ಗೋಹತ್ಯೆ ನಿಷೇಧ:ಯಡಿಯೂರಪ್ಪಗೆ ದಲಿತರಿಂದ ತರಾಟೆ
ಮದ್ದೂರು, ಜೂ.15: ಗೋಹತ್ಯೆ ನಿಷೇಧದಿಂದ ಬಹುಸಂಖ್ಯಾತರ ಆಹಾರ ಪದ್ಧತಿಗೆ ಧಕ್ಕೆಯಾಗುವುದಿಲ್ಲವೆ ಎಂದು ತಾಲೂಕಿನ ಕೊತ್ತನಹಳ್ಳಿಯ ದಲಿತರ ಕಾಲನಿಗೆ ಗುರುವಾರ ಭೇಟಿ ನೀಡಿದ ಯಡಿಯೂರಪ್ಪ ಅವರನ್ನು ತರಾಟೆಗೆ ತೆಗೆದುಕೊಳ್ಳಲಾಯಿತು.
ಯಡಿಯೂರಪ್ಪ, ಗ್ರಾಮದ ದಲಿತರ ಮನೆಯಲ್ಲಿ ಉಪಾಹಾರ ಸೇವಿಸಿ ನಂತರ ನಡೆಸಿದ ಸಂವಾದದಲ್ಲಿ ಪಾಲ್ಗೊಂಡ ಹಲವು ದಲಿತರು, ಕೇಂದ್ರ ಸರಕಾರದ ಗೋಹತ್ಯೆ ನಿಷೇಧದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು.
ನಿಮ್ಮ (ಬಿಜೆಪಿ) ಪಕ್ಷದಲ್ಲಿ ಚುನಾವಣೆಗೆ ಸ್ಪರ್ಧಿಸಲು ಮಹಿಳೆಯರಿಗೆ ಹೆಚ್ಚಿನ ಅವಕಾಶ ಇಲ್ಲವೇಕೆ? ದಲಿತ ಪದ ಏಕೆ ಬಳಕೆ ಮಾಡುತ್ತೀರಿ? ತಮ್ಮ ಪಕ್ಷದಿಂದ ದಲಿತ ಸಿಎಂ ಘೋಷಣೆ ಮಾಡುವುದಿಲ್ಲವೇಕೆ? ಮುಂತಾದ ಪ್ರಶ್ನೆಗಳು ಯಡಿಯೂರಪ್ಪ ಅವರಿಗೆ ಎದುರಾದವು.
ಗ್ರಾಮಸ್ಥರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, ಗೋಹತ್ಯೆ ನಿಷೇಧ ಜಾರಿಗೊಳಿಸುವ ವಿಷಯವನ್ನು ಪ್ರಧಾನಿ ನರೇಂದ್ರ ಮೋದಿ ಆಯಾ ರಾಜ್ಯಗಳಿಗೆ ಬಿಟ್ಟಿದ್ದಾರೆ. ಇನ್ನು ಬಿಜೆಪಿಯಲ್ಲಿ ಸ್ಪರ್ಧಿಸಲು ಮಹಿಳೆಯರಿಗೆ ಆದ್ಯತೆ ನೀಡಲಾಗುವುದು ಎಂದರು.
ಪ್ರತಿಭಟನೆ:ತಾಲೂಕಿನ ದೇಶಹಳ್ಳಿ ಕೆರೆ ವೀಕ್ಷಣೆಗೆ ಆಗಮಿಸಿದ ವೇಳೆ ತಮ್ಮ ಮನವಿ ಸ್ವೀಕರಿಸದ ಯಡಿಯೂರಪ್ಪ ವಿರುದ್ಧ ಕಸ್ತೂರಿ ಕನ್ನಡ ಜನಪರ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ರೈತರಿಗೆ ಸಂಬಂಧಿಸಿದ ಹಲವು ಸಮಸ್ಯೆಗಳ ಬಗ್ಗೆ ಗಮನ ಸೆಳೆಯಲು ಯಡಿಯೂರಪ್ಪಗೆ ಮನವಿಪತ್ರ ಸಲ್ಲಿಸಲು ಬಂದಿದ್ದೆವು. ಆದರೆ, ಸ್ವೀಕರಿಸದೆ ಹೊರಟು ಹೋದರು. ಯಡಿಯೂರಪ್ಪ ಅವರದು ಬೂಟಾಟಿಕೆಯ ಪ್ರವಾಸವಾಗಿದೆ ಎಂದು ವೇದಿಕೆ ಜಿಲ್ಲಾಧ್ಯಕ್ಷ ವಿ.ಸಿ.ಉಮಾಶಂಕರ್ ಕಿಡಿಕಾರಿದರು.