×
Ad

ಗ್ರಾಮೀಣ ರಸ್ತೆಗಳ ಮೇಲ್ದರ್ಜೆಗೆ ಕೇಂದ್ರಕ್ಕೆ ಮನವಿ: ಎಚ್.ಕೆ.ಪಾಟೀಲ್

Update: 2017-06-16 17:47 IST

ಬೆಂಗಳೂರು, ಜೂ.16: ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ ರಾಜ್ಯದ ಗ್ರಾಮೀಣ ರಸ್ತೆಗಳನ್ನು ಮೇಲ್ದರ್ಜೆಗೇರಿಸುವಂತೆ ಕೇಂದ್ರ ಸರಕಾರಕ್ಕೆ ಮನವಿ ಮಾಡಲಾಗುವುದು ಎಂದು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವ ಹೆಚ್.ಕೆ. ಪಾಟೀಲ್ ಹೇಳಿದ್ದಾರೆ.

ಶುಕ್ರವಾರ ವಿಧಾನ ಪರಿಷತ್‌ನ ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿ ಸದಸ್ಯ ಕವಟಗಿಮಠ ಮಹಂತೇಶ ಮಲ್ಲಿಕಾರ್ಜುನ್ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, ಈ ಸಂಬಂಧ ಕೇಂದ್ರಕ್ಕೆ ಆದಷ್ಟು ಬೇಗ ಪತ್ರ ಬರೆದು ಮನವಿ ಮಾಡುವುದಾಗಿ ತಿಳಿಸಿದರು.

ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ ನಿರ್ಮಿಸಲಾಗಿರುವ ರಸ್ತೆಗಳು ಅತ್ಯುತ್ತಮವಾಗಿವೆ. ಹಾಗಾಗಿ ದೇಶದಲ್ಲೇ ಅತ್ಯುತ್ತಮ ರಸ್ತೆ ಎಂದು ಪರಿಗಣಿಸಲಾಗಿದ್ದು, ಸದ್ಯದಲ್ಲೇ ಕೇಂದ್ರ ಸರಕಾರ ಪ್ರಶಸ್ತಿ ನೀಡಲಿದೆ ಎಂದು ಹೇಳಿದರು.

ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ ನಿರ್ಮಾಣಗೊಂಡಿರುವ ಡಾಂಬರು ರಸ್ತೆಗಳು ಹಾಳಾಗಿರುವ ಬಗ್ಗೆ ಯಾವುದೇ ಪ್ರಕರಣ ವರದಿಯಾಗಿಲ್ಲ. ರಸ್ತೆಗಳ ಬಗ್ಗೆ ವಿಡಿಯೋ ಮತ್ತು ಛಾಯಾಚಿತ್ರಗಳನ್ನು ತರಿಸಿಕೊಂಡು ಪರಿಶೀಲನೆ ನಡೆಸಿದ್ದೇನೆ ಎಂದರು.ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯ 1, 2, 3 ಹಂತದಲ್ಲಿ ಒಟ್ಟು 12,343 ಕಿ.ಮೀ. ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗಿದೆ ಎಂದರು.

ಈ ಯೋಜನೆಯಡಿ ನಾಲ್ಕು ವಿಧಾನಸಭಾ ಕ್ಷೇತ್ರಗಳಿಂದ 44.79 ಕಿ.ಮೀ. ಉದ್ದದ ರಸ್ತೆಗಳಲ್ಲಿ ದುರಸ್ತಿಗಾಗಿ ದೂರುಗಳು ಬಂದಿವೆ. ಈ ಪೈಕಿ ಎಲ್ಲ ರಸ್ತೆಗಳನ್ನು ನಿರ್ವಹಣೆ ಮಾಡಿ ಸುಸ್ಥಿತಿ ನೀಡಲಾಗಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News