ದೇಶದ ರಾಜಕೀಯ ಬದಲಾಗದ ಹಂತಕ್ಕೆ ಮುಟ್ಟಿದೆ: ಗಿರೀಶ್ ಕಾರ್ನಾಡ್ ವಿಷಾದ
ಬೆಂಗಳೂರು, ಜೂ.14: ಪ್ರಸ್ತುತ ದೇಶದಲ್ಲಿ ರಾಜಕೀಯ ವ್ಯವಸ್ಥೆ ಸರಿಪಡಿಸಲಾಗದಷ್ಟು ಹಂತಕ್ಕೆ ಮುಟ್ಟಿದೆ ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಗಿರೀಶ್ ಕಾರ್ನಾಡ್ ವಿಷಾದಿಸಿದ್ದಾರೆ.
ಬುಧವಾರ ಭಾರತೀಯ ವ್ಯಂಗ್ಯಚಿತ್ರಕಾರರ ಸಂಸ್ಥೆಯ 10ನೆ ವಾರ್ಷಿಕೋತ್ಸವ ಅಂಗವಾಗಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಟ್ಟದ ವ್ಯಂಗ್ಯಚಿತ್ರ ಪ್ರದರ್ಶನ ಹಾಗೂ ಮಾಯಾ ಕಾಮತ್ ಸ್ಮಾರಕ ಸ್ಪರ್ಧೆ-2016ನೆ ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.
ದೇಶದ ಹಲವು ವ್ಯಂಗ್ಯ ಚಿತ್ರಕಾರರು ರಾಜಕೀಯ ಕ್ಷೇತ್ರದ ಅವ್ಯವಸ್ಥೆಯನ್ನು ವಿಡಂಬನೆಯಾಗಿ ಚಿತ್ರಿಸಿದ್ದಾರೆ. ಜನತೆ ಈ ವ್ಯಂಗ್ಯ ಚಿತ್ರಗಳನ್ನು ನೋಡಿ ನಗುವ ಮೂಲಕವಾದರು ದೇಶದ ಪ್ರಸ್ತುತ ಸ್ಥಿತಿಯನ್ನು ಅರ್ಥೈಸಿಕೊಳ್ಳಲಿ. ವಿಶ್ವದ ರಾಜಕೀಯ ವ್ಯವಸ್ಥೆಯು ಹಾದಿ ತಪ್ಪಿ ನಡೆಯುತ್ತಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಹಿರಿಯ ವ್ಯಂಗ್ಯ ಚಿತ್ರಕಾರ ಅಮರನಾಥ ಕಾಮತ್ ಮಾತನಾಡಿ, ದೇಶದಲ್ಲಿ ವ್ಯಂಗ್ಯ ಚಿತ್ರಗಾರರಿಗೆ ಉತ್ತಮ ಬೇಡಿಕೆಯಿದೆ. ವಿಶ್ವ ಮಟ್ಟದಲ್ಲಿಯೂ ವ್ಯಂಗ್ಯ ಚಿತ್ರಗಳಿಗೆ ಪ್ರತ್ಯೇಕ ಪ್ರಶಸ್ತಿಯನ್ನು ಮೀಸಲಿರಿಸಲಾಗಿದೆ. ಸಮಾಜದಲ್ಲಾಗುವ ಪ್ರತಿಯೊಂದು ಸನ್ನಿವೇಶಗಳನ್ನು ವ್ಯಂಗ್ಯಚಿತ್ರಕಾರರು ಸೃಜನಾತ್ಮಕವಾಗಿ ಅಭಿವ್ಯಕ್ತಿಸುವ ಕ್ರಿಯೆ ಜನತೆಯ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ವ್ಯಂಗ್ಯಚಿತ್ರಗಾರ ಕೇಶವ್ ಮಾತನಾಡಿದರು. ಈ ವೇಳೆ ಮಾಯಾ ಕಾಮತ್ ಸ್ಪರ್ಧೆಯಲ್ಲಿ ವಿಜೇತರಾದ ವ್ಯಂಗ್ಯಚಿತ್ರಗಾರರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.