ಪದವಿಯ ಹಂಗಿಲ್ಲದೆ ತಂತ್ರಜ್ಞಾನ ಕ್ಷೇತ್ರದಲ್ಲಿ ದಿಗ್ಗಜರಾದವರು

Update: 2017-06-14 11:37 GMT

ಹೆಚ್ಚಿನವರ ಮುಖ್ಯ ಆದ್ಯತೆಯೇ ಉತ್ತಮ ಶಿಕ್ಷಣ. ಒಳ್ಳೆಯ ಉದ್ಯೋಗ ಮತ್ತು ಜೀವನದಲ್ಲಿ ಯಶಸ್ವಿಯಾಗಲು ಮೂಲಭೂತ ಅಗತ್ಯಗಳಲ್ಲಿ ಕಾಲೇಜು ಪದವಿಯೂ ಒಂದು ಎಂದು ಗಟ್ಟಿಯಾಗಿ ನಂಬಿದವರು ನಾವು. ಆದರೆ ಇದು ಎಲ್ಲ ಸಂದರ್ಭಗಳ ಲ್ಲಿಯೂ ಅನ್ವಯಿಸಬೇಕಿಲ್ಲ.

ವಿಶೇಷವಾಗಿ ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸದಾದ ಮತ್ತು ವಿಭಿನ್ನವಾದ ಏನನ್ನೋ ಸೃಷ್ಟಿಸಿ ಈ ಜಗತ್ತನ್ನೇ ಬಿರುಗಾಳಿಯ ವೇಗದಲ್ಲಿ ಆವರಿಸಿಕೊಂಡ ಪ್ರತಿಭಾನ್ವಿತರಿದ್ದಾರೆ. ಬಿಲಿಯಗಟ್ಟಲೆ ಡಾಲರ್‌ಗಳನ್ನು ಸಂಪಾದಿಸಿರುವ ಇವರು ಆಧುನಿಕ ಇತಿಹಾಸದಲ್ಲಿ ತಮ್ಮ ಹೆಸರುಗಳನ್ನು ಚಿರಸ್ಥಾಯಿಯಾಗಿಸಿದ್ದಾರೆ. ಕಾಲೇಜು ಪದವಿಯಿಲ್ಲದಿದ್ದರೂ ತಂತ್ರಜ್ಞಾನ ಕ್ಷೇತ್ರದಲ್ಲಿ ದಿಗ್ಗಜಗಳಾಗಿರುವ ಇಂತಹ ಒಂಭತ್ತು ಪ್ರತಿಭೆಗಳು ಇಲ್ಲಿವೆ.

ಸ್ಟೀವ್ ಜಾಬ್ಸ್

ಸ್ಟೀವ್ ಜಾಬ್ಸ್ 1972ರಲ್ಲಿ ತನ್ನ 19ನೇ ವಯಸ್ಸಿನಲ್ಲೇ ರೀಡ್ ಕಾಲೇಜಿನಲ್ಲಿ ವಿದ್ಯಾಭ್ಯಾಸವನ್ನು ಅರ್ಧಕ್ಕೇ ಕೈಬಿಟ್ಟಿದ್ದರು. ತಂತ್ರಜ್ಞಾನದ ಬಗ್ಗೆ ಅಪಾರ ಒಲವು ಹೊಂದಿದ್ದ ಜಾಬ್ಸ್ ಬಳಿಕ ಐಫೋನ್, ಐಪಾಡ್ ಮತ್ತು ಮ್ಯಾಕ್‌ಗಳಂತಹ ವಿನೂತನ ಉತ್ಪನ್ನಗಳನ್ನು ಸೃಷ್ಟಿಸುತ್ತಲೇ ಹೋದರು. ಜಾಬ್ಸ್ ಇಂದು ಇಲ್ಲವಾದರೂ ಅವರು ಸ್ಥಾಪಿಸಿದ್ದ ಆ್ಯಪಲ್ ಸಂಸ್ಥೆ ಇಂದಿಗೂ ತನ್ನ ಮೇರುಸ್ಥಾನವನ್ನು ಯಾರಿಗೂ ಬಿಟ್ಟು ಕೊಟ್ಟಿಲ್ಲ. ಎಲ್ಲ ಕಾಲದ ಲ್ಲಿಯೂ ಅತ್ಯಂತ ಹೆಚ್ಚು ಪ್ರಿತಿಪಾತ್ರ ಸಿಇಒ ಆಗಿದ್ದ ಜಾಬ್ಸ್ ಅನಾರೋಗ್ಯದಿಂದಾಗಿ ಹುದ್ದೆಯನ್ನು ತೊರೆದಿದ್ದರು.

