×
Ad

12 ಸಾಧಕರಿಗೆ ಡಿಎಸ್-ಮ್ಯಾಕ್ಸ್ ಕಲಾಶ್ರೀ ಪ್ರಶಸ್ತಿ

Update: 2017-06-14 17:47 IST

ಬೆಂಗಳೂರು, ಜೂ.14: ಡಿಎಸ್-ಮ್ಯಾಕ್ಸ್ ಪ್ರಾಪರ್ಟಿಸ್ ವತಿಯಿಂದ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ಸೇರಿದಂತೆ ಭಾರತೀಯ ಚಿತ್ರರಂಗದ 12 ಸಾಧಕರಿಗೆ ‘ಡಿಎಸ್-ಮ್ಯಾಕ್ಸ್ ಕಲಾಶ್ರೀ ನ್ಯಾಷನಲ್ ಅವಾರ್ಡ್ ಹಾಗೂ ಡಿಎಸ್-ಮ್ಯಾಕ್ಸ್ ಯೋಗಶ್ರೀ’ ಪ್ರಶಸ್ತಿ ನೀಡಲಾಗುತ್ತಿದೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಎಸ್.ಪಿ.ದಯಾನಂದ, ಸಂಸ್ಥೆಯ 12ನೆ ವಾರ್ಷಿಕೋತ್ಸವದ ನೆನಪಿನಲ್ಲಿ ಭಾರತೀಯ ಚಿತ್ರರಂಗಕ್ಕೆ ಅಪಾರವಾದ ಸೇವೆ ಸಲ್ಲಿಸಿರುವವರನ್ನು ಗುರುತಿಸಿ, ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕಲಾಶ್ರೀ ಪ್ರಶಸ್ತಿ ನೀಡಲಾಗುತ್ತಿದೆ.

ಇದೇ ವೇಳೆ ವಿಶ್ವದ ಮಟ್ಟದಲ್ಲಿ ಯೋಗ ದಿನವನ್ನು ಭಾರತ ವಿಶಿಷ್ಟವಾಗಿ ಪರಿಚಯಿಸುತ್ತಿರುವ ಹಿನ್ನೆಲೆಯಲ್ಲಿ ಇಬ್ಬರಿಗೆ ಯೋಗಶ್ರೀ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಹೇಳಿದರು.ಕಲಾಶ್ರೀ ಪ್ರಶಸ್ತಿಯನ್ನು ನಿರ್ಮಾಪಕ ಎಚ್.ಡಿ.ಗಂಗರಾಜು, ಚಿತ್ರ ನಿರ್ದೇಶಕರಾದ ಎಸ್.ನಾರಾಯಣ, ಕೆ.ಭಾಗ್ಯರಾಜ್, ಗಿರೀಶ್‌ಕಾಸರವಳ್ಳಿ, ನಟಿ ರಾಮಪ್ರಭ, ಮಾಲತಿ ಸುಧೀರ್, ಅಂಬಿಕಾ, ರೂಪಾದೇವಿ, ಕಲಾರಂಜಿನಿ, ನಟರಾದ ಲಾಲು ಅಲೆಕ್ಸ್, ರವಿಕಾಳೆ, ಸಿ.ಕಲ್ಯಾಣ್ ಹಾಗೂ ಯೋಗಶ್ರೀ ಪ್ರಶಸ್ತಿಯನ್ನು 98 ವಯಸ್ಸಿನ ಯೋಗ ಮಾಸ್ಟರ್ ತಾವೊ ಪಾರ್‌ಚಾನ್ ಲಿಂಚ್ ಹಾಗೂ ಹಿರಿಯ ಯೋಗ ಗುರು ಕೈಕೋ ಐಕಾವ ಅವರಿಗೆ ನೀಡಲಾಗುತ್ತಿದೆ.ಪ್ರಶಸ್ತಿಯು 15 ಸಾವಿರ ನಗದು ಮತ್ತು ಸ್ಮರಣ ಸಂಚಿಕೆ ಹೊಂದಿದೆ ಎಂದು ತಿಳಿಸಿದರು.

ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಜೂ.19 ರಂದು ನಗರದ ಚೌಡಯ್ಯ ಸ್ಮಾರಕ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದು, ಕಾರ್ಯಕ್ರಮದಲ್ಲಿ ಮೇಯರ್ ಜಿ.ಪದ್ಮಾವತಿ, ಶಾಸಕ ದಿನೇಶ್ ಗುಂಡೂರಾವ್, ವಿಧಾನಪರಿಷತ್ತಿನ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ, ಮಾಜಿ ಸಚಿವ ಬಸವರಾಜು ಶಿವಲಿಂಗಪ್ಪ ಹೊರಟ್ಟಿ ಸೇರಿದಂತೆ ಇನ್ನಿತರರು ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News