ಮನುಷ್ಯನ ರಕ್ಷಣೆಗೆ ಮೊದಲು ಪ್ರಾಶಸ್ತ್ಯ: ಕಾಗೋಡು ತಿಮ್ಮಪ್ಪ
ಬೆಂಗಳೂರು, ಜೂ. 13: ‘ಕೆಲವರು ಸ್ವರ್ಗದಲ್ಲೆ ಇದ್ದಾರೆ. ಅವರಿಗೆ ಮನುಷ್ಯರು ಕಾಣುವುದಿಲ್ಲ. ಮನುಷ್ಯನ ರಕ್ಷಣೆಗೆ ಮೊದಲು ಪ್ರಾಶಸ್ತ್ಯ ನೀಡಬೇಕು. ಆದರೆ, ಅವರಿಗೆ ಆನೆ, ಹುಲಿ, ಅರಣ್ಯವೇ ಕಾಣಿಸುತ್ತದೆ’ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ, ಅರಣ್ಯ ಇಲಾಖೆ ಅಧಿಕಾರಿ ಕಾರ್ಯವೈಖರಿಗೆ ತೀವ್ರ ಆಕ್ಷೇಪ ವ್ಯಕ್ತಪಡಿದರು.
ಮಂಗಳವಾರ ವಿಧಾನಸಭೆಯಲ್ಲಿ ಬೇಡಿಕೆ ಮೇಲಿನ ಚರ್ಚೆಯ ವೇಳೆ ಬಿಜೆಪಿ ಸದಸ್ಯ ಕೆ.ಜಿ.ಬೋಪಯ್ಯ ಪ್ರಸ್ತಾಪಿಸಿದ ವಿಷಯಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಅರಣ್ಯ ಇಲಾಖೆ ಅಧಿಕಾರಿಗಳು ಒಂದು ರೀತಿಯಲ್ಲಿ ತಾವು ಸಾಮ್ರಾಜ್ಯಶಾಹಿಗಳು ಎಂಬ ಭಾವನೆಯಲ್ಲಿದ್ದಾರೆಂದು ಪರೋಕ್ಷವಾಗಿ ಟೀಕಿಸಿದರು.
ಸೊಪ್ಪಿನ ಬೆಟ್ಟ, ಕಾನು, ದೇವರ ಕಾಡು, ಕುಮ್ಕಿ, ಭಾಣೆ ಸೇರಿದಂತೆ ಇನ್ನಿತರ ಪ್ರದೇಶಗಳ ಮೇಲೆ ಅಧಿಕಾರ ಹೊಂದಿರುವ ಮಲೆನಾಡು ಭಾಗದ ಜನರ ಬದುಕಿನ ರಕ್ಷಣೆಗೆ ರಾಜ್ಯ ಸರಕಾರ ಕ್ರಮ ವಹಿಸಲಿದೆ ಎಂದ ಅವರು, ನೈಸರ್ಗಿಕ ಸಂಪತ್ತಿನ ರಕ್ಷಣೆಯ ಜೊತೆಗೆ ಮನುಷ್ಯರ ಉಳಿವಿಗೂ ಕ್ರಮ ಕೈಗೊಳ್ಳಲಾಗುವುದು ಎಂದರು.
ನಾವು ಕಾಡಿನಲ್ಲಿ ಹುಟ್ಟಿದ್ದೇವೆ. ಮರ ಕಡಿಯಲೇಬೇಕು. ಆದರೆ, ಅಗತ್ಯಕ್ಕಿಂತ ಜಾಸ್ತಿ ಮರ ಎಂದೂ ಕಡಿದಿಲ್ಲ. ಈ ಹಿಂದೆ ಅರಣ್ಯ ಪ್ರದೇಶ ವಿಸ್ತಾರವಾಗಿತ್ತು, ಇತ್ತೀಚಿನ ದಿನಗಳಲ್ಲಿ ಅರಣ್ಯ ಪ್ರದೇಶ ಜನಸಂಖ್ಯೆ ಹೆಚ್ಚಳದ ಹಿನ್ನೆಲೆಯಲ್ಲಿ ಕಿರಿದಾಗಿದೆ. ಹೀಗಾಗಿ ವನ್ಯ ಪ್ರಾಣಿಗಳು ನೀರು ಮತ್ತು ಮೇವು ಅರಸಿ ನಾಡಿಗೆ ಬರುತ್ತಿವೆ ಎಂದರು.
ಅಧಿಕಾರಿಗಳ ವಿರುದ್ಧ ಕ್ರಮ: ಅರಣ್ಯ ಹಕ್ಕು ಕಾಯ್ದೆಯನ್ವಯ ಹೊಸ ಆದೇಶ ಹೊರಡಿಸಿದ್ದು, ತ್ವರಿತಗತಿ ಸಮಿತಿ ಸಭೆ ನಡೆಸುವ ಜವಾಬ್ದಾರಿ ಅಧಿಕಾರಿಗಳ ಮೇಲಿದೆ. ಒಂದು ವೇಳೆ ತನ್ನ ಹೊಣೆಯನ್ನು ನಿರ್ವಹಿಸದ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಕಾಗೋಡು ತಿಮ್ಮಪ್ಪ ಎಚ್ಚರಿಕೆ ನೀಡಿದರು.