ಕತರ್‌ನಲ್ಲಿನ್ನು ಉದ್ಯೋಗಗಳಿಗೂ ಸಂಚಕಾರ

Update: 2017-06-16 10:46 GMT

ದೋಹಾ,ಜೂ.16: ಕತರ್‌ನಲ್ಲಿ ಇಲೆಕ್ಟ್ರಿಷಿಯನ್ ಆಗಿರುವ ಅಜಿತ್ ಏಳು ತಿಂಗಳ ಹಿಂದಷ್ಟೇ ತನ್ನ ಹೊಸ ಉದ್ಯೋಗಕ್ಕೆ ಸೇರಿಕೊಂಡಿದ್ದ. ಆದರೆ ಈಗ ಈ ದೇಶದಲ್ಲಿ ಭಾರೀ ಸಂಖ್ಯೆಯಲ್ಲಿರುವ ಇತರ ವಲಸಿಗ ಕಾರ್ಮಿಕರಂತೆ ಅಜಿತ್ ಕೂಡ ಚಿಂತೆಗೆ ಸಿಲುಕಿದ್ದಾನೆ.

ಅಜಿತ್‌ನಲ್ಲಿ ತನ್ನ ಉದ್ಯೋಗದ ಬಗ್ಗೆ ಮಾತ್ರವಲ್ಲ, ಈ ದೇಶದಲ್ಲಿ ತನ್ನ ಭವಿಷ್ಯದ ಜೊತೆಗೆ ಆಹಾರದ ಬೆಲೆಗಳಲ್ಲಿ ತೀವ್ರ ಏರಿಕೆಯ ಬಗ್ಗೆಯೂ ಆತಂಕ ಮಡುವುಗಟ್ಟಿದೆ.

ಇದು ಹೀಗೆಯೇ ಮುಂದುವರಿದರೆ ನಮ್ಮಂತಹ ಕಾರ್ಮಿಕರು ಸಮಸ್ಯೆಗಳಿಗೆ ಸಿಲುಕಲಿದ್ದಾರೆ. ಆಹಾರ ಬೆಲೆಗಳು ಗಗನಚುಂಬಿಯಾಗಲಿವೆ ಮತ್ತು ಉದ್ಯೋಗಗಳಿಗೂ ಸಂಚಕಾರ ಬರಲಿದೆ ಎಂದು ಸೌದಿ ಅರೇಬಿಯಾ ಮತ್ತು ಇತರ ಹಲವಾರು ಗಲ್ಫ್ ರಾಷ್ಟ್ರಗಳು ಕತರ್‌ನೊಂದಿಗೆ ಎಲ್ಲ ಸಂಬಂಧಗಳನ್ನು ಕಡಿದುಕೊಂಡ ಬಳಿಕ ಉದ್ಭವಿಸಿರುವ ರಾಜತಾಂತ್ರಿಕ ಬಿಕ್ಕಟ್ಟನ್ನು ಪ್ರಸ್ತಾಪಿಸಿ ಆತ ಹೇಳಿದ.

ಅಜಿತ್ ಕತರ್‌ನಲ್ಲಿ ಪ್ರತಿ ತಿಂಗಳಿಗೆ 1,000 ರಿಯಾಲ್(ಭಾರತೀಯ ರೂ.ಸುಮಾರು 17,600) ದುಡಿಯುತ್ತಿದ್ದು, ಈ ಪೈಕಿ 600 ರಿಯಾಲ್‌ಗಳನ್ನು ಸ್ವದೇಶದಲ್ಲಿರುವ ತನ್ನ ಕುಟುಂಬಕ್ಕೆ ಕಳುಹಿಸುತ್ತಾನೆ. ಆದರೆ ಇನ್ನು ಮುಂದೆ ಅದು ಸಾಧ್ಯವಾಗಲಿಕ್ಕಿಲ್ಲ ಎಂಬ ಚಿಂತೆ ಆತನನ್ನು ಕಾಡುತ್ತಿದೆ.

ಕೆಲವು ಸೂಪರ್ ಮಾರ್ಕೆಟ್‌ಗಳಲ್ಲಿ ಅಕ್ಕಿ, ಟೊಮೆಟೋ ಮತ್ತು ಈರುಳ್ಳ್ಳಿ ಬೆಲೆಗಳು ಸಿಕ್ಕಾಪಟ್ಟೆ ಏರಿವೆ. ಪ್ರತಿಯೊಂದಕ್ಕೂ ದುಪ್ಪಟ್ಟು ಖರ್ಚು ಮಾಡಬೇಕಾಗಿದೆ ಎಂದು ಆತ ಹೇಳಿದ. ಬೆಲೆಏರಿಕೆಯೊಂದಿಗೆ ಹೊಂದಿಕೊಳ್ಳಲು ಅಜಿತ್ ಈಗ ದಿನಕ್ಕೆ ಒಂದೇ ಹೊತ್ತು ಊಟ ಮಾಡುತ್ತಿದ್ದಾನೆ.

ದ.ಏಷ್ಯಾದವರೇ ಹೆಚ್ಚಿರುವ ಎರಡು ಮಿಲಿಯನ್‌ಗೂ ಅಧಿಕ ವಲಸಿಗ ಕಾರ್ಮಿಕರು ಕತರ್‌ನ್ನು ಕಾಡುತ್ತಿರುವ ಬಿಕ್ಕಟ್ಟಿನ ಮೊದಲ ಬಲಿಪಶುಗಳಾಗಿದ್ದಾರೆ. ಪಾಶ್ಚಾತ್ಯ ದೇಶಗಳ ವಲಸಿಗರ ಮೇಲೆ ಯಾವುದೇ ಆರ್ಥಿಕ ಪರಿಣಾಮಗಳಾಗುವ ಸಾಧ್ಯತೆಗಳು ಕಡಿಮೆ. ಆದರೆ ಅಜಿತ್ ಮತ್ತು ಆತನಂತಹ ಇತರರಿಗೆ ಈ ನಿರಾಳತೆ ಇಲ್ಲ.

ನೆರೆಯ ರಾಷ್ಟ್ರಗಳು ಹೇರಿರುವ ನಿರ್ಬಂಧಗಳಿಂದಾಗಿ ಕತರ್‌ನಲ್ಲಿ ಆರ್ಥಿಕ ಅನಿಶ್ಚಿತತೆ ಹೆಚ್ಚುತ್ತಿರುವುದರಿಂದ ಉದ್ಯೋಗ ಭದ್ರತೆಯ ಕಳವಳಗಳು ಹೆಚ್ಚುತ್ತಿವೆ, ಜೊತೆಗೆ ತಮಗೆ ಅತ್ಯಗತ್ಯವಾಗಿದ್ದ, ಹೆಚ್ಚುವರಿ ಆದಾಯ ಗಳಿಕೆಗೆ ಅವಕಾಶ ನೀಡುತ್ತಿದ್ದ ಓವರ್‌ಟೈಂ ಕೆಲಸದ ಕೊರತೆಯೂ ಈ ಜನರನ್ನು ಕಾಡುತ್ತಿದೆ. ಅಜಿತ್ ಜೊತೆಯಲ್ಲಿದ್ದ ಬಾಂಗ್ಲಾದೇಶದ ಅನಿಲ್ ಮತ್ತು ಅಬ್ದುಲ್ ಬಾರಿಕ್ ಅವರದ್ದೂ ಇದೇ ವ್ಯಥೆ.

ನಿರ್ಬಂಧದಿಂದಾಗಿ ದೇಶದ ಆರ್ಥಿಕತೆಯ ಮೇಲೆ ಯಾವುದೇ ಪರಿಣಾಮ ವುಂಟಾಗಿಲ್ಲ ಎಂದು ಕತರ್ ಅಧಿಕಾರಿಗಳು ವಿಶ್ವಾಸದಿಂದ ಹೇಳುತ್ತಿದ್ದಾರಾದರೂ ವಲಸಿಗ ಕಾರ್ಮಿಕರು ಮಾತ್ರ ಹಾಗೆ ಭಾವಿಸುತ್ತಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News