ವೈದ್ಯ ಪದವಿ ಪಡೆದವರಿಗೆ ಗ್ರಾಮೀಣ ಸೇವೆ ಕಡ್ಡಾಯ:ವಿಧಾನಸಭೆಯಲ್ಲಿ ವಿಧೇಯಕ ಮಂಡನೆ

Update: 2017-06-14 15:37 GMT

ಬೆಂಗಳೂರು, ಜೂ.14: ವೈದ್ಯಕೀಯ ಕೋರ್ಸ್ ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ 1 ವರ್ಷ ಗ್ರಾಮೀಣ ಸೇವೆ ಕಡ್ಡಾಯಗೊಳಿಸಲು ಅವಕಾಶ ಕಲ್ಪಿಸುವ ಕರ್ನಾಟಕ ವೈದ್ಯಕೀಯ ಕೋರ್ಸುಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳ ಕಡ್ಡಾಯ ಸೇವಾ ತರಬೇತಿ(ತಿದ್ದುಪಡಿ) ವಿಧೇಯಕವನ್ನು ವಿಧಾನಸಭೆಯಲ್ಲಿ ಮಂಡಿಸಲಾಯಿತು.

ಬುಧವಾರ ವಿಧಾನಸಭೆಯಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್, ವಿಧೇಯಕವನ್ನು ಮಂಡಿಸಿ, ಅಂಗೀಕಾರವಾದ ತರುವಾಯ ತಕ್ಷಣ ಜಾರಿಗೆ ಬರಲಿದೆ. 2012ರಲ್ಲಿ ವೈದ್ಯಕೀಯ ಶಿಕ್ಷಣ ಪಡೆದ ಅಭ್ಯರ್ಥಿಗೆ 1 ವರ್ಷ ಗ್ರಾಮೀಣ ಸೇವೆಯನ್ನು ಕಡ್ಡಾಯಗೊಳಿಸಿ, ಸರಕಾರ ಕಾನೂನು ರೂಪಿಸಿತ್ತು. ಆದರೆ ಆ ಕಾನೂನಿನಲ್ಲಿ ಕಡ್ಡಾಯ ಸೇವಾ ತರಬೇತಿ ಎಂದು ನಮೂದಿಸಲಾಗಿತ್ತು.

ಇದೀಗ ಹೊಸದಾಗಿ ರೂಪಿಸಲಾದ ಕಾಯ್ದೆಯಲ್ಲಿ ತರಬೇತಿ ಎಂಬ ಪದವನ್ನು ಕೈಬಿಟ್ಟು ಕಡ್ಡಾಯ ಸೇವೆ ಎಂದು ಉಲ್ಲೇಖಿಸಲಾಗಿದೆ. ನೂತನ ಕಾಯ್ದೆಯಿಂದ ವೈದ್ಯಕೀಯ ಸ್ನಾತಕೋತ್ತರ ಪದವಿ ಪಡೆದ ಅಭ್ಯರ್ಥಿಗಳು ಗ್ರಾಮೀಣ ಪ್ರದೇಶದ ಸರಕಾರಿ ಆಸ್ಪತ್ರೆಯಲ್ಲಿ 1 ವರ್ಷ ಸೇವೆ ಸಲ್ಲಿಸುವುದು ಕಡ್ಡಾಯ ಎಂದರು.

ಎಂಬಿಬಿಎಸ್ ಪದವೀಧರರನ್ನು ಕಿರಿಯ ನಿವಾಸಿ ವೈದ್ಯರೆಂದು, ಸ್ನಾತಕೋತ್ತರ ಪದವೀಧರರನ್ನು ಹಿರಿಯ ನಿವಾಸಿ ವೈದ್ಯರೆಂದು ಪರಿಗಣಿಸಲಾಗುತ್ತದೆ. ಗ್ರಾಮೀಣ ಸೇವಾವಧಿಯಲ್ಲಿ ಖಾಯಂ ವೈದ್ಯರಿಗೆ ನೀಡುವುದಕ್ಕಿಂತ 100ರೂ. ಕಡಿಮೆ ವೇತನ ನೀಡಲಾಗುತ್ತದೆ ಎಂದು ವಿಧೇಯಕದಲ್ಲಿ ಉಲ್ಲೇಖಿಸಲಾಗಿದೆ.

ಗ್ರಾಮೀಣ ಸೇವೆ ಪೂರ್ಣಗೊಳಿಸಲು ವೈದ್ಯಕೀಯ ಅಭ್ಯರ್ಥಿಗಳು ಭಾರತೀಯ ವೈದ್ಯಕೀಯ ಪರಿಷತ್, ಕರ್ನಾಟಕ ವೈದ್ಯಕೀಯ ನೋಂದಣಿ ಅಧಿನಿಯಮದಲ್ಲಿ ಶಾಶ್ವತ ನೋಂದಣಿಗೆ ಅರ್ಹರಾಗಿರುವುದಿಲ್ಲವೆಂದು ವಿಧೇಯಕದಲ್ಲಿ ಸ್ಪಷ್ಟಪಡಿಸಲಾಗಿದೆ. ಒಂದು ವೇಳೆ ಎಂಬಿಬಿಎಸ್ ನಂತರ ಸ್ನಾತಕೋತ್ತರ ಪದವಿಗೆ ಸೇರ್ಪಡೆ ಆಗುವುದಿದ್ದರೆ ಆ ಕೋರ್ಸ್‌ಗೆ ತಾತ್ಕಾಲಿಕ ನೋಂದಣಿ ಪ್ರಮಾಣಪತ್ರ ನೀಡಲಾಗುತ್ತದೆ. ಕೋರ್ಸ್ ಪೂರ್ಣಗೊಂಡ ನಂತರ ಗ್ರಾಮೀಣ ಸೇವೆಗೆ ಹಾಜರಾಗುವುದು ಕಡ್ಡಾಯ ಎಂದು ವಿವರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News