×
Ad

​ ಯಾದಗಿರಿ ಜಿಲ್ಲೆಯಲ್ಲಿ ಜವಳಿ ಪಾರ್ಕ್ ಸ್ಥಾಪಿಸಲು ಚಿಂತನೆ: ರುದ್ರಪ್ಪ ಲಮಾಣಿ

Update: 2017-06-14 17:56 IST

ಬೆಂಗಳೂರು, ಜೂ.14: ಹೈದ್ರಾಬಾದ್-ಕರ್ನಾಟಕದ ಯಾದಗಿರಿ ಜಿಲ್ಲೆಯಲ್ಲಿ ಜವಳಿ ಪಾರ್ಕ್‌ನ್ನು ಸ್ಥಾಪಿಸಲು ಉದ್ದೇಶಿಸಲಾಗಿದ್ದು, ಬಂಡವಾಳ ಹೂಡಿಕೆದಾರರನ್ನು ಆಕರ್ಷಿಸಲು ಪ್ರಯತ್ನ ನಡೆಸಲಾಗಿದೆ ಎಂದು ಜವಳಿ ಸಚಿವ ರುದ್ರಪ್ಪ ಮಾನಪ್ಪ ಲಮಾಣಿ ಹೇಳಿದ್ದಾರೆ.

ಬುಧವಾರ ವಿಧಾನ ಪರಿಷತ್‌ನ ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿ ಅಮರನಾಥ ಪಾಟೀಲ್ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, ಯಾದಗಿರಿ ಬಹಳಷ್ಟು ದೂರ ಇರುವುದರಿಂದ ಜವಳಿ ಪಾರ್ಕ್ ಸ್ಥಾಪನೆಗೆ ಕಂಪೆನಿಗಳು ಮುಂದೆ ಬರುತ್ತಿಲ್ಲ. ಶಾಹಿ ಕಂಪೆನಿಯೊಂದು ಆಸಕ್ತಿ ವಹಿಸಿ ಬಂಡವಾಳ ಹೂಡಿಕೆ ಮಾಡಲು ಬಂದಿದ್ದರು. ಈಗ ಹಿಂದೆ ಸರಿದಿದೆ ಎಂದು ಹೇಳಿದರು.

ಜವಳ ಪಾರ್ಕ್ ಸ್ಥಾಪನೆಗೆ ಸರಕಾರದ ವಶದಲ್ಲಿ 1 ಸಾವಿರ ಎಕರೆ ಇದೆ. ಅಲ್ಲಿ ಜವಳಿ ಪಾರ್ಕ್ ಸ್ಥಾಪಿಸಲು ಸರಕಾರ ಬಂಡವಾಳ ಹೂಡಿಕೆದಾರರನ್ನು ಆಕರ್ಷಿಸಲು ಎಲ್ಲ ಪ್ರಯತ್ನಗಳನ್ನು ನಡೆಸಲಿದೆ. ಅಗತ್ಯ ಸವಲತ್ತುಗಳನ್ನು ಒದಗಿಸಲಿದೆ ಎಂದು ಹೇಳಿದರು.

ಗುಲ್ಬರ್ಗಾದಲ್ಲೂ ಜವಳಿ ಪಾರ್ಕ್ ಸ್ಥಾಪಿಸಲಾಗುವುದು ಎಂದು ತಿಳಿಸಿದ ಸಚಿವರು, ಹರಪನಹಳ್ಳಿಯಲ್ಲಿ ಜವಳಿ ಪಾರ್ಕ್ ಸ್ಥಾಪನೆ ಯೋಜನೆಗೆ ಯಾವುದೇ ಪ್ರಸ್ತಾವನೆ ಸರಕಾರದ ಮುಂದಿಲ್ಲ ಎಂದರು.

ಜವಳಿ ಪಾರ್ಕ್ ಸ್ಥಾಪನೆ ಸಂಬಂಧ ಬಂಡವಾಳ ಹೂಡಿಕೆಯ ಶೇ.5ರಷ್ಟು ವಿಶೇಷ ಉತ್ತೇಜನ ನೀಡಲಾಗುವುದು. ಪಾರ್ಕ್‌ಗಳನ್ನು ಅಭಿವೃದ್ಧಿಪಡಿಸುವ ಕಂಪೆನಿಯು ಹೂಡಿಕೆ ಮಾಡುವ ಬಂಡವಾಳದ ಮೇಲೆ ಶೇ.40ರಷ್ಟು ಅನುದಾನವನ್ನು ಒದಗಿಸಲಿದೆ. ಕೇಂದ್ರ ಸರಕಾರದಿಂದ ಅನುದಾನ ಪಡೆದಲ್ಲಿ ರಾಜ್ಯ ಸರಕಾರದಿಂದ ಹೂಡಿಕೆಯ ಮೇಲೆ ಶೇ.10 ಅಥವಾ 10 ಕೋಟಿ ರೂ.ಗಳಷ್ಟು ಮಿತಿಗೊಳಿಸಲಾಗುವುದು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News