×
Ad

ನಲ್ಲೂರು ಪ್ರಸಾದ್ ಜಾತ್ಯತೀತ ಮನೋಧರ್ಮವುಳ್ಳ ವ್ಯಕ್ತಿ: ಎಸ್.ಜಿ.ಸಿದ್ದರಾಮಯ್ಯ

Update: 2017-06-16 21:11 IST

ಬೆಂಗಳೂರು, ಜೂ. 16: ಜಾತ್ಯತೀತ ಮನೋಧರ್ಮ ಹಾಗೂ ನಂಬಿದವರಿಗೆ ಯಾವುದೇ ಕಾರಣಕ್ಕೂ ನಂಬಿಕೆ ದ್ರೋಹ ಮಾಡದೇ ಬದುಕಿದ ವ್ಯಕ್ತಿ ಡಾ.ಆರ್.ಕೆ.ನಲ್ಲೂರು ಪ್ರಸಾದ್ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

ಶುಕ್ರವಾರ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಆರ್.ಕೆ.ನಲ್ಲೂರು ಪ್ರಸಾದ್ ಅಭಿನಂದನಾ ಸಮಿತಿಯಿಂದ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಎಲ್ಲರನ್ನೂ ಅತಿಯಾಗಿ ಗೌರವಿಸುತ್ತಿದ್ದ ಹಾಗೂ ಪ್ರೀತಿಸುತ್ತಿದ್ದ ವ್ಯಕ್ತಿ. ಎಂದಿಗೂ ದ್ವೇಷ ಎಂಬುದನ್ನು ಅವರಲ್ಲಿ ಕಂಡಿರಲಿಲ್ಲ. ಅವರೊಬ್ಬ ಇಂದಿನ ಪೀಳಿಗೆಯ ಅಜಾತ ಶತ್ರುವಾಗಿದ್ದಾರೆ ಎಂದು ಹೇಳಿದರು.

ಅನೇಕ ಜನರು ಬದುಕಿನಲ್ಲಿ ಬಂದು ಹೋಗುತ್ತಾರೆ. ಆದರೆ, ಎಲ್ಲರೂ ಸ್ನೇಹಿತರಾಗಿ ಉಳಿಯುವುದಿಲ್ಲ. ಅಂತಹದರಲ್ಲಿ ಸ್ನೇಹ ಎಂಬ ಪದಕ್ಕೆ ಬದುಕಿನ ಅರ್ಥ ತೋರಿಸಿಕೊಟ್ಟ ವ್ಯಕ್ತಿ ನಲ್ಲೂರು ಪ್ರಸಾದ್. ದೊರೆಯಂತೆ ಬದುಕಿದ್ದಾರೆ, ಬದುಕುತ್ತಿದ್ದಾರೆ. ವಿನಯಕ್ಕೆ ತಲೆ ಬಾಗುತ್ತಾ, ತನ್ನ ಸ್ವಾಭಿಮಾನವನ್ನು ಕಾಪಾಡಿಕೊಂಡಿದ್ದಾರೆ ನಲ್ಲೂರು ಎಂದು ಸಿದ್ದರಾಮಯ್ಯ ಬಣ್ಣಿಸಿದರು.

