ಮೊದಲ ಹಂತದ ನಮ್ಮ ಮೆಟ್ರೊಗೆ ರಾಷ್ಟ್ರಪತಿ ಪ್ರಣಬ್ ಹಸಿರು ನಿಶಾನೆ

Update: 2017-06-17 14:58 GMT

ಬೆಂಗಳೂರು, ಜೂ. 17: ನಗರದ ಸಂಪಿಗೆ ರಸ್ತೆಯಿಂದ ಕನಕಪುರ ರಸ್ತೆಯಲ್ಲಿನ ಯಲಚೇನಹಳ್ಳಿವರೆಗಿನ ‘ಹಸಿರು’ ಮಾರ್ಗದ ಮೊದಲ ಹಂತದ ನಮ್ಮ ಮೆಟ್ರೋ ರೈಲು ಸಂಚಾರಕ್ಕೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ವಿಧಾನಸೌಧದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಹಸಿರು ನಿಶಾನೆ ತೋರಿಸುವ ಮೂಲಕ ಲೋಕಾರ್ಪಣೆ ಮಾಡಿದ್ದಾರೆ.

ಶನಿವಾರ ವಿಧಾನಸೌಧದ ಪಶ್ಚಿಮ ದ್ವಾರದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಪ್ರಣಬ್ ಮುಖರ್ಜಿ, ದೇಶದ 26 ಮೆಟ್ರೋ ಪಾಲಿಟನ್ ನಗರಗಳಲ್ಲಿ ಮೆಟ್ರೋ ರೈಲ್ವೆ ಸೌಲಭ್ಯ ಕಲ್ಪಿಸಲು ಮುಂದಾಗಿರುವ ಕೇಂದ್ರ ಸರಕಾರದ ನಿರ್ಧಾರ ಸ್ವಾಗತಾರ್ಹ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಮಹತ್ವದ ಯೋಜನೆಗೆ ಹಣಕಾಸು ನೆರವು ನೀಡಿದ ಜಪಾನ್ ಮೂಲದ ಜೈಕೋ ಸಂಸ್ಥೆಗೂ ಹಾಗೂ ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ಅವರಿಗೂ ಅಭಿನಂದನೆಗಳು ಎಂದ ಅವರು, ರಾಷ್ಟ್ರದ ಹಲವು ಪ್ರಮುಖ ನಗರಗಳಲ್ಲಿ 3ರಿಂದ 5 ಮಿಲಿಯನ್ ಜನಸಂಖ್ಯೆ ಹೊಂದಿದೆ. ಇಷ್ಟು ದೊಡ್ಡ ಸಂಖ್ಯೆಯ ಜನರಿಗೆ ಸೂಕ್ತ ಸಂಚಾರ ವ್ಯವಸ್ಥೆ ಕಲ್ಪಿಸುವುದು ಸವಾಲಿನ ಕೆಲಸ ಎಂದು ಹೇಳಿದರು.

ದೇಶದಲ್ಲಿ ಮೊದಲಬಾರಿಗೆ ಕೊಲ್ಕತ್ತಾ, ಹೊಸದಿಲ್ಲಿಯಲ್ಲಿ ಮೆಟ್ರೋ ಪ್ರಯೋಗ ಆರಂಭವಾಯಿತು. ಅದರ ಯಶಸ್ವಿನ ಬೆನ್ನಿನಲ್ಲೆ ಮುಂಬೈ, ಬೆಂಗಳೂರು ಸೇರಿದಂತೆ 12ಕ್ಕೂ ಹೆಚ್ಚು ಮೆಟ್ರೋ ಪಾಲಿಟನ್ ನಗರಗಳಲ್ಲಿ ಮೆಟ್ರೋ ಸಂಚಾರ ಯಶಸ್ವಿಯಾಗಿದೆ ಎಂದು ಅವರು ಶ್ಲಾಘಿಸಿದರು.ಎರಡನೆ ಹಂತದ ಮೆಟ್ರೋ ಯೋಜನೆ ಪ್ರಗತಿಯಲ್ಲಿದ್ದು, ಈ ಯೋಜನೆಯಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮತ್ತು ಹೊರವರ್ತುಲ ರಸ್ತೆಗೆ ಫೀಡರ್ ಸಂಪರ್ಕ ಹೊಂದಿರುವುದು ಸ್ವಾಗತಾರ್ಹ. ಈ ನಿಟ್ಟಿನಲ್ಲಿ ರಾಜ್ಯ ಮತ್ತು ಕೇಂದ್ರ ಸರಕಾರದ ಸಾಧನೆ ಗಮನಾರ್ಹ ಎಂದು ಅವರು ಬಣ್ಣಿಸಿದರು.

ಸಮಾರಂಭದಲ್ಲಿ ಪಾಲ್ಗೊಂಡಿದ್ದ ಸಿಎಂ ಸಿದ್ಧರಾಮಯ್ಯ ಮಾತನಾಡಿ, ನಮ್ಮ ಮೆಟ್ರೋ ಎರಡನೆ ಹಂತದಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಬೆಂಗಳೂರು ಹೊರ ವರ್ತುಲ ರಸ್ತೆಗಳಿಗೆ ಮೆಟ್ರೋ ಸಂಪರ್ಕ ಕಲ್ಪಿಸಲಾಗುವುದು ಎಂದರು.