ಬಿಲ್ ಗೇಟ್ಸ್

 ಮೈಕ್ರೋ ಸಾಫ್ಟ್‌ನ ಸಹಸ್ಥಾಪಕ ಹಾಗೂ ಹಾಲಿ ವಿಶ್ವದ ಅತ್ಯಂತ ಶ್ರೀಮಂತ ಬಿಲ್ ಗೇಟ್ಸ್ 1975ರಲ್ಲಿ ತನ್ನ 20ರ ಹರೆಯದಲ್ಲಿ ಓದಿಗೊಂದು ದೀರ್ಘ ನಮಸ್ಕಾರ ಹಾಕಿ ಹಾರ್ವರ್ಡ್ ವಿವಿಯಿಂದ ಹೊರಬಿದ್ದಿದ್ದರು. ಪಾಲ್ ಅಲೆನ್ ಜೊತೆ ಅವರು ಹುಟ್ಟು ಹಾಕಿದ್ದ ಮೈಕ್ರೋಸಾಫ್ಟ್ ಇಂದು ವಿಶ್ವದ ಅತ್ಯಂತ ದೊಡ್ಡ ಸಾಫ್ಟ್‌ವೇರ್ ಕಂಪನಿಯಾಗಿ ದು,್ದ ಕಂಪ್ಯೂಟಿಂಗ್ ಸಾಧನಗಳಿಂದ ಹಿಡಿದು ಆಪರೇಟಿಂಗ್ ಸಿಸ್ಟಮ್‌ಗಳವರೆಗೆ ಪ್ರತಿಯೊಂದನ್ನೂ ತಯಾರಿಸುತ್ತಿದೆ.

ಮಾರ್ಕ್ ಝುಕರ್‌ಬರ್ಗ್

ಫೇಸ್‌ಬುಕ್ ಅನ್ನು ಹುಟ್ಟುಹಾಕಲು ಝುಕರ್‌ಬರ್ಗ್ ಹಾರ್ವರ್ಡ್ ಶಿಕ್ಷಣವನ್ನು ಅರ್ಧಕ್ಕೇ ಮೊಟಕುಗೊಳಿಸಿದ್ದು ನಿಮಗೆ ಗೊತ್ತಿರಬಹುದು,ಆದರೆ ಅವರಿಲ್ಲದೆ ಈ ಪಟ್ಟಿ ಪೂರ್ಣಗೊಳ್ಳುವುದಿಲ್ಲ. ಫೇಸ್‌ಬುಕ್ ಮೇಲೆ ಗಮನ ಹರಿಸಲೆಂದೇ ತನ್ನ 20ನೇ ವಯಸ್ಸಿನಲ್ಲಿಯೇ ಕಾಲೇಜು ಬಿಟ್ಟಿದ್ದ ಅವರು 2004ರಿಂದ ಫೇಸ್‌ಬುಕ್ ಸಿಇಒ ಆಗಿದ್ದಾರೆ. ಅದು ಇಂದು ವಿಶ್ವದ ಅತ್ಯಂತ ಬೃಹತ್ ಸಾಮಾಜಿಕ ಮಾಧ್ಯಮ ಜಾಲವಾಗಿದೆ.

ಟ್ರೇವಿಸ್ ಕ್ಯಾಲನಿಕ್

 ಟ್ರೇವಿಸ್ ಕ್ಯಾಲನಿಕ್ ನಾವು ಕ್ಯಾಬ್‌ಗಳನ್ನು ಬುಕ್ ಮಾಡುವ ವಿಧಾನವನ್ನೇ ಬದಲಿಸಿದ ವ್ಯಕ್ತಿ. ಉಬೆರ್‌ನ ಸಹಸ್ಥಾಪಕ ಹಾಗೂ ಸಿಇಒ ಕ್ಯಾಲನಿಕ್ 1998ರಲ್ಲಿ ತನ್ನ 21ರ ಹರೆಯದಲ್ಲಿ ಕಾಲೇಜಿಗೆ ಶರಣು ಹೊಡೆದಿದ್ದರು. ಅವರು ಉಬೆರ್ ಸ್ಥಾಪಿಸಿದ್ದು 2009ರಲ್ಲಿ. ಅದಕ್ಕೂ ಮುನ್ನ ಡ್ಯಾನ್ ರಾಡ್ರಿಗಸ್ ಅವರ ಸ್ಕೋರ್ ಇಂಕ್ ಸ್ಥಾಪನೆಗೆ ನೆರವಾಗಿದ್ದ ಅವರು ಬಳಿಕ ಮೈಕೇಲ್ ಟಾಡ್ ಜೊತೆ ಸೇರಿ ಸ್ವಂತದ್ದಾದ ರೆಡ್ ಸ್ವೂಷ್ ಆರಂಭಿಸಿದ್ದರು.

ಮೈಕೇಲ್ ಡೆಲ್

ಪಿಸಿಗಳು,ಲ್ಯಾಪ್‌ಟಾಪ್‌ಗಳು ಮತ್ತು ಸರ್ವರ್‌ಗಳಿಗೆ ಸಂಬಂಧಿಸಿದಂತೆ ಡೆಲ್ ವಿಶ್ವಖ್ಯಾತಿಯ ಬ್ರಾಂಡ್ ಆಗಿದೆ. ಆದರೆ ಈ ಕಂಪನಿಯ ಹಿಂದಿರುವ ಹೆಸರು-ಮೈಕೇಲ್ ಡೆಲ್ ಬಗ್ಗೆ ಎಲ್ಲರಿಗೂ ಗೊತ್ತಿಲ್ಲ. ಕಾಲೇಜು ಓದಿಗಾಗಿ ಟೆಕ್ಸಾಸ್ ವಿವಿಗೆ ಸೇರಿದ್ದ ಅವರು ಮೊದಲ ವರ್ಷದಲ್ಲಿಯೇ ಬೇಸತ್ತು ಹೊರಬಿದ್ದಿದ್ದರು. ಕಾಲೇಜಿನಲ್ಲಿ ಜೀವಶಾಸ್ತ್ರವನ್ನು ಆಯ್ಕೆ ಮಾಡಿಕೊಂಡಿದ್ದರಾದರೂ ತನ್ನ ನಿಜವಾದ ಆಸಕ್ತಿಯಿರುವುದು ಕಂಪೂಟರ್‌ಗಳಲ್ಲಿ ಎನ್ನುವುದನ್ನು ಅವರು ಅರ್ಥ ಮಾಡಿಕೊಂಡಿದ್ದರು. 1984ರಲ್ಲಿ ಡೆಲ್ ಕಂಂಪ್ಯೂಟರ್ ಕಾರ್ಪೊರೇಷನ್ ಸ್ಥಾಪಿಸಿದ ಅವರು ಫಾರ್ಚ್ಯೂನ್ 500 ಪಟ್ಟಿಯಲ್ಲಿ ಅತ್ಯಂತ ಕಿರಿಯ ಸಿಇಒ ಸ್ಥಾನವನ್ನು ಅಲಂಕರಿಸಿದ್ದರು.

ಲ್ಯಾರಿ ಎಲಿಸನ್

ಒರಾಕಲ್‌ನ ಸಹಸ್ಥಾಪಕ ಲ್ಯಾರಿ ಎಲಿಸನ್ ತನ್ನ 20ರ ಹರೆಯದಲ್ಲಿ ಶಿಕ್ಷಣವನ್ನು ತೊರೆದು ಕೆಲಸದತ್ತ ಗಮನ ಹರಿಸಿದ್ದರು. ತನ್ನ ದತ್ತುತಾಯಿ ತೀರಿಕೊಂಡಾಗ ಅವರು ಮೊದಲ ಬಾರಿ ಕಾಲೇಜು ತೊರೆದಿದ್ದರು. ಬಳಿಕ ಚಿಕಾಗೋ ವಿವಿಗೆ ಸೇರಿದ್ದರಾದರೂ ಅಲ್ಲಿಂದಲೂ ಅರ್ಧಕ್ಕೆ ಹೊರಬಿದ್ದಿದ್ದರು. 1977ರಲ್ಲಿ ಅವರು ಒರಾಕಲ್ ಹುಟ್ಟು ಹಾಕಿದ್ದರು.

ಜಾನ್ ಕೋಮ್

ವಿಶ್ವದಲ್ಲಿಂದು ಅತ್ಯಂತ ಜನಪ್ರಿಯ ಇನ್‌ಸ್ಟಂಟ್ ಮೆಸೇಜಿಂಗ್ ಆ್ಯಪ್ ಆಗಿರುವ ವಾಟ್ಸ್ ಆ್ಯಪ್‌ನ ಸೃಷ್ಟಿಕರ್ತ ಇದೇ ಜಾನ್ ಕೋಮ್. ಯಾಹೂದಲ್ಲಿ ಕೆಲಸ ಮಾಡಲು ತನ್ನ ಓದನ್ನು ಅರ್ಧಕ್ಕೇ ಬಿಟ್ಟಿದ್ದ ಅವರು ವಾಟ್ಸ್ ಆ್ಯಪ್‌ನ್ನು ಹುಟ್ಟುಹಾಕುವ ಮುನ್ನ ಒಂಭತ್ತು ವರ್ಷಗಳ ಕಾಲ ಅಲ್ಲಿ ದುಡಿದಿದ್ದರು.

ಜಾಕ್ ಡೊರ್ಸೆ

ಟ್ವಿಟರ್‌ನ ಹಾಲಿ ಸಿಇಒ ಹಾಗೂ ಸ್ಥಾಪಕರಲ್ಲೋರ್ವರಾಗಿರುವ ಜಾಕ್ ಮಿಸ್ಸೂರಿ ಯುನಿವರ್ಸಿಟಿ ಆಫ್ ಸೈನ್ಸ್ ಆ್ಯಂಡ್ ಟೆಕ್ನಾಲಜಿ ಸೇರಿದ್ದು ಬಳಿಕ ಅಲ್ಲಿಂದ ನ್ಯೂಯಾರ್ಕ್ ವಿವಿಗೆ ವರ್ಗಾವಣೆ ಪಡೆದಿದ್ದರು. ಟ್ವಿಟರ್ ಸ್ಥಾಪಿಸಲು ಕೊನೆಗೂ ಕಾಲೇಜನ್ನು ಅರ್ಧಕ್ಕೆ ಬಿಟ್ಟಿದ್ದರು.

ಇವಾನ್ ವಿಲಿಯಮ್ಸ್

ಟ್ವಿಟರ್‌ನ ಸಹಸ್ಥಾಪಕರಲ್ಲೋರ್ವರಾಗಿರುವ ಇವಾನ್ ಅದಕ್ಕೂ ಮುನ್ನ ಪಾಡ್‌ಕಾಸ್ಟಿಂಗ್ ಕಂಪನಿ ಓಡಿಯೊದ ಸಹಸ್ಥಾಪಕರಾಗಿದ್ದರು. ಕಾಲೇಜನ್ನು ಅರ್ಧಕ್ಕೆ ತೊರೆದ ಅವರು ಈಗಲೂ ಟ್ವಿಟರ್‌ನ ಆಡಳಿತ ಮಂಡಳಿಯಲ್ಲಿದ್ದಾರೆ, ಜೊತೆಗೆ 2012ರಲ್ಲಿ ಬ್ಲಾಗಿಂಗ್ ಪ್ಲಾಟ್‌ಫಾರ್ಮ್ ‘ಮೀಡಿಯಂ’ ಅನ್ನು ಸ್ಥಾಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News