ಸಹಕಾರ ಬ್ಯಾಂಕುಗಳ ಸಾಲ; ಶಿವಲಿಂಗೇಗೌಡ-ಸಿ.ಎನ್.ಬಾಲಕೃಷ್ಣ ಜಟಾಪಟಿ

Update: 2017-06-16 13:19 GMT

ಬೆಂಗಳೂರು, ಜೂ. 16: ‘ಕಮಿಷನ್ ಪಡೆದು ಸಹಕಾರ ಬ್ಯಾಂಕುಗಳು ಕೊಟ್ಟವರಿಗೆ ಸಾಲ ಕೊಡುತ್ತಿವೆ. ನಿಮ್ಮ ಕೋ-ಆಪರೇಟಿವ್ ಬ್ಯಾಂಕುಗಳ ಕತೆ ನಮಗೆ ಗೊತ್ತಿಲ್ವೇನ್ರೀ..’ ಎಂದು ಜೆಡಿಎಸ್ ಸದಸ್ಯ ಶಿವಲಿಂಗೇಗೌಡ ನೀಡಿದ ಹೇಳಿಕೆಗೆ ಅದೇ ಪಕ್ಷದ ಸದಸ್ಯ ಸಿ.ಎನ್.ಬಾಲಕೃಷ್ಣ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಪ್ರಸಂಗ ನಡೆಯಿತು.

ಶುಕ್ರವಾರ ವಿಧಾನಸಭೆಯಲ್ಲಿ ಬೇಡಿಕೆಗಳ ಮೇಲೆ ಕುಮಾರಸ್ವಾಮಿ ಮಾತನಾಡುತ್ತಿದ್ದ ವೇಳೆ ಮಧ್ಯ ಪ್ರವೇಶಿಸಿದ ಶಿವಲಿಂಗೇಗೌಡ, ಸಹಕಾರ ಬ್ಯಾಂಕ್‌ಗಳಿಗಿಂತಲೂ ವಾಣಿಜ್ಯ ಬ್ಯಾಂಕ್‌ಗಳಲ್ಲಿ ಸಾಲ ಪಡೆದ ರೈತರು ಹೆಚ್ಚು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಸಹಕಾರ ಬ್ಯಾಂಕ್ ಸಾಲಮನ್ನಾ ಮಾಡಿದರೆ ಪದೇ ಪದೇ ಸಾಲ ಪಡೆಯುವವರಿಗೆ ಅನುಕೂಲ ಆಗುತ್ತದೆ ಎಂದರು.

ಇದರಿಂದ ಕೆರಳಿದ ಜೆಡಿಎಸ್ ಸದಸ್ಯ ಬಾಲಕೃಷ್ಣ, ಕೊಟ್ಟವರಿಗೆ ಹೇಗೆ ಸಾಲ ಕೊಡಲಿಕ್ಕೆ ಬರುತ್ತದೆ. ನಿಮ್ಮ ಹೇಳಿಕೆ ಸರಿಯಲ್ಲ, ಸಹಕಾರ ಬ್ಯಾಂಕುಗಳ ಸಾಲ ವಿತರಣೆ ಬಗ್ಗೆ ನಿಮಗೆ ಸರಿಯಾಗಿ ಮಾಹಿತಿಯೇ ಇಲ್ಲ ಎಂದು ಬುದ್ಧಿವಾದ ಹೇಳಲು ಮುಂದಾದರು.
ಇದಕ್ಕೆ ಧ್ವನಿಗೂಡಿಸಿದ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರೂ ಆಗಿರುವ ಆಡಳಿತ ಪಕ್ಷದ ಸದಸ್ಯ ಕೆ.ಎನ್.ರಾಜಣ್ಣ, ಸಹಕಾರ ಬ್ಯಾಂಕುಗಳಲ್ಲಿ ಕೊಟ್ಟವರಿಗೆ ಪದೇ ಪದೇ ಸಾಲ ಕೊಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು. ‘ನನಗೆ ಗೊತ್ತಿದೆ ಕಾರ್ಯದರ್ಶಿಗಳು ಶೇ.2ರಷ್ಟು ಕಮೀಷನ್ ಪಡೆದು ಕೊಟ್ಟವರಿಗೆ ಸಾಲ ಕೊಡ್ತಾರೆ’ ಎಂದು ಶಿವಲಿಂಗೇಗೌಡ ತಮ್ಮ ಹೇಳಿಕೆಯನ್ನು ಸಮರ್ಥಿಸಿದರು.

ಈ ಹಂತದಲ್ಲಿ ಶಿವಲಿಂಗೇಗೌಡ ಹಾಗೂ ಬಾಲಕೃಷ್ಣ ಮಧ್ಯೆ ಏರಿದ ಧ್ವನಿಯಲ್ಲಿ ವಾಗ್ವಾದ, ಜಟಾಪಟಿಯೂ ನಡೆಯಿತು. ಶಿವಲಿಂಗೇಗೌಡರ ಹೇಳಿಕೆಗೆ ಆಡಳಿತ ಪಕ್ಷದ ಶಿವರಾಂ ಹೆಬ್ಬಾರ್, ಶಿವಾನಂದ ಪಾಟೀಲ್, ಷಡಕ್ಷರಿ ಸೇರಿದಂತೆ ಇನ್ನಿತರರು ಆಕ್ಷೇಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News