ಆಗಸ್ಟ್ 1ರಿಂದ ಇ-ಸ್ವತ್ತು ಸಕಾಲ ವ್ಯಾಪ್ತಿಗೆ: ಎಚ್.ಕೆ.ಪಾಟೀಲ್

Update: 2017-06-16 14:34 GMT

ಬೆಂಗಳೂರು, ಜೂ.16: ಆಸ್ತಿ ಪರಭಾರೆಯ ಸಂದರ್ಭದಲ್ಲಿ ಖರೀದಿದಾರರಿಗೆ ಮೋಸವಾಗಬಾರದು ಎಂಬ ಕಾರಣಕ್ಕಾಗಿ ಇ-ಸ್ವತ್ತು ಪರಿಚಯಿಸಲಾಗಿದ್ದು, ಆಗಸ್ಟ್ 1 ರಿಂದ ಇ-ಸ್ವತ್ತು ಯೋಜನೆಯನ್ನು ಸಕಾಲ ಯೋಜನೆಯಡಿ ತರಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ.ಪಾಟೀಲ್ ಹೇಳಿದ್ದಾರೆ.

     ಶುಕ್ರವಾರ ವಿಧಾನ ಪರಿಷತ್‌ನ ಪ್ರಶ್ನೋತ್ತರ ವೇಳೆಯಲ್ಲಿ ಜೆಡಿಎಸ್ ಸದಸ್ಯ ಕಾಂತರಾಜು ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, ಗ್ರಾಪಂ ವ್ಯಾಪ್ತಿಯಲ್ಲಿ ಕ್ರಮಬದ್ಧ ಆಸ್ತಿಗಳಿಗೆ ನಿಗದಿತ ನಮೂನೆ 9 ಹಾಗೂ 11 ಎ ನಲ್ಲಿ ಖಾತಾ ಮಾಡಿಕೊಡಬೇಕು. ಅದನ್ನು ಬಿಟ್ಟು ನಿಯಮ ಮೀರಿ ಆಸ್ತಿಗಳ ಖಾತಾ ಮಾಡಿದರೆ, ಅಂತಹ ಅಧಿಕಾರಿಗಳನ್ನು ಜೈಲಿಗೆ ಕಳುಹಿಸಲಾಗುವುದು ಎಂದು ಹೇಳಿದರು. ನಮೂನೆ 9 ಮತ್ತು 11 ಎ ಅಡಿಯಲ್ಲಿ ವಿಧಿಸಲಾಗಿರುವ ಷರತ್ತುಗಳ ಅನ್ವಯವೇ ಆಸ್ತಿಯನ್ನು ಇ ಖಾತೆಯಡಿ ನೀಡಬೇಕು. ತಪ್ಪಿದಲ್ಲಿ ಶಿಕ್ಷೆ ಖಚಿತ ಎಂದು ಹೇಳಿದರು.

   ನಿವೇಶನ ಮತ್ತು ಆಸ್ತಿಗೆ ಸಂಬಂಧಿಸಿದಂತೆ ಇ ಖಾತಾ ಮಾಡಿಕೊಡಲು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಅಥವಾ ತಾಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳು ಲಂಚ ಕೇಳಿದ ನಿರ್ದಿಷ್ಟ ಪ್ರಕರಣಗಳಿದ್ದರೆ ಅಂತಹ ಅಧಿಕಾರಿಗಳ ವಿರುದ್ಧ ಸಮಗ್ರ ತನಿಖೆ ನಡೆಸುವುದಾಗಿ ತಿಳಿಸಿದರು.

       ಜೆಡಿಎಸ್‌ನ ಕಾಂತರಾಜು ಅವರು ಕೇಳಿದ ಪ್ರಶ್ನೆಗೆ ಪೂರಕವಾಗಿ ಬಿಜೆಪಿಯ ರಾಮಚಂದ್ರೇಗೌಡ ಹಾಗೂ ಸಚಿವ ಎಂ.ಆರ್.ಸೀತಾರಾಮ್ ನೀಡಿದ ಸಲಹೆಯ ಆಧಾರದ ಮೇಲೆ ಇ ಸ್ವತ್ತು ಅಡಿಯಲ್ಲಿ ಇ ಖಾತೆ ಮಾಡಿಕೊಡುವ ಯೋಜನೆಯನ್ನು ಆಗಸ್ಟ್ 1ರಿಂದ ಸಕಾಲ ಯೋಜನೆಯಡಿ ತರಲಾಗುವುದು. ಇದರ ಮೇಲ್ವಿಚಾರಣೆಗಾಗಿ ಗ್ರಾಮೀಣಾಭಿವೃದ್ಧಿ ನಿರ್ದೇಶಕರನ್ನು ನಿಯೋಜಿಸಲಾಗುವುದು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News