ಈಗಾಗಲೇ ಎರಡನೆ ಹಂತದ 72 ಕಿ.ಮೀ ಉದ್ದದ ನಮ್ಮ ಮೆಟ್ರೋ ಕಾಮಗಾರಿ ಪ್ರಗತಿಯಲ್ಲಿದ್ದು, 26,405 ಕೋಟಿ ರೂ.ಗಳ ವೆಚ್ಚವಾಗಲಿದೆ. ಎರಡನೆ ಹಂತದಲ್ಲಿ 2020ಕ್ಕೆ ಪೂರ್ಣಗೊಳ್ಳಲಿದ್ದು, ಸುಮಾರು 20ಲಕ್ಷ ಪ್ರಮಾಣಿಕರು ಸಂಚರಿಸುವ ನಿರೀಕ್ಷೆ ಇದೆ ಎಂದು ತಿಳಿಸಿದರು.ಮೊದಲ ಹಂತದ ನಮ್ಮ ಮೆಟ್ರೋ ಲೋಕಾರ್ಪಣೆಯಾಗಿದೆ. ಇದು ಹೊಸದಿಲ್ಲಿ ನಂತರ ದೇಶದಲ್ಲಿ ಎರಡನೆ ಅತಿದೊಡ್ಡ ಮೆಟ್ರೋ ಸಂಪರ್ಕವನ್ನು ಹೊಂದಿರುವ ರಾಜ್ಯ ಎಂಬ ಹೆಗ್ಗಳಿಕೆ ಕರ್ನಾಟಕದ್ದು. ಎರಡನೆ ಹಂತ ಪೂರ್ಣಗೊಂಡರೆ ದೇಶದಲ್ಲೆ ಅತ್ಯುತ್ತಮ ಮೆಟ್ರೋ ರೈಲು ಸಂಪರ್ಕ ಹೊಂದಿದ ಕೀರ್ತಿ ನಮ್ಮದಾಗಲಿದೆ ಎಂದು ಅಭಿಮಾನ ವ್ಯಕ್ತಪಡಿಸಿದರು.

ಎರಡನೆ ಹಂತಕ್ಕೆ ನೆರವು: ಮೊದಲನೆ ಹಂತದ ನಮ್ಮ ಮೆಟ್ರೋ ರೈಲ್ವೆ ಮಾರ್ಗ ಪೂರ್ಣಗೊಂಡಿದ್ದು, ಎರಡನೆ ಹಂತದ ಮೆಟ್ರೋ ಕಾಮಗಾರಿಗೆ ಕೇಂದ್ರ ಆರ್ಥಿಕ ನೆರವು ನೀಡಲಿದ್ದು, 2020ರ ವೇಳೆಗೆ 110ರಿಂದ 125 ಕಿಮೀ ಉದ್ದದ ನಮ್ಮ ಮೆಟ್ರೋ ಮಾರ್ಗ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎಂದು ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯನಾಯ್ಡು ವಿಶ್ವಾಸ ವ್ಯಕ್ತಪಡಿಸಿದರು.

ಬೆಂಗಳೂರು ನಗರದಲ್ಲಿ ವಾಹನ ರಹಿತ ವಲಯಗಳನ್ನು ನಿರ್ಮಾಣ ಮಾಡಬೇಕು. ಕೆಲವು ಪ್ರಮುಖ ರಸ್ತೆಗಳಲ್ಲಿ ಪೂರ್ಣ ವಾಹನ ಸಂಚಾರ ನಿಷೇಧಿಸಿ, ಸಾರ್ವಜನಿಕರು ತಮ್ಮ ಕುಟುಂಬ ಸಹಿತ ಆನಂದಿಸುವ ವ್ಯವಸ್ಥೆ ಜಾರಿಗೊಳಿಸಬೇಕು ಎಂದು ಅವರು ಇದೇ ವೇಳೆ ಸಲಹೆ ನೀಡಿದರು.

ಹೊಸ ಯೋಜನೆ:ಜೂ.23ಕ್ಕೆ ನೂತನ ಸ್ಮಾರ್ಟ್‌ಸಿಟಿ ಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತಿದ್ದು, ಈ ವೇಳೆ ಬೆಂಗಳೂರು ನಗರದ ಅಭಿವೃದ್ಧಿ ದೃಷ್ಟಿಯಿಂದ ಹೊಸ ಯೋಜನೆಗಳನ್ನು ಘೋಷಿಸಲಿದ್ದೇನೆ ಎಂದು ವೆಂಕಯ್ಯ ನಾಯ್ಡು ಭರವಸೆ ವ್ಯಕ್ತಪಡಿಸಿದರು.ಇಂದು ಬೆಳಗ್ಗೆ ಪ್ರಧಾನಿ ಮೋದಿ ಕೇರಳದ ಕೊಚ್ಚೀನ್‌ನಲ್ಲಿ ಮತ್ತು ಬೆಂಗಳೂರಿನಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಮೆಟ್ರೋಗೆ ಚಾಲನೆ ನೀಡಿದ್ದಾರೆ. ಮೆಟ್ರೋ ಎರಡನೆ ಹಂತದ ಕಾಮಗಾರಿ ದಾಖಲೆ ಅವಧಿಯಲ್ಲಿ ಮುಕ್ತಾಯಗೊಳ್ಳುವ ನಿರೀಕ್ಷೆಯಿದೆ ಎಂದ ಅವರು, ನಮ್ಮ ಮೆಟ್ರೋ ಅಧಿಕಾರಿಗಳ ನೈಪುಣ್ಯತೆ-ಕಾರ್ಯದಕ್ಷತೆ ಪ್ರಶಂಸನಾರ್ಹ ಎಂದು ಶ್