ರಾತ್ರಿ ಕೆಲಸ ಮಾಡಿ ಹಗಲಿನಲ್ಲಿ ನಿದ್ರಿಸುವುದು ಕೆಟ್ಟದ್ದು, ಏಕೆ....?

Update: 2017-06-15 22:43 GMT

ಇಂದು ಹೆಚ್ಚುಕಡಿಮೆ ಶೇ.25ರಷ್ಟು ಉದ್ಯೋಗಿಗಳು ರಾತ್ರಿ ಪಾಳಿಯಲ್ಲಿ ದುಡಿಯು ತ್ತಾರೆ. ಹೀಗಾಗಿ ಹಗಲಿನಲ್ಲಿ ನಿದ್ರಿಸುವುದು ಅವರಿಗೆ ಅನಿವಾರ್ಯ. ಆದರೆ ಹಗಲಿನ ವೇಳೆ ಗಾಢನಿದ್ರೆ ಮಾಡಲು ಸಾಧ್ಯವೇ? ಇಲ್ಲ. ಒಂದು ವೇಳೆ ಅವರು ಗಾಢನಿದ್ರೆ ಮಾಡುವಲ್ಲಿ ಯಶಸ್ವಿಯಾದರೂ ಅದು ಒಳ್ಳೆಯ ನಿದ್ರೆಯಂತೂ ಆಗಿರುವುದಿಲ್ಲ. ಮಲಗುವ ಕೋಣೆಯನ್ನು ಕತ್ತಲಾಗಿಸಿಕೊಂಡು ನಮ್ಮ ಶರೀರವನ್ನು ವಂಚಿಸಲು ಸಾಧ್ಯವಿಲ್ಲ.

ನಿದ್ರೆಗೆ ನಮ್ಮ ಶರೀರದಲ್ಲಿನ ಕೆಲವು ರಾಸಾಯನಿಕ ಪ್ರಕ್ರಿಯೆಗಳು ಅಗತ್ಯವಾಗಿವೆ. ನಿದ್ರೆಯ ಕೊರತೆ ಶರೀರದಲ್ಲಿನ ಇತರ ಹಲವಾರು ಜೈವಿಕ ಮತ್ತು ರಾಸಾಯನಿಕ ಪ್ರಕ್ರಿಯೆಗಳನ್ನು ಬುಡಮೇಲುಗೊಳಿಸುತ್ತದೆ. ಇನ್ನೊಂದು ಮಹತ್ವದ ಅಂಶವೆಂದರೆ ಹಗಲಿನಲ್ಲಿ ನಿದ್ರಿಸುವುದು ನಮ್ಮ ಆಯುಷ್ಯವನ್ನೇ ಕಡಿಮೆ ಮಾಡಬಹುದು.

 ಆರೋಗ್ಯತಜ್ಞರು ರಾತ್ರಿ ಪಾಳಿಯನ್ನು ಕ್ಯಾನ್ಸರ್ ಪಾಳಿ ಎಂದು ಬಣ್ಣಿಸಿದ್ದಾರೆ. ಏನು ಕಾರಣ? ರಾತ್ರಿ ಪಾಳಿ ನಾವು ಕ್ಯಾನ್ಸರ್‌ಗೆ ಗುರಿಯಾಗುವ ಅಪಾಯವನ್ನು ಹೆಚ್ಚಿಸುತ್ತದೆ ಎನ್ನಲಾಗಿದೆ.

ರಾತ್ರಿ ಪಾಳಿಯಲ್ಲಿ ಕೆಲಸ ಮಾಡಿ ಹಗಲಿನಲ್ಲಿ ನಿದ್ರಿಸಿದಾಗ ನಮ್ಮ ಶರೀರದಲ್ಲಿ ಬಹಳಷ್ಟು ಬದಲಾವಣೆಗಳಾಗುತ್ತವೆ. ಅದು ಶರೀರದಲ್ಲಿನ ಮೆಲಟೋನಿನ್ ಮಟ್ಟದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.

ರಾತ್ರಿ ಪಾಳಿಗಳಲ್ಲಿ ಹೆಚ್ಚಿನ ನರ್ಸ್‌ಗಳು ಸ್ತನಕ್ಯಾನ್ಸರ್‌ಗೆ ತುತ್ತಾಗುತ್ತಾರೆ ಎಂದು ಅಧ್ಯಯನವೊಂದು ಬೆಳಕಿಗೆ ತಂದಿದೆ.
ಹಗಲಿನ ನಿದ್ರೆಯು ವಂಶವಾಹಿ ಚಟುವಟಿಕೆಗೆ ವ್ಯತ್ಯಯವನ್ನುಂಟು ಮಾಡಬಹುದು ಮತ್ತು ಇದು ನಿದ್ರೆ ಇಲ್ಲದ ಸ್ಥಿತಿಗೆ ಹೋಲಿಸಿದರೆ ಹೆಚ್ಚು ಅಪಾಯಕಾರಿಯೆನ್ನಲಾಗಿದೆ.

 ರಾತ್ರಿ ಪಾಳಿಗಳಲ್ಲಿ ದುಡಿಯುವ ನೌಕರರು ಕ್ಯಾನ್ಸರ್, ಹೃದಯ ಸಮಸ್ಯೆಗಳು, ಹೆಚ್ಚಿನ ರಕ್ತದೊತ್ತಡ, ಮಧುಮೇಹ ಮತ್ತು ಬೊಜ್ಜಿನಂತಹ ಆರೋಗ್ಯ ಸಮಸ್ಯೆಗಳಿಗೆ ಗುರಿಯಾಗು ವುದು ಹೆಚ್ಚು.

ಹಗಲಿನಲ್ಲಿ ನಿದ್ರಿಸಿ ರಾತ್ರಿ ಕೆಲಸ ಮಾಡುವುದು ನಮ್ಮ ಹಸಿವಿನಲ್ಲಿ ಕೆಲವು ಬದಲಾವಣೆ ಗಳನ್ನು ತರುತ್ತದೆ ಮತ್ತು ಪಚನಕ್ರಿಯೆಯನ್ನು ವ್ಯತ್ಯಯಗೊಳಿಸುತ್ತದೆ. ಕೆಲವೊಮ್ಮೆ ನಾವು ಅತಿ ಎನ್ನುವಷ್ಟು ತಿನ್ನಬಹುದು ಮತ್ತು ಕೆಲವೊಮ್ಮೆ ಏನನ್ನೂ ತಿನ್ನುವುದೇ ಬೇಡ ಎಂದೆನಿಸ ಬಹುದು. ಕ್ರಮೇಣ ನಮ್ಮ ಊಟದ ವಿಧಾನವೇ ಅಸ್ತವ್ಯಸ್ತಗೊಳ್ಳಬಹುದು.

ನಿದ್ರೆಯ ಕೊರತೆ ನಿಧಾನವಾಗಿ ನಮ್ಮ ತ್ವಚೆಯ ಮೇಲೂ ದುಷ್ಪರಿಣಾಮ ಬೀರಬಹುದು. ಏರುಪೇರಾದ ನಿದ್ರೆಯ ವೇಳಾಪಟ್ಟಿಗೆ ಹೊಂದಿಕೊಳ್ಳಲು ನಮ್ಮ ಶರೀರವು ವಿಫಲವಾದಾಗ ಚರ್ಮವು ಸುಕ್ಕುಗಟ್ಟುತ್ತದೆ ಮತ್ತು ನಾವು ಹೆಚ್ಚು ವಯಸ್ಸಾದಂತೆ ಕಾಣಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News