ಕಿದ್ವಾಯಿ ಸಂಸ್ಥೆಯಲ್ಲಿ ಅಕ್ರಮ: ವಿಚಾರಣೆಗೆ ಆದೇಶ

Update: 2017-06-14 15:33 GMT

ಬೆಂಗಳೂರು, ಜೂ.14: ಕಿದ್ವಾಯಿ ಕ್ಯಾನ್ಸರ್ ಸಂಸ್ಥೆಯಲ್ಲಿ ಕೆಟಿಪಿಪಿ ನಿಯಮಗಳನ್ನು ಉಲ್ಲಂಘಿಸಿ ಸಿವಿಲ್ ಕಾಮಗಾರಿಗಳನ್ನು ಕೈಗೊಂಡಿರುವುದು. ಔಷಧ, ರಾಸಾಯನಿಕ ಗಳು, ಉಪಕರಣಗಳು, ಯಂತ್ರೋಪಕರಣಗಳನ್ನು ಖರೀದಿ, ರಾಜ್ಯ ಹಾಗೂ ಕೇಂದ್ರ ಸರಕಾರದ ಅನುದಾನ ದುರ್ಬಳಕೆ ಹಾಗೂ ಇನ್ನಿತರೆ ಅಕ್ರಮ, ಅವ್ಯವಹಾರಗಳನ್ನು ಎಸಗಿರುವ ವಿಷಯಗಳ ಕುರಿತ ದೂರುಗಳ ಬಗ್ಗೆ ವಿಚಾರಣೆ ನಡೆಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ನಿರ್ದೇಶನಾಲಯದ ಜಾಗೃತದಳದ ಮುಖ್ಯ ಜಾಗೃತಾಧಿಕಾರಿಗೆ ವಹಿಸಿ ಸರಕಾರ ಆದೇಶ ಹೊರಡಿಸಿದೆ.

ಕಿದ್ವಾಯಿ ಸಂಸ್ಥೆಯ ಪ್ರಸ್ತುತ ನಿರ್ದೇಶಕ ಕೆ.ಬಿ.ಲಿಂಗೇಗೌಡ, ಹಿಂದಿನ ಆರ್ಥಿಕ ಸಲಹೆಗಾರರಾದ ಸುಭಾಷ್ ತುಗಾವೆ ಮತ್ತು ಇಂದುಮತಿ, ಅಮೃತವತಿ, ಕಚೇರಿ ಅಧೀಕ್ಷಕ ದೇವರಾಜು, ಪ್ರೇಮಲತಾ, ಡಾ.ಕೃಷ್ಣಮೂರ್ತಿ, ಡಾ.ಜಗನ್ನಾಥ್, ಡಾ.ಪಲ್ಲವಿ, ಡಾ.ಸಿದ್ದಣ್ಣ, ಡಾ.ಲಕ್ಷ್ಮಯ್ಯ ವಿರುದ್ಧ ದೂರುಗಳು ಬಂದಿವೆ.

ಈ ಹಿನ್ನೆಲೆಯಲ್ಲಿ ದೂರಿನಲ್ಲಿರುವ ಅಂಶಗಳ ಬಗ್ಗೆ ಕೂಲಂಕಷವಾಗಿ ವಿಚಾರಣೆ ನಡೆಸಿ ವಿಚಾರಣಾ ವರದಿಯನ್ನು ಒಂದು ತಿಂಗಳ ಒಳಗಾಗಿ ಸರಕಾರಕ್ಕೆ ಸಲ್ಲಿಸುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ(ವೈದ್ಯಕೀಯ ಶಿಕ್ಷಣ)ಯ ಸರಕಾರದ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News