಕ್ಕಿ ಸೇರಿದಂತೆ ಹಲವು ಮೂಲಗಳನ್ನು ಪರಿಶೀಲಿಸಲಾಗುತ್ತಿದ್ದು, ಎತ್ತಿನ ಹೊಳೆ ಯೋಜನೆಯನ್ನು ತ್ವರಿತಗತಿಯಲ್ಲಿ ಅನುಷ್ಠಾನಗೊಳಿಸಲು ಸಮನ್ವಯ ಸಮಿತಿಯನ್ನ್ನು ರಚಿಸಲಾಗಿದೆ ಎಂದು ಎಂ.ಬಿ.ಪಾಟೀಲ್ ವಿವರಿಸಿದರು.
ಅರಸೀಕೆರೆಯ ಜೆಡಿಎಸ್ ಶಾಸಕ ಕೆ.ಎಂ.ಶಿವಲಿಂಗೇಗೌಡ ಮಾತನಾಡಿ, ರಾಜ್ಯ ಸರಕಾರವು ಇನ್ನುಳಿದ 10 ತಿಂಗಳಲ್ಲಿ ಎತ್ತಿನ ಹೊಳೆ ಯೋಜನೆಗೆ 12 ಸಾವಿರ ಕೋಟಿ ರೂ.ಗಳನ್ನು ಖರ್ಚು ಮಾಡಲು ಸಾಧ್ಯವೇ. 3 ವರ್ಷದಿಂದಲೂ ಟೆಂಡರ್ ಕರೆಯುತ್ತಾ ಬರುತ್ತಿದ್ದಾರೆ. ಆದರೆ, ನೀರು ಮಾತ್ರ ಬಂದಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯವರು ಮೀನುಗಳು ಸಾಯುತ್ತವೆ ಎಂದು ಎತ್ತಿನಹೊಳೆ ಯೋಜನೆಗೆ ವಿರೋಧಿಸುತ್ತಿದ್ದಾರೆ. ಆದರೆ, ನಮ್ಮ ಭಾಗದಲ್ಲಿ ಜನ ಸಾಯುತ್ತಿರುವುದು ಅವರಿಗೆ ಕಾಣುತ್ತಿಲ್ಲವೇ ಎಂದು ತರಾಟೆಗೆ ತೆಗೆದುಕೊಂಡರು.