ಸಣ್ಣ ವಿದ್ಯುತ್ ಮಗ್ಗಗಳ ಮೇಲಿನ ಜಿಎಸ್‌ಟಿ ರದ್ದತಿಗೆ ಆಗ್ರಹ
ಬೆಂಗಳೂರು, ಜೂ. 16: ಸಣ್ಣ ವಿದ್ಯುತ್ ಮಗ್ಗಗಳ ನೇಕಾರರು ತಯಾರಿಸುವ ರೇಷ್ಮೆ ಹಾಗೂ ಕೃತಕ ರೇಷ್ಮೆ ಜವಳಿ ಮೇಲೆ ವಿಧಿಸಿರುವ ಶೇ.5 ರಷ್ಟು ಜಿಎಸ್‌ಟಿ ತೆರಿಗೆಯನ್ನು ರದ್ದುಪಡಿಸಬೇಕು ಎಂದು ಮೈಸೂರು ಪವರ್ ಲೂಮ್ ರೇಷ್ಮೆ ಉತ್ಪನ್ನ ತಯಾರಕರ ಸಹಕಾರ ಸಂಘ ಆಗ್ರಹಿಸಿದೆ.
ಸಣ್ಣ ವಿದ್ಯುತ್ ಮಗ್ಗದಲ್ಲಿ ತಯಾರಿಸುವ ರೇಷ್ಮೆ ಆರ್ಟ್ ಸಿಲ್ಕ್ ಹಾಗೂ ಪಾಲಿಸ್ಟರ್ ಬಟ್ಟೆಗಳಿಗೆ ಜಿಎಸ್‌ಟಿ ತೆರಿಗೆ ವಿಧಿಸಿರುವುದರಿಂದ ನೇಕಾರರಿಗೆ ತೊಂದರೆ ಆಗುತ್ತದೆ. ಇದುವರೆಗೂ ಈ ಕೈಮಗ್ಗದ ಉತ್ಪನ್ನಗಳಿಗೆ ಯಾವುದೇ ತೆರಿಗೆಗಳನ್ನು ವಿಧಿಸಿರಲಿಲ್ಲ. ಆದರೆ, ಪ್ರಸ್ತುತ ಶೇ.5 ರಷ್ಟು ಜಿಎಸ್‌ಟಿ ವಿಧಿಸಿದ್ದು, ಕೂಡಲೇ ರಾಜ್ಯ ಸರಕಾರ ಈ ತೆರಿಗೆಯನ್ನು ರದ್ಧು ಮಾಡಬೇಕು ಎಂದು ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಸಲ್ಲಿಸಬೇಕು ಎಂದು ಸಂಘದ ಅಧ್ಯಕ್ಷ ಎಂ.ಲಕ್ಷ್ಮಿನಾರಾಯಣ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ರಾಜ್ಯದಲ್ಲಿ 80 ಸಾವಿರ ವಿದ್ಯುತ್ ಆಧಾರಿತ ಮಗ್ಗಗಳಿವೆ. ಇದರಲ್ಲಿ ಶೇ.40 ರಷ್ಟು ಮಗ್ಗಗಳಲ್ಲಿ ರೇಷ್ಮೆ ಬಟ್ಟೆಗಳು ಶೇ.60 ರಷ್ಟು ಮಗ್ಗಗಳಲ್ಲಿ ಆರ್ಟ್‌ಸಿಲ್ಕ್, ಪಾಲಿಸ್ಟರ್ ಬಟ್ಟೆಗಳನ್ನು ತಯಾರಿಸುತ್ತಾರೆ. ಇವರಲ್ಲಿ ಬಹುತೇಕರು ಅನಕ್ಷರಸ್ಥರಾಗಿದ್ದು, ಬಡ ನೇಕಾರರಾಗಿದ್ದಾರೆ. ಅರೆಯಾಂತ್ರಿಕ ಮಗ್ಗಗಳಲ್ಲಿ ಸಾಂಪ್ರದಾಯಕ ಶೈಲಿಯ ಜರಿ ಸೀರೆಗಳು, ಪಂಚೆ, ಶಲ್ಯ ಮುಂತಾದ ಬಟ್ಟೆಗಳನ್ನು ತಯಾರಿಸುತ್ತಾರೆ. ಇದರ ಮೇಲೆ ಸರಕಾರ ಜಿಎಸ್‌ಟಿ ಹೊರೆ ಹಾಕುವುದರಿಂದ ಮುಂದಿನ ದಿನಗಳಲ್ಲಿ ಸಾಂಪ್ರದಾಯಿಕ ಬಟ್ಟೆಗಳನ್ನು ಉಪಯೋಗಿಸುವವರ ಸಂಖ್ಯೆ ಕಡಿಮೆಯಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಗುಡಿ ಕೈಗಾರಿಕೆಯಾದ ರೇಷ್ಮೆ ಜವಳಿ ಹಾಗೂ ಕೃತಕ ರೇಷ್ಮೆ ಜವಳಿ ಉತ್ಪಾದನೆ ಬಹಳ ಪುರಾತನವಾದುದು. ಈ ಉದ್ಯಮ ಕಳೆದ ಹಲವಾರು ವರ್ಷಗಳಿಂದ ಸಾಕಷ್ಟು ತೊಂದರೆ ಅನುಭಸಿದೆ. ಇಂತಹ ಪರಿಸ್ಥಿತಿಯಲ್ಲಿ ಕೇಂದ್ರ ಸರಕಾರ ಗುಡಿ ಕೈಗಾರಿಕೆಯನ್ನು ಜಿಎಸ್‌ಟಿ ವ್ಯಾಪ್ತಿಗೆ ತಂದಿರುವುದು ನೇಕಾರರ ಬದುಕಿನ ಮೇಲೆ ಬರೆ ಎಳೆದಂತಾಗಿದೆ. ಇದರಿಂದಾಗಿ ಜವಳಿ ಉತ್ಪಾದನಾ ಕೈಗಾರಿಕೆ ವ್ಯಾಪಾರವಿಲ್ಲದೆ ನಶಿಸಿ ಹೋಗುತ್ತದೆ ಎಂದರು.