​ಪಠ್ಯ-ಪುಸ್ತಕ ಮುದ್ರಣದಲ್ಲಿ ಗೊಂದಲ ಇಲ್ಲ: ತನ್ವೀರ್ ಸೇಠ್

Update: 2017-06-14 12:30 GMT

ಬೆಂಗಳೂರು, ಜೂ.14: ಪಠ್ಯ-ಪುಸ್ತಕ ಮುದ್ರಣ, ಪೂರೈಕೆಯಲ್ಲಿ ಯಾವುದೇ ಗೊಂದಲವಿಲ್ಲ. ಈಗಾಗಲೇ ಶೇ.97ರಷ್ಟು ಮುದ್ರಣ ಮುಗಿದಿದ್ದು, ಶೇ.90ರಷ್ಟು ಪಠ್ಯ-ಪುಸ್ತಕ ಹಂಚಿಕೆ ಮಾಡಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ಸಮರ್ಥಿಸಿಕೊಂಡಿದ್ದಾರೆ.

ಬುಧವಾರ ವಿಧಾನಸಭೆ ಶೂನ್ಯವೇಳೆಯಲ್ಲಿ ಬಿಜೆಪಿ ಸದಸ್ಯ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರ ನೀಡಿದ ಅವರು, ಇದೇ ಮೊದಲ ಬಾರಿಗೆ ಶಾಲೆಗಳು ಆರಂಭದಲ್ಲೇ ಪಠ್ಯ-ಪುಸ್ತಕ, ಸಮವಸ್ತ್ರ, ಶೂ ಹಾಗೂ ಸೈಕಲ್ ವಿತರಣೆ ಮಾಡಲಾಗಿದೆ ಎಂದರು.

ಒಂದರಿಂದ 8ನೆ ತರಗತಿಯ ವರೆಗೆ ಪಠ್ಯ-ಪುಸ್ತಕಗಳ ಪರಿಷ್ಕರಣೆ ಮಾಡಲಾಗಿದೆ. ಪುಸ್ತಕಗಳ ಮುದ್ರಣಕ್ಕೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿದ ಬಳಿಕ ರಾಜ್ಯದಲ್ಲಿನ ಮೂರು ಕಾಗದ ಕಾರ್ಖಾನೆಗಳು ಬಾಗಿಲು ಮುಚ್ಚಿವೆ. ಹೀಗಾಗಿ ಕಾಗದ ಖರೀದಿಗೆ ಮುಂಗಡ ನೀಡಲಾಗಿತ್ತು ಎಂದರು.

ಪಠ್ಯ-ಪುಸ್ತಕ ಮುದ್ರಣ ಮತ್ತು ಹಂಚಿಕೆಯಲ್ಲಿ ಯಾವುದೇ ಗೊಂದಲವಿಲ್ಲ. ಆದರೆ, ಲಾರಿ ಮಾಲಕರ ಮುಷ್ಕರದ ಹಿನ್ನೆಲೆಯಲ್ಲಿ ಕೆಲವು ಕಡೆಗಳಲ್ಲಿ ಸಮಸ್ಯೆಯಾಗಿದ್ದು, ಇದೀಗ ಸರಿಪಡಿಸಲಾಗಿದೆ. ಎಲ್ಲ ಮಕ್ಕಳಿಗೆ ಪಠ್ಯ-ಪುಸ್ತಕ ಒದಗಿಸಲಾಗಿದೆ ಎಂದು ತನ್ವೀರ್ ಸೇಠ್ ಹೇಳಿದರು.

ಆರಂಭಕ್ಕೆ ವಿಷಯ ಪ್ರಸ್ತಾಪಿಸಿದ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಲೆ ಪ್ರಾರಂಭವಾಗಿ ತಿಂಗಳಾಗುತ್ತಿದ್ದರೂ ಪಠ್ಯ-ಪುಸ್ತಕ ವಿತರಣೆಯಾಗಿಲ್ಲ. ಪಠ್ಯ-ಪುಸ್ತಕ ಸಮರ್ಪಕವಾಗಿ ಮುದ್ರಣವೆ ಆಗಿಲ್ಲ. ಪಠ್ಯ-ಪುಸ್ತಕ ಪರಿಷ್ಕರಣೆ ಹಿನ್ನೆಲೆಯಲ್ಲಿ ಸಂಪೂರ್ಣ ಗೊಂದಲದ ಗೂಡಾಗಿದೆ ಎಂದು ಗಮನ ಸೆಳೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News