ಇಲ್ಲಿಯವರೆಗೂ ಒಬ್ಬ ಆರೋಪಿ ಬಂಧನವಾಗಿಲ್ಲ: ಮೋಟಮ್ಮ ಆತಂಕ

Update: 2017-06-15 16:31 GMT
ಬೆಂಗಳೂರು, ಜೂ.15: ರಾಜ್ಯದಲ್ಲಿ ಮಕ್ಕಳ ಕಳ್ಳ ಸಾಗಾಣಿಕೆ ಅವ್ಯಾಹತವಾಗಿ ನಡೆಯುತ್ತಿರುವುದರ ಕುರಿತು ವರದಿಗಳು ಬರುತ್ತಿದ್ದರೂ ಪೊಲೀಸ್ ಇಲಾಖೆ ಇಲ್ಲಿಯವರೆಗೂ ಒಬ್ಬ ಆರೋಪಿಯನ್ನು ಬಂಧಿಸಿಲ್ಲ ಎಂದು ವಿಧಾನಪರಿಷತ್‌ನ ಕಾಂಗ್ರೆಸ್ ಸದಸ್ಯೆ ಮೋಟಮ್ಮ ಆತಂಕ ವ್ಯಕ್ತಪಡಿಸಿದ್ದಾರೆ.

ಗುರುವಾರ ವಿಧಾನಪರಿಷತ್‌ನಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆ ಕುರಿತು ವಿಶೇಷ ಚರ್ಚೆಯ ವೇಳೆ ಮಾತನಾಡಿದ ಅವರು, ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಸಮಿತಿಯಿಂದ ರಾಜ್ಯಾದ್ಯಂತ ಪ್ರವಾಸ ಮಾಡುವ ವೇಳೆ ಬಾಲಕಿ ಹಾಗೂ ಯುವತಿಯರು ಕಣ್ಮರೆ ಆಗಿರುವುದು ಗೊತ್ತಾಗಿದೆ. ಆದರೆ, ಇಲ್ಲಿಯವರೆಗೂ ಯಾವ ಆರೋಪಿ ಬಂಧನವಾಗದಿರುವುದು ಪೊಲೀಸ್ ಇಲಾಖೆಯ ನಿರ್ಲಕ್ಷತನಕ್ಕೆ ಸಾಕ್ಷಿಯಾಗಿದೆ ಎಂದು ಕಿಡಿಕಾರಿದರು. ಗ್ರಾಮೀಣ ಪ್ರದೇಶದ ಆರ್ಥಿಕ, ಸಾಮಾಜಿಕ ಪರಿಸ್ಥಿತಿಗಳು ಮಕ್ಕಳು ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳಿಗೆ ಕಾರಣವಾಗಿವೆ. ಗರ್ಭಿಣಿ ಹಾಗೂ ಬಾಣಂತಿಯವರಿಗೆ ಉತ್ತಮ ಪೌಷ್ಟಿಕಾಂಶವಿಲ್ಲದೆ ನರಳುತ್ತಿದ್ದಾರೆ. ಇವರಿಗೆ ಹುಟ್ಟುವ ಮಕ್ಕಳು ಹುಟ್ಟುತ್ತಲೆ ಅನೇಕ ರೋಗಗಳಿಗೆ ತುತ್ತಾಗುವಂತಾಗಿದೆ ಎಂದು ಅವರು ವಿಷಾದಿಸಿದರು.

ಇನ್ನು ಸಮಾಜದಲ್ಲಿ ವಿವಿಧ ಕಾರಣಗಳಿಂದ ಅನಾಥವಾಗುವ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಲೆ ಇದೆ. ಇಂತಹ ಅನಾಥ ಮಕ್ಕಳನ್ನು ದತ್ತು ಸ್ವೀಕರಿಸಲು ಹಲವು ಮಂದಿ ಮುಂದೆ ಬರುತ್ತಿದ್ದಾರೆ. ಆದರೆ, ದತ್ತು ಸ್ವೀಕಾರಕ್ಕಿರುವ ನಿಯಮಗಳು ತುಂಬ ಕಠಿಣವಾಗಿರುವುದರಿಂದ ಹಲವು ಪೋಷಕರಿಗೆ ತೊಡಕಾಗಿದೆ. ಈ ನಿಯಮಗಳು ಸರಳೀಕರಿಸಬೇಕಾದ ಅಗತ್ಯವಿದೆ ಎಂದು ಅವರು ಹೇಳಿದರು.

ಇದಕ್ಕೆ ಪೂರವಕವಾಗಿ ಬಿಜೆಪಿ ಸದಸ್ಯ ರಾಮಚಂದ್ರಗೌಡ ಮಾತನಾಡಿ, ರಾಜ್ಯದಲ್ಲಿ 7ನೆ ವರ್ಷದಿಂದ 18ನೆ ವರ್ಷದವರೆಗಿನ ಮಕ್ಕಳ ಲಿಂಗಾನುಪದಲ್ಲಿ ಭಾರಿ ಅಂತರ ಕಂಡು ಬಂದಿದೆ. ಒಂದು ಸಾವಿರ ಗಂಡು ಮಕ್ಕಳಿಗೆ 904 ಹೆಣ್ಣು ಮಕ್ಕಳಿದ್ದಾರೆ. ಇದೇ ಸಮಯದಲ್ಲಿ ಕೇರಳದಲ್ಲಿ 964 ಹೆಣ್ಣು ಮಕ್ಕಳಿದ್ದಾರೆ. ಹೀಗಾಗಿ ಲಿಂಗಾನುಪಾತ ಸಮನಾಗಿ ಬರುವ ರೀತಿಯಲ್ಲಿ ಕಾರ್ಯಕ್ರಮಗಳು ಹಮ್ಮಿಕೊಳ್ಳಬೇಕಾಗಿದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News