‘ಪ್ಲಾಗಿಯಾರಿಸಮ್’ ಸಾಫ್ಟ್‌ವೇರ್ ಅಭಿವೃದ್ಧಿ
ಬೆಂಗಳೂರು , ಜೂ. 17: ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಪಠ್ಯ ನಕಲು ಮಾಡುವುದನ್ನು ತಡೆಗಟ್ಟುವ ಸಲುವಾಗಿ ಡ್ರಿಲ್‌ಬಿಟ್ ಸಾಫ್ಟ್‌ಟೆಕ್ ಇಂಡಿಯಾ ಸಂಸ್ಥೆಯು ‘ಪ್ಲಾಗಿಯಾರಿಸಮ್’ ಸಾಫ್ಟ್‌ವೇರ್ ಅನ್ನು ಅಭಿವೃದ್ಧಿ ಪಡಿಸಿದೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸ್ಥೆಯ ಮುಖ್ಯಸ್ಥ ಪ್ರಶಾಂತ್‌ಕುಮಾರ್, ಶಿಕ್ಷಣ ಕ್ಷೇತ್ರದಲ್ಲಿ ಭಾರತ ಅತ್ಯಂತ ಎತ್ತರಕ್ಕೆ ಬೆಳೆದಿದೆ. ಅದೇ ರೀತಿಯಲ್ಲಿ ತಂತ್ರಜ್ಞಾನ ಅಭಿವೃದ್ಧಿಯಲ್ಲಿಯೂ ಬೆಳವಣಿಗೆ ಕಂಡಿದೆ. ಆದರೆ, ವಿಶ್ವವಿದ್ಯಾಲಯಗಳಲ್ಲಿ ಉನ್ನತ ಶಿಕ್ಷಣದಲ್ಲಾಗುವ ಪಠ್ಯದ ನಕಲು ಮಾಡುವ ಪದ್ಧತಿ ತಡೆಗಟ್ಟಲು ಸೂಕ್ತವಾದ ತಂತ್ರಜ್ಞಾನ ಬಳಕೆ ಮಾಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಪ್ಲಾಗಿಯಾರಿಸಮ್ ಸಾಫ್ಟ್‌ವೇರ್‌ನಿಂದ ಉನ್ನತ ಶಿಕ್ಷಣದಲ್ಲಿನ ಪಿಎಚ್‌ಡಿ, ಸ್ನಾತಕೋತ್ತರ ಪದವಿ ಪಡೆಯುತ್ತಿರುವ ವಿದ್ಯಾರ್ಥಿಗಳು ದಾಖಲು ಮಾಡಿರುವ ವರದಿಯನ್ನು ಕದಿಯದಂತೆ ಕಾಪಾಡುತ್ತದೆ. ಸಂಶೋಧನೆ ಮಾಡಿದ ವರದಿ ನಕಲು ಹಾಗೂ ವೆಬ್‌ಸೈಟ್‌ಗಳ ಮೂಲಕ ಮಾಹಿತಿಗೆ ನಕಲು ಮಾಡಲು ಅವಕಾಶ ನೀಡದೇ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ತೋರಿಸಲು ಸಹಕಾರಿಯಾಗುತ್ತದೆ ಎಂದರು.
ಭಾರತದ 250 ವಿಶ್ವವಿದ್ಯಾಲಯಗಳಲ್ಲಿ ಅಮೆರಿಕಾದ ಪ್ಲಾಗಿಯಾರಿಸಮ್ ಸಾಫ್ಟ್‌ವೇರ್ ಅನ್ನು ಬಳಕೆ ಮಾಡಲಾಗುತ್ತಿದೆ. ಆದರೆ, ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂದುವರಿದಿರುವ ದೇಶದಲ್ಲಿ ಸ್ವತಂತ್ರವಾದ ಸಾಫ್ಟ್‌ವೇರ್ ಬಳಕೆ ಮಾಡುತ್ತಿಲ್ಲ ಎಂದ ಅವರು, ಈ ಸಾಫ್ಟ್‌ವೇರ್ ಅಭಿವೃದ್ಧಿ ಪಡಿಸಲು 2 ವರ್ಷಗಳು ನಿರಂತರವಾದ ಅಧ್ಯಯನ, ಸಂಶೋಧನೆ ನಡೆಸಲಾಗಿದೆ. ಈ ಕುರಿತು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಜೊತೆಗೆ ಮಾತುಕತೆ ನಡೆಸಿದ್ದು, ಅವರು ಇದನ್ನು ಅಭಿನಂದಿಸಿದ್ದಾರೆ ಎಂದು ತಿಳಿಸಿದರು.