ನಲ್ಲೂರು ಪ್ರಸಾದ್‌ರ ಜನಪರವಾದ ಮುಗ್ದತೆ, ಅಸ್ಮಿತೆ ಹಾಗೂ ಗ್ರಾಮೀಣ ಭಾಗದ ಸೊಗಡನ್ನು ಅವರ ಬರಹದಲ್ಲಿ ದಾಖಲಿಸಿದ್ದಾರೆ ಎಂದ ಅವರು, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಕಸಾಪವನ್ನು ಸಾಹಿತ್ಯಕ್ಕೆ ಮೀಸಲಿಡದೆ ಬದುಕಿನ ಹಲವು ಸಮಸ್ಯೆಗಳಿಗೆ ವೇದಿಕೆಯಾಗಿಸಿದ್ದಾರೆ. ಸಾಹಿತ್ಯ ಸಮ್ಮೇಳನದಲ್ಲಿ ಕೃಷಿ, ಕಾರ್ಮಿಕ, ಮಹಿಳೆ, ದಲಿತರ ಸಮಸ್ಯೆಗಳಿಗೆ ಸಂಬಂಧಿಸಿದ ಚರ್ಚೆಗೆ ವೇದಿಕೆ ಕಲ್ಪಿಸಿದ್ದರು. ಅಧಿಕಾರದಲ್ಲಿದ್ದಾಗ ಏನು ಮಾಡುತ್ತೇವೆ ಅದು ನಮ್ಮನ್ನು ಜೀವಂತವಾಗಿಡುತ್ತದೆ ಎಂದು ತಿಳಿಸಿದರು.

ಸಮಾಜದಲ್ಲಿ ತಪ್ಪು ಮಾಡಿದ ವ್ಯಕ್ತಿ ತನ್ನ ತಪ್ಪನ್ನು ಒಪ್ಪಿಕೊಳ್ಳಲು ನೈತಿಕ ಧೈರ್ಯ ಬೇಕು. ಅದರಲ್ಲಿ ನಲ್ಲೂರು ಪ್ರಸಾದ್ ಮೊದಲಿಗರಾಗಿದ್ದು, ಪ್ರತಿಯೊಂದು ತಪ್ಪನ್ನು ನೇರವಾಗಿ ಒಪ್ಪಿಕೊಳ್ಳುತ್ತಿದ್ದ ವ್ಯಕ್ತಿತ್ವ ಎಂದ ಸಿದ್ದರಾಮಯ್ಯ, ನಾಡಿನಲ್ಲಿ ಗುಂಪುಗಳು ಜಾಸ್ತಿಯಾದಂತೆ ಸಾಹಿತ್ಯ ವಿಮರ್ಶೆ ಕಳಪೆ ಮತ್ತು ವೈಭವೀಕರಣಗೊಳ್ಳುತ್ತಿದೆ. ಶಿಶುನಾಳ ಶರೀಫ ಸೇರಿದಂತೆ ಹಲವರ ಸಾಹಿತ್ಯ ಸಮಾಜದ ಮುಖ್ಯವಾಹಿನಿಗೆ ಬರಲು ನೂರಾರು ವರ್ಷಗಳೇ ಹಿಡಿಯಿತು ಎಂದು ಬೇಸರ ವ್ಯಕ್ತಪಡಿಸಿದರು.

ಶಾಸಕ ಎನ್.ಚಲುವರಾಯಸ್ವಾಮಿ ಮಾತನಾಡಿ, ಸ್ನೇಹಕ್ಕೆ, ವಿಶ್ವಾಸಕ್ಕೆ ಮತ್ತೊಂದು ಹೆಸರು ನಲ್ಲೂರು ಪ್ರಸಾದ್. ಜಾತಿ, ಧರ್ಮ, ಮತ ಎಂದು ಭೇದ-ಭಾವ ಮಾಡದೆ ಸಮಾನವಾಗಿ ಕಾಣುತ್ತಿದ್ದ ಜಾತ್ಯತೀತ ಮನೋಭಾವವುಳ್ಳ ವ್ಯಕ್ತಿಯಾಗಿದ್ದರು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಆದಿ ಚುಂಚನಗಿರಿ ಮಠದ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಪಂಚಮಶಾಲಿಮಠದ ಜಯಮೃತ್ಯುಂಜಯ ಸ್ವಾಮೀಜಿ, ಕುವೆಂಪು ಪ್ರತಿಷ್ಠಾನದ ಅಧ್ಯಕ್ಷ ಡಾ.ಹಂಪ ನಾಗರಾಜಯ್ಯ, ನಲ್ಲೂರು ಪ್ರಸಾದ್ ಅವರ ಪತ್ನಿ ನಳಿನಿ ಪ್ರಸಾದ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News