ಕಲ್ಲು ಕ್ವಾರಿಗೆ ಕಸ ವಿಲೇವಾರಿ ಸ್ಥಗಿತ: ಬಿಬಿಎಂಪಿ ಅಧಿಕಾರಿಗಳಿಂದ ಭರವಸೆ
ಬೆಂಗಳೂರು, ಜೂ.17: ನಗರದ ಬೆಳ್ಳಹಳ್ಳಿ ಹಾಗೂ ಮಿಟ್ಟಗಾನಹಳ್ಳಿಯ ಕಲ್ಲು ಕ್ವಾರಿಗೆ ಮೂರು ತಿಂಗಳೊಳಗೆ ಸಂಪೂರ್ಣವಾಗಿ ಕಸ ಸುರಿಯುವುದನ್ನು ನಿಲ್ಲಿಸಲಾಗುವುದು ಎಂದು ಬಿಬಿಎಂಪಿ ಅಧಿಕಾರಿಗಳು ಭರವಸೆ ನೀಡಿದ್ದಾರೆ.
ಈ ಮೂಲಕ ಈ ಭಾಗದಲ್ಲಿ ಕಸ ಸುರಿಯುವುದನ್ನು ವಿರೋಧಿಸಿ ಗ್ರಾಮಸ್ಥರು 11 ದಿನಗಳಿಂದ ನಡೆಸುತ್ತಿದ್ದ ಅಹೋರಾತ್ರಿ ಧರಣಿಗೆ ಜಯ ಸಿಕ್ಕಿದಂತಾಗಿದೆ. ಗ್ರಾಮಸ್ಥರ ಹೋರಾಟಕ್ಕೆ ಮಣಿದ ಬಿಬಿಎಂಪಿ ಅಧಿಕಾರಿಗಳು ಮೂರು ತಿಂಗಳ ನಂತರ ಈ ಭಾಗದಲ್ಲಿ ಸಂಪೂರ್ಣವಾಗಿ ಕಸ ಸುರಿಯುವುದನ್ನು ನಿಲ್ಲಿಸುವ ಭರವಸೆಯನ್ನು ನೀಡಿದ್ದಾರೆ.
ನಗರದ ಮಲ್ಲೇಶ್ವರದ ಬಿಬಿಎಂಪಿ ಕಚೇರಿಯಲ್ಲಿ ಶಾಸಕ ಅರವಿಂದ ಲಿಂಬಾವಳಿ, ಪಾಲಿಕೆ ಸದಸ್ಯ ಮುನಿಂದ್ರ ಕುಮಾರ್ ನೇತೃತ್ವದಲ್ಲಿ ಬಿಬಿಎಂಪಿ ಅಧಿಕಾರಿಗಳು ಮತ್ತು ಗ್ರಾಮಸ್ಥರ ನಡುವೆ ನಡೆದ ಸಭೆಯಲ್ಲಿ ಪಾಲಿಕೆ ಆಯುಕ್ತ ಮಂಜುನಾಥ್‌ಪ್ರಸಾದ್ ಹಾಗೂ ವಿಶೇಷ ಆಯುಕ್ತ ಸರ್ಫರಾಜ್ ಖಾನ್ ಪ್ರತಿಭಟನಾಕಾರರ ಮನವೂಲಿಸಿ ಮೂರು ತಿಂಗಳ ಕಾಲಾವಕಾಶ ಕೋರಿದ್ದಾರೆ.
ಅಧಿಕಾರಿಗಳ ಭರವಸೆಗೆ ಜಗ್ಗದೆ ಪ್ರತಿಭಟನಾಕಾರರು ಪಾಲಿಕೆ ವತಿಯಿಂದ ಲಿಖಿತ ರೂಪದಲ್ಲಿ ಮುಚ್ಚಳಿಕೆಯನ್ನು ನೀಡಿದ ನಂತರ ಧರಣಿಯನ್ನು ಹಿಂಪಡೆಯುವ ನಿರ್ಧಾರಕ್ಕೆ ಗ್ರಾಮಸ್ಥರು ಬಂದಿದ್ದಾರೆ. ಮುಚ್ಚಳಿಕೆಯೊಂದಿಗೆ ಕೆಲವು ಷರತ್ತುಗಳನ್ನು ಹಾಕಿರುವ ಗ್ರಾಮಸ್ಥರು ದಿನಕ್ಕೆ ಕೇವಲ 150 ಲಾರಿಗಳ ಕಸವನ್ನು ಮಾತ್ರ ಸುರಿಯಬೇಕು ಮತ್ತು ಕ್ವಾರಿಯಲ್ಲಿ ಕಸದಿಂದ ಉತ್ಪತ್ತಿಯಾಗಿರುವ ಕೊಳಚೆ ನೀರು ತೆಗೆಯಬೇಕು. ಸುತ್ತಮುತ್ತಲಿನ ಗ್ರಾಮಗಳಿಗೆ ಶುದ್ದ ಕುಡಿಯವ ನೀರು ಕಲ್ಪಿಸಬೇಕು ಎಂದು ಅಧಿಕಾರಿಗಳಿಗೆ ಆಗ್ರಹಿಸಲಾಗಿದ್ದು ಇದಕ್ಕೆಲಾ ಪಾಲಿಕೆ ಸಮ್ಮತಿಸಿದೆ ಎಂದು ಗ್ರಾಮ ಪಂಚಾಯತ್ ಅಧ್ಯಕ್ಷ ಭಕ್ತಪಾಲ ತಿಳಿಸಿದರು. ಸಭೆಯಲ್ಲಿ ತಾಲ್ಲೂಕು ಪಂಚಾಯತ್ಸ ಸದಸ್ಯ ಅಂಕಪ್ಪ, ಮಾಜಿ ಉಪಾಧ್ಯಕ್ಷೆ ಲಕ್ಷ್ಮಮ್ಮ ನಂಜೇಗೌಡ ಸೇರಿದಂತೆ ಇತರರು ಉಪಸ್ಥಿತರಿದ್ದರು.