ರೈತರಿಂದ ಸಾಲ ವಸೂಲಿ ಮಾಡದಂತೆ ಬ್ಯಾಂಕ್ ಗಳಿಗೆ ಸೂಚನೆ: ರಮೇಶ್ ಕುಮಾರ್

Update: 2017-06-16 14:34 GMT

ಬೆಂಗಳೂರು, ಜೂ. 16: ‘ಕಾರ್ಪೋರೇಟ್ ಕಂಪೆನಿಗಳು, ಕೈಗಾರಿಕೋದ್ಯಮಿಗಳಿಗೆ ಬ್ಯಾಂಕುಗಳು ನೀಡಿರುವ ತೆರಿಗೆ ವಿನಾಯ್ತಿ, ಎನ್‌ಪಿಎ ವಿವರ ನೀಡುವವರೆಗೂ ರೈತರಿಂದ ಸಾಲ ವಸೂಲಿ ಮಾಡಬಾರದು ಎಂದು ವಿಧಾನಸಭೆ ಸರ್ವಾನುಮತದ ನಿರ್ಣಯ ಅಂಗೀಕರಿಸಬೇಕೆಂದು ಆರೋಗ್ಯ ಸಚಿವ ಕೆ.ಆರ್. ರಮೇಶ್‌ಕುಮಾರ್ ಸಲಹೆ ನೀಡಿದ್ದಾರೆ.

ಶುಕ್ರವಾರ ವಿಧಾನಸಭೆಯಲ್ಲಿ ವಿವಿಧ ಇಲಾಖೆ ಬೇಡಿಕೆಗಳ ಮೇಲಿನ ಚರ್ಚೆಯಲ್ಲಿ ಕುಮಾರಸ್ವಾಮಿ ಮಾತನಾಡುತ್ತಿದ್ದ ವೇಳೆ ಮಧ್ಯಪ್ರವೇಶಿಸಿ ಮಾತನಾಡಿದ ಅವರು, ರೈತರ ಸಾಲಮನ್ನಾ ಘೋಷಿಸಿದರೆ ದೇಶದ ಆರ್ಥಿಕ ಸ್ಥಿತಿ ಅಲ್ಲೋಲ-ಕಲ್ಲೋಲ ಆಗುತ್ತದೆ ಎಂದು ಆರ್‌ಬಿಐ ಗೌರ್ನರ್ ಸೇರಿದಂತೆ ಆರ್ಥಿಕ ತಜ್ಞರು ವಿಶ್ಲೇಷಿಸುತ್ತಾರೆ.

  ಆದರೆ, ಕಾಪೋರೇಟ್ ಉದ್ಯಮಿಗಳು, ಕೈಗಾರಿಕೋದ್ಯಮಿಗಳಿಗೆ 10 ವರ್ಷಗಳಲ್ಲಿ 11ಲಕ್ಷ ಕೋಟಿ ರೂ.ತೆರಿಗೆ ವಿನಾಯ್ತಿ ನೀಡಲಾಗಿದೆ. ಅಲ್ಲದೆ, ಎನ್‌ಪಿಎ 6.10 ಲಕ್ಷ ಕೋಟಿ ರೂ.ಗಳಾಗಿದ್ದು, ಇದರಿಂದ ಆರ್ಥಿಕ ಸ್ಥಿತಿ ಹದಗೆಡುವುದಿಲ್ಲವೇ ಎಂದು ರಮೇಶ್ ಕುಮಾರ್ ಪ್ರಶ್ನಿಸಿದರು.

 ಮಲ್ಯ ಮನೆ ಮುಂದೆ ಬ್ಯಾಂಡ್: ಸಾಲಮನ್ನಾ ವಿಷಯದಲ್ಲಿ ರಾಜಕೀಯ ಬೇಡ. ಪಕ್ಷದ ಆಧಾರದಲ್ಲಿ ವಿಭಜನೆಯೂ ಬೇಡ. ಸಾಮಾನ್ಯ ಜನರು ಬ್ಯಾಂಕುಗಳಲ್ಲಿ ಇಟ್ಟಿರುವ ಠೇವಣಿ ಹಣದಲ್ಲಿ ಸಾಲ ಪಡೆದ ಉದ್ಯಮಿಗಳೆಲ್ಲ ಒಗ್ಗಟ್ಟಿನಿಂದ ಇದ್ದಾರೆ. ಆದರೆ, ನಾವು ಮಾತ್ರ ಕಿತ್ತಾಡುತ್ತಲೇ ಇದ್ದೇನೆ.

ರೈತರ ಸಮಸ್ಯೆಯ ಮೂಲವನ್ನು ಅರಿತುಕೊಳ್ಳಬೇಕು. ರೈತ ಬ್ಯಾಂಕುಗಳಿಂದ ಪಡೆದ 3 ಸಾವಿರ ರೂ.ಸಾಲ ಮರು ಪಾವತಿ ಮಾಡದಿದ್ದರೆ ಆತನ ಮನೆ ಮುಂದೆ ತಮಟೆ ಬಾರಿಸುತ್ತಾರೆ. ಆದರೆ, ಕೋಟ್ಯಂತರ ರೂ.ಸಾಲ ಪಡೆದು ಮರುಪಾವತಿ ಮಾಡದ ವಿಜಯ್ ಮಲ್ಯ ಮನೆ ಮುಂದೆ ಬ್ಯಾಂಡ್ ಬಾರಿಸುತ್ತಾರೆಯೇ ಎಂದು ಪ್ರಶ್ನಿಸಿದರು.

 ಮರು ಪಾವತಿಯೇ ಸಾಧ್ಯವಿಲ್ಲದ ಎನ್‌ಪಿಎ ಸಾಲ ಸಾಕಷ್ಟು ಪ್ರಮಾಣದಲ್ಲಿದೆ. ಕೈಗಾರಿಕೋದ್ಯಮಿಗಳ ಕೆಟ್ಟ ಸಾಲವನ್ನು ಒಳ್ಳೆ ಸಾಲವನ್ನಾಗಿ ಪರಿವರ್ತಿಸಿಕೊಡುತ್ತಾರೆ. ಆದರೆ, ರೈತರಿಗೆ ಮಾತ್ರ ಯಾವುದೇ ಸಾಲದ ನೀತಿಯಿಲ್ಲ ಎಂದು ರಮೇಶ್ ಕುಮಾರ್ ಬ್ಯಾಂಕುಗಳ ರೈತ ವಿರೋಧಿ ನೀತಿಯನ್ನು ಎಳೆಎಳೆಯಾಗಿ ಬಿಚ್ಚಿಟ್ಟರು.

ರಾಜಕುಮಾರಿ: ಉದ್ಯಮಿಗಳ ಸಾಲ ನೀತಿ ಬಗ್ಗೆ ಆರ್‌ಬಿಐನ ನಿವೃತ್ತ ಗೌರ್ನರ್ ಬ್ಯಾಂಕುಗಳ ಕೆಟ್ಟ ಸಾಲ ಒಳ್ಳೆ ಸಾಲವನ್ನಾಗಿ ಪರಿವರ್ತಿಸುವುದು ‘ಹಂದಿ ತುಟಿಗೆ ಲಿಫ್‌ಸ್ಟಿಕ್ ಹಚ್ಚಿ ರಾಜಕುಮಾರಿ’ ಮಾಡಿದಂತೆ. ಏನೇ ಮಾಡಿದರೂ ಹಂದಿ ಎಂದಿಗೂ ರಾಜಕುಮಾರಿ ಆಗಲು ಸಾಧ್ಯವಿಲ್ಲ ಎಂದು ಹೇಳಿದ್ದರು ಎಂದು ರಮೇಶ್ ಕುಮಾರ್ ಉಲ್ಲೇಖಿಸಿದರು.

ರೈತರಿಗೆ ಸಾಲಮನ್ನಾ ಎಂದರೆ ನೂರಾರು ಅಡೆತಡೆಗಳು. ಕೈಗಾರಿಕೋದ್ಯಮಿಗಳಿಗೆ ಮಾತ್ರ ಯಾವುದೇ ನಿರ್ಬಂಧವಿಲ್ಲ. ರೈತರಿಗೆ ಹಸು ಸಾಲ ಕೊಡಲು ನೂರಾರು ಷರತ್ತುಗಳನ್ನು ಬ್ಯಾಂಕುಗಳು ಹಾಕುತ್ತವೆ. ಆದರೆ, ಬ್ಯಾಂಕುಗಳಿಂದ ಸಾವಿರಾರು ಕೋಟಿ ರೂ. ಸಾಲ ಪಡೆದು ಬಾಕಿ ಉಳಿಸಿಕೊಳ್ಳುವವರು ರಾಜಸಭೆಗೂ ಆಯ್ಕೆಯಾಗಿ ಬರುತ್ತಾರೆ ಎಂದು ಹೇಳಿದರು.

‘ಟಿವಿ ಚಾನಲ್‌ಗಳು, ಪತ್ರಿಕೆಗಳ ಮಾಲಕರೂ ಅವರೇ ಆಗಿರುತ್ತಾರೆ. ಪ್ರಧಾನ ಮಂತ್ರಿಗಳನ್ನು, ಮುಖ್ಯಮಂತ್ರಿಗಳನ್ನು ಮಾಡುವವರು ಮತ್ತು ಕೆಳಗೆ ಇಳಿಸುವವರೂ ಎಲ್ಲ ಅವರೇ ಆಗಿರುತ್ತಾರೆ. ಬ್ರಿಟಿಷರು ಹೋದರೂ ಅವರ ಅಪ್ಪಂದಿರು ಬಂದು ಇಲ್ಲಿ ಕೂತಿದ್ದಾರೆ’

-ಕೆ.ಆರ್.ರಮೇಶ್ ಕುಮಾರ್  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News