‘ನಮ್ಮ ಮೆಟ್ರೋ’ ಹಂತ-1ರ ಲೋಕಾರ್ಪಣೆ

Update: 2017-06-16 13:13 GMT

ಬೆಂಗಳೂರು, ಜೂ.16: ಮಂತ್ರಿ ಸ್ಕ್ವೆ ರ್ ಸಂಪಿಗೆ ರಸ್ತೆ ನಿಲ್ದಾಣದಿಂದ ಯಲಚೇನಹಳ್ಳಿ ಮೆಟ್ರೋ ನಿಲ್ದಾಣದವರೆಗಿನ ಮೆಟ್ರೋ ಹಸಿರು ಮಾರ್ಗದ ಉದ್ಘಾಟನೆ ಹಾಗೂ ‘ನಮ್ಮ ಮೆಟ್ರೋ’ ಹಂತ-1ನ್ನು ರಾಷ್ಟ್ರಪತಿ ಪ್ರಣಬ್‌ಮುಖರ್ಜಿ ಜೂ.17ರಂದು ಸಂಜೆ 6 ಗಂಟೆಗೆ ವಿಧಾನಸೌಧದ ಆವರಣದಲ್ಲಿ ಲೋಕಾರ್ಪಣೆಗೊಳಿಸಲಿದ್ದಾರೆ.

ಸಮಾರಂಭದ ಅಧ್ಯಕ್ಷತೆಯನ್ನು ರಾಜ್ಯಪಾಲ ವಜುಭಾಯ್ ವಾಲಾ ವಹಿಸಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ನಗರಾಭಿವೃದ್ಧಿ ಸಚಿವ ಎಂ.ವೆಂಕಯ್ಯನಾಯ್ಡು ಉಪಸ್ಥಿತರಿರಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಭಾರತದಲ್ಲಿನ ಜಪಾನ್ ದೇಶದ ರಾಯಭಾರಿ ಕೆಂಜಿ ಹಿರಮತ್ಸು ಹಾಗೂ ಫ್ರಾನ್ಸ್ ದೇಶದ ರಾಯಭಾರಿ ಅಲೆಕ್ಸಾಂಡರ್ ಜೀಗ್ಲರ್ ಪಾಲ್ಗೊಳ್ಳಲಿದ್ದಾರೆ.

ಈ ಮಾರ್ಗವು ಜೂ.18ರಿಂದ ಸಂಜೆ 4 ಗಂಟೆಯ ಬಳಿಕ ಸಾರ್ವಜನಿಕ ಸೌಲಭ್ಯಕ್ಕೆ ಲಭ್ಯವಾಗಲಿದ್ದು, ಜೂ.19ರಿಂದ ಬೆಳಗ್ಗೆ 5 ರಿಂದ ರಾತ್ರಿ 11 ಗಂಟೆಯವರೆಗೆ ಮೆಟ್ರೋ ಸಂಚರಿಸಲಿದೆ. ಉತ್ತರ-ದಕ್ಷಿಣ, ಪೂರ್ವ-ಪಶ್ಚಿಮ ಎರಡು ಮಾರ್ಗಗಳಲ್ಲಿ ಸಂಚಾರ ಅವಧಿಯನ್ನು ವಿಸ್ತರಿಸಲಾಗಿದೆ. 4 ರಿಂದ 20 ನಿಮಿಷಗಳಿಗೊಮ್ಮೆ ಮೆಟ್ರೊ ಸಂಚರಿಸಲಿದೆ.

ನಮ್ಮ ಮೆಟ್ರೋ ರೀಚ್ 1(7.18 ಕಿ.ಮೀ) 2011ರ ಅಕ್ಟೋಬರ್ 20ರಿಂದ ಬೈಯಪ್ಪನಹಳ್ಳಿಯಿಂದ ಎಂ.ಜಿ.ರಸ್ತೆಯವರಿಗೆ ಕಾರ್ಯಾಚರಣೆ ಪ್ರಾರಂಭಿಸಿತು. 2014ರ ಮಾ.1ರಂದು ರೀಚ್ 3 ಮತ್ತು 3ಎ ಮುಖಾಂತರ ಮಂತ್ರಿ ಸ್ಕ್ವೆ ರ್ ಸಂಪಿಗೆ ರಸ್ತೆಯಿಂದ ಪೀಣ್ಯ ಕೈಗಾರಿಕಾ ಪ್ರದೇಶ(9.46 ಕಿ.ಮೀ)ವರೆಗಿನ ಸಂಪರ್ಕ ಸಾಧಿಸಿತು.

2015ರ ಮೇ 1ರಂದು ರೀಚ್ 3ಬಿ ಮುಖಾಂತರ ಪೀಣ್ಯ ಕೈಗಾರಿಕಾ ಪ್ರದೇಶ ಮೆಟ್ರೋ ನಿಲ್ದಾಣದಿಂದ ನಾಗಸಂದ್ರ(3.16 ಕಿ.ಮೀ)ವರೆಗೆ ಸಂಪರ್ಕ ಕಲ್ಪಿಸಿತು. ಅದೇ ಸಾಲಿನ ಜ.18ರಂದು ರೀಚ್ 2ರ ಮುಖಾಂತರ ಮೈಸೂರು ರಸ್ತೆಯಿಂದ ಮಾಗಡಿ ರಸ್ತೆ ಮೆಟ್ರೋ ನಿಲ್ದಾಣ(6.69 ಕಿ.ಮೀ)ದವರೆಗೆ ಮತ್ತು 2016ರ ಎಪ್ರಿಲ್ 29ರಂದು ಕಬ್ಬನ್‌ಪಾರ್ಕ್ ಮೆಟ್ರೋ ನಿಲ್ದಾಣದಿಂದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದವರೆಗಿನ ಅಂಡರ್‌ಗ್ರೌಂಡ್ ಸೆಕ್ಷನ್ ಅನ್ನು ಆರಂಭಿಸಲಾಗಿತ್ತು.

ಇದೀಗ ಮಂತ್ರಿ ಸ್ಕ್ವೆ ರ್ ಸಂಪಿಗೆ ರಸ್ತೆ ನಿಲ್ದಾಣದಿಂದ ಆರಂಭಗೊಳ್ಳಲಿರುವ ಮಾರ್ಗವು ಮೆಜೆಸ್ಟಿಕ್, ಚಿಕ್ಕಪೇಟೆ, ಕೆ.ಆರ್.ಮಾರುಕಟ್ಟೆ, ನ್ಯಾಷನಲ್ ಕಾಲೇಜು, ಲಾಲ್‌ಬಾಗ್, ಸೌತ್ ಎಂಡ್ ಸರ್ಕಲ್, ಜಯನಗರ, ರಾಷ್ಟ್ರೀಯ ವಿದ್ಯಾಲಯ ರಸ್ತೆ, ಬನಶಂಕರಿ, ಜಯಪ್ರಕಾಶ್‌ನಗರದ ಮೂಲಕ ಯಲಚೇನಹಳ್ಳಿ ಮೆಟ್ರೋ ನಿಲ್ದಾಣ(11.30 ಕಿ.ಮೀ)ದವರೆಗೆ ಆರಂಭಗೊಳ್ಳಲಿದೆ. ಆ ಮೂಲಕ 42.20 ಕಿ.ಮೀ ಉದ್ದದ ನಮ್ಮ ಮೆಟ್ರೋ ಹಂತ-1ರ ಸಂಪೂರ್ಣ ಜಾಲ ಪ್ರಯಾಣಿಕರ ಸಂಚಾರಕ್ಕೆ ಮುಕ್ತಗೊಳ್ಳಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News