ರಾಷ್ಟ್ರಪತಿ ಪ್ರಣಬ್ ಮುಖರ್ಜಿಗೆ ಸ್ವಾಗತ
Update: 2017-06-17 19:54 IST
ಬೆಂಗಳೂರು, ಜೂ. 17: ಕರ್ನಾಟಕ ರಾಜ್ಯದ ಎರಡು ದಿನದ ಭೇಟಿಗಾಗಿ ಹೊಸದಿಲ್ಲಿಯಿಂದ ವಿಶೇಷ ವಿಮಾನದಲ್ಲಿ ಬೆಂಗಳೂರಿನ ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರನ್ನು ರಾಜ್ಯಪಾಲ ವಜೂಭಾಯಿ ವಾಲಾ, ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವಾಗತಿಸಿದರು.
ಶನಿವಾರ ಸಂಜೆ 4:20ರ ಸುಮಾರಿಗೆ ಆಗಮಿಸಿದ ಪ್ರಣಬ್ ಮುಖರ್ಜಿ ಅವರಿಗೆ ಪುಷ್ಪಗುಚ್ಚ ನೀಡಿ, ಮೈಸೂರು ಪೇಟ ತೊಡಿಸಿ, ಶಾಲು ಹೊದಿಸಿ, ಹೂವಿನ ಹಾರವನ್ನು ಹಾಕಿ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯಪಾಲ ವಜೂಭಾಯಿ ವಾಲಾ ಅವರು ರಾಜ್ಯಕ್ಕೆ ಬರಮಾಡಿಕೊಂಡರು.
ಈ ವೇಳೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್, ಸರಕಾರದ ಮುಖ್ಯ ಕಾರ್ಯದರ್ಶಿ ಸುಭಾಷ್‌ಚಂದ್ರ ಕುಂಟಿಯಾ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮೇಯರ್ ಜಿ.ಪದ್ಮಾವತಿ, ಪೊಲೀಸ್ ಮಹಾ ನಿರ್ದೇಶಕ ಆರ್.ಕೆ.ದತ್ತ, ನಗರ ಪೊಲೀಸ್ ಆಯುಕ್ತ ಪ್ರವೀಣ್‌ಸೂದ್ ಸೇರಿದಂತೆ ಸೇನೆಯ ಹಿರಿಯ ಅಧಿಕಾರಿಗಳು ಹಾಜರಿದ್ದರು.