×
Ad

ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೆ ಖಂಡನೆ

Update: 2017-06-14 17:43 IST

ಬೆಂಗಳೂರು, ಜೂ.14: ಕೇಂದ್ರ ಸರಕಾರ ಹತ್ಯೆಗಾಗಿ ಜಾನುವಾರುಗಳ ಮಾರಾಟ ನಿಯಂತ್ರಣ ಕಾಯ್ದೆಯನ್ನು ಜಾರಿ ಮಾಡಲು ಮುಂದಾಗಿರುವುದನ್ನು ಕರ್ನಾಟಕ ಕೋಮು ಸೌಹಾರ್ದ ವೇದಿಕೆ ತೀವ್ರವಾಗಿ ಖಂಡಿಸಿದೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹಿರಿಯ ವಿಚಾರವಾದಿ ಎ.ಕೆ.ಸುಬ್ಬಯ್ಯ, ಈ ಕಾಯ್ದೆ ಜಾರಿ ಮಾಡಿ ಗೋಶಾಲೆಗಳ ಮೂಲಕ ವಿದೇಶಗಳಿಗೆ ಗೋ ಮಾಂಸ ರಫ್ತು ಮಾಡುವವರಿಗೆ ಉಚಿತವಾಗಿ ಗೋವುಗಳನ್ನು ಸರಬರಾಜು ಮಾಡುವ ಹುನ್ನಾರ ಮಾಡಲಾಗಿದೆ ಆರೋಪಿಸಿದರು.

ಗೋವಧೆ ನಿಷೇಧ ಮಾಡುವುದು ರಾಜ್ಯಗಳಿಗೆ ಸಂಬಂಧಿಸಿದ ವಿಷಯವಾಗಿದ್ದು, ಕೇಂದ್ರ ಸರಕಾರ ನೇರವಾಗಿ ಇದರಲ್ಲಿ ಭಾಗವಹಿಸುವಂತಿಲ್ಲ. ಆದರೆ, ಕೇಂದ್ರ ಸರಕಾರ ಅನಗತ್ಯವಾಗಿ ಇದನ್ನು ಜನರ ಮೇಲೆ ಹೇರುವ ಪ್ರಯತ್ನ ಮಾಡಲಾಗುತ್ತಿದೆ. ಈ ಮೂಲಕ ಪರೋಕ್ಷವಾಗಿ ರೈತನಿಗೆ ಸಾಕಲು ಸಾಧ್ಯವಿಲ್ಲದ ಗೋವುಗಳನ್ನು ಗೋಶಾಲೆಗೆ ಸೇರಿಸುವಂತೆ ಪ್ರೇರೇಪಿಸಲಾಗುತ್ತಿದೆ ಎಂದರು.

ಗೋಶಾಲೆಗಳಿಗೆ ಹೋಗುತ್ತಿರುವ ದನಗಳು 3-4 ದಿನಗಳಲ್ಲಿ ಕಾಣೆಯಾಗುತ್ತಿವೆ. ಆದರೆ, ಆ ದನಗಳು ಏನಾಗುತ್ತಿವೆ ಎಂಬ ಮಾಹಿತಿ ನೀಡುತ್ತಿಲ್ಲ ಎಂದ ಅವರು, ಗೋಶಾಲೆಗೆ ಹೋಗುತ್ತಿರುವ ದನಗಳನ್ನು ವಿದೇಶಗಳಿಗೆ ಗೋ ಮಾಂಸ ರಫ್ತು ಮಾಡುವ ಕಂಪೆನಿಗಳಿಗೆ ನೀಡಲಾಗುತ್ತಿದೆ. ದೇಶದ ಹಲವಾರು ಗೋ ಶಾಲೆಗಳಲ್ಲಿ ಗೋ ಮಾಂಸ, ಮೂಳೆಯನ್ನು ಪುಡಿ ಮಾಡುವ ಹಾಗೂ ಮಿಶ್ರಣ ಮಾಡುವ ಯಂತ್ರಗಳಿವೆ ಎಂದು ಅವರು ದೂರಿದರು.

ದೇಶದ ಬಹುತೇಕ ಗೋ ಶಾಲೆಗಳನ್ನು ಮಾರವಾಡಿಗಳು ಸೇರಿದಂತೆ ಮೇಲ್ಜಾತಿಯವರು ನಡೆಸುತ್ತಿದ್ದಾರೆ. ಮತ್ತೊಂದು ಕಡೆ, ದೇಶದ ಗೋ ಶಾಲೆಗಳಲ್ಲಿ ಸರಿಯಾದ ಮೇವು, ನೀರಿಲ್ಲದೆ ಜಾನುವಾರುಗಳು ಮರಣ ಹೊಂದುತ್ತಿವೆ. ಹೀಗಾಗಿ ಗೋ ಸಂರಕ್ಷಣೆಯಾಗಬೇಕಾದರೆ ಗೋ ಭಕ್ಷಣೆ ಆಗಲೇಬೇಕು. ಇಲ್ಲದಿದ್ದರೆ, ರೈತ ಮತ್ತು ಗೋವು ಎರಡೂ ಉಳಿಯಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

ವೇದಿಕೆ ಅಧ್ಯಕ್ಷ ಕೆ.ಎಲ್.ಅಶೋಕ್ ಮಾತನಾಡಿ, ಕೇಂದ್ರ ಸರಕಾರ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿ ಮಾಡುವ ಮೂಲಕ ರೈತರ ಆರ್ಥಿಕತೆಯ ಮೇಲೆ ಗದಾಪ್ರಹಾರ ಮಾಡಲು ಹೊರಟಿದೆ. ಮತ್ತೊಂದು ಕಡೆ, ದಲಿತ, ಅಲ್ಪಸಂಖ್ಯಾತರ ಆಹಾರ ಹಕ್ಕನ್ನು ದಮನ ಮಾಡಲು ವ್ಯವಸ್ಥಿತ ಸಂಚು ರೂಪಿಸಿದೆ ಎಂದು ಕಿಡಿಕಾರಿದರು.

ಕರ್ನಾಟಕ ಗೋಹತ್ಯಾ ನಿಷೇಧ ಮತ್ತು ಜಾನುವಾರು ಸಂರಕ್ಷಣಾ ಕಾಯ್ದೆ-1964 ಪ್ರಕಾರ ಹಸು ಮತ್ತು ಕರುಗಳನ್ನು ಹೊರತುಪಡಿಸಿ 12 ವರ್ಷಕ್ಕೆ ಮೇಲ್ಪಟ್ಟ ದನ, ಗೂಳಿ, ಎಮ್ಮೆ ಮತ್ತು ಕೋಣಗಳನ್ನು ಸೂಕ್ತ ಪರವಾನಿಗೆಯೊಂದಿಗೆ ಕಡಿಯಬಹುದಾಗಿದೆ. ಗುಜರಾತ್, ರಾಜಸ್ಥಾನ್, ಹರಿಯಾಣ, ಪಂಜಾಬ್ ಮತ್ತು ಹಿಮಾಚಲ ಪ್ರದೇಶ ರಾಜ್ಯಗಳಲ್ಲಿ ಹೊರತು ಪಡಿಸಿ ಬೇರೆ ಯಾವ ರಾಜ್ಯಗಳಲ್ಲಿಯೂ ಸಂಪೂರ್ಣ ಜಾನುವಾರು ಹತ್ಯಾ ನಿಷೇಧವಿಲ್ಲ.

ಆದರೆ, ಕೇಂದ್ರ ಸರಕಾರ ಹೇರಿಕೆ ಮಾಡುತ್ತಿದೆ. ಹೀಗಾಗಿ ಕೇಂದ್ರ ಸರಕಾರ ಈ ಕಾಯ್ದೆಯನ್ನು ಹಿಂಪಡೆಯಬೇಕು. ರಾಜ್ಯ ಸರಕಾರ ಸಂಪೂರ್ಣವಾಗಿ ಇದನ್ನು ತಿರಸ್ಕರಿಸಬೇಕು ಎಂದು ಅವರು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News