×
Ad

ವಿವಾದಕ್ಕೆಡೆಮಾಡಿದ ಕೆ.ಎಸ್.ಈಶ್ವರಪ್ಪ ಮಾತು

Update: 2017-06-14 20:24 IST

ಬೆಂಗಳೂರು, ಜೂ.14: ಮನೆಗಳಲ್ಲಿ ಗಂಡಸರಿಗಿಂತ ಹೆಂಗಸರ ಮಾತೇ ನಡೆಯುವುದು ಎಂದು ಹೇಳುವ ಬರದಲ್ಲಿ ವಿಧಾನಪರಿಷತ್‌ನ ಸದಸ್ಯೆಯರಾದ ಜಯಮಾಲಾ ಹಾಗೂ ಜಯಮ್ಮನವರ ಗಂಡ ನೆಗದು ಬಿದ್ದೋಗಲಿ ಎಂದು ಹೇಳುವ ಮೂಲಕ ಸದನದಲ್ಲಿ ಕೆಲ ನಿಮಿಷಗಳ ಕಾಲ ಆತಂಕವನ್ನು ಉಂಟು ಮಾಡಿತು.

ಬುಧವಾರ ವಿಧಾನಪರಿಷತ್‌ನಲ್ಲಿ ಬರದ ಕುರಿತು ಬಿಜೆಪಿ ಸದಸ್ಯೆ ತಾರಾ ಮಾತನಾಡುವಾಗ, ಮಹಾರಾಷ್ಟ್ರ ಸರಕಾರದೊಂದಿಗೆ ಕೃಷ್ಣ ನದಿಯಿಂದ 4ಟಿಎಂಸಿಗೂ ಹೆಚ್ಚು ನೀರನ್ನು ಉಚಿತವಾಗಿ ಪಡೆದಿರುವುದರ ಕುರಿತು ಆಡಳಿತ ಹಾಗೂ ಪ್ರತಿಪಕ್ಷಗಳ ನಡುವೆ ವಾಗ್ವಾದ ನಡೆಯಿತು. ಇದರಿಂದ ಬೇಸತ್ತ ತಾರಾ, ನನಗೆ ಸಮಯ ಸಾಕಾಗುತ್ತಿಲ್ಲ. ಮತ್ತಷ್ಟು ಸಮಯವನ್ನು ತೆಗೆದುಕೊಳ್ಳುತ್ತೇನೆಂದು ತಿಳಿಸಿದರು.

ಇದಕ್ಕೆ ಪೂರಕವಾಗಿ ಮಾತನಾಡಿದ ಕೆ.ಎಸ್.ಈಶ್ವರಪ್ಪ, ಮನೆಯಲ್ಲಿ ಹಾಗೂ ಸದನದಲ್ಲಿ ಹೆಣ್ಣು ಮಕ್ಕಳದೇ ನಡೆಯುವುದು. ಹೀಗಾಗಿ ತಾರಾ, ಮೋಟಮ್ಮರಿಗೆ ಹೆಚ್ಚಿನ ಸಮಯ ಕೊಟ್ಟುಬಿಡಿ ಎಂದು ಹೇಳಿದರು. ಇದಕ್ಕೆ ಕೆಲವು ಸದಸ್ಯರು ಜಯಮಾಲಾ ಹಾಗೂ ಜಯಮ್ಮರಿಗೂ ಸಮಯಬೇಕಾಗಲ್ವ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಈಶ್ವರಪ್ಪ, ಜಯಮಾಲಾ ಗಂಡನ ಜೊತೆ ಮಾತನಾಡಿದ್ದೇನೆ. ಅವರ ಮನೆಯಲ್ಲಿ ಅವರ ಗಂಡನದೆ ನಡೆಯೋದು ಎಂದು ತಿಳಿಸಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಜಯಮಾಲಾ, ನನ್ನ ಗಂಡನನ್ನು ಎಲ್ಲಿ ನೋಡಿದ್ದೀರಿ. ಸುಳ್ಳನ್ನು ಹೇಳಬೇಡಿ ಎಂದರು.

ಈ ವೇಳೆ ಮಾತಿನ ನಡುವೆ ಜಯಮಾಲ ಗಂಡ ನೆಗದು ಬಿದ್ದು ಹೋಗಲಿ ಎಂದು ಹೇಳಿದರು. ಇದಕ್ಕೆ ಆಡಳಿತ ಪಕ್ಷದ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಪುನಃ ಎದ್ದು ನಿಂತ ಸದಸ್ಯೆ ಜಯಮಾಲಾ ಮಾತನಾಡಿ, ಮಹಿಳೆ, ಮಕ್ಕಳು ಹಾಗೂ ರೈತರ ಬಗ್ಗೆ ಮಾತನಾಡುವಾಗ ಸೂಕ್ಷ್ಮತೆಯಿಂದ ಮಾತನಾಡಬೇಕು. ಮನಸಿಗೆ ಬಂದ ರೀತಿ ಮಾತನಾಡಬಾರದು ಎಂದು ಖಾರವಾಗಿ ಹೇಳಿದರು. ಇದಕ್ಕೆ ಸಮಜಾಯಿಷಿ ನೀಡಿದ ಈಶ್ವರಪ್ಪ, ನಾನು ಹೇಳಿದ್ದು ಹಾಗಲ್ಲ. ಹೆಣ್ಣು ಮಕ್ಕಳಿಗೆ ಹೆಚ್ಚಿನ ಅವಕಾಶ ಸಿಗಬೇಕು ಎಂದು ಹೇಳಿದೆ. ನನ್ನ ಮಾತನ್ನು ತಪ್ಪಾಗಿ ಅರ್ಥೈಸುವುದು ಬೇಡ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News