ಸ್ಮಶಾನಗಳ ಮಾಹಿತಿ: ಕಾಲಾವಕಾಶ ಕೇಳಿದ ಸಚಿವ ಕಾಗೋಡು ತಿಮ್ಮಪ್ಪ
ಬೆಂಗಳೂರು, ಜೂ.14: ರಾಜ್ಯದ ವಿವಿಧ ಭಾಗಗಳಲ್ಲಿರುವ ವಿವಿಧ ಜಾತಿ, ಧರ್ಮ, ಸಮುದಾಯದ ಸ್ಮಶಾನದ ಬಗ್ಗೆ ವಿ.ಎಸ್.ಉಗ್ರಪ್ಪ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರಿಗೆ ಕೇಳಿದ ಪ್ರಶ್ನೆ ಕೆಲ ಕಾಲ ಸ್ವಾರಸ್ಯಕರ ಚರ್ಚೆಗೆ ಕಾರಣವಾಯಿತು.
ಸಭಾಪತಿ ಶಂಕರಮೂರ್ತಿ ಅವರು ಉಗ್ರಪ್ಪ ಅವರ ಪ್ರಶ್ನೆಗೆ ಸಚಿವರು ಒಂದು ತಿಂಗಳ ಕಾಲಾವಕಾಶ ಕೇಳಿದ್ದಾರೆ ಎನ್ನುತ್ತಿದ್ದಂತೆ ಇಡೀ ಸದನ ಉಗ್ರಪ್ಪ ಅವರ ಪ್ರಶ್ನೆಗೆ ಒಂದು ತಿಂಗಳು ಕಾಲಾವಕಾಶ ಕೇಳಿದ್ದಾರಾ ಎಂದು ಹಾಸ್ಯ ಚಟಾಕಿ ಹಾರಿಸಿದಾಗ, ನಗೆಗಡಲಲ್ಲಿ ತೇಲುವಂತಾಯಿತು.
ಮಧ್ಯ ಪ್ರವೇಶಿಸಿದ ಉಗ್ರಪ್ಪ, ನಿಯಮದ ಪ್ರಕಾರ ನೋಟಿಸ್ ನೀಡಿದ 10 ದಿನಗಳೊಳಗಾಗಿ ಉತ್ತರ ಕೊಡಬೇಕು. ಒಂದು ತಿಂಗಳು ಕಾಲಾವಕಾಶ ಕೇಳಿರುವುದು ಸರಿಯಲ್ಲ. ನೀರು ಕೊಡಿ ಎಂದರೆ ಈಗ ಬಾವಿ ತೆಗೆಯುತ್ತಿದ್ದೇನೆ ಎನ್ನುವಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಆಗ ಮಧ್ಯೆ ಪ್ರವೇಶಿಸಿದ ಕೆ.ಎಸ್.ಈಶ್ವರಪ್ಪ, ಉಗ್ರಪ್ಪ ಅವರ ಪ್ರಶ್ನೆಯನ್ನೇ ಸ್ಮಶಾನಕ್ಕೆ ಕಳುಹಿಸಿದ್ದಾರೆ ಎಂದು ಹಾಸ್ಯ ಚಟಾಕಿ ಹಾರಿಸಿದರು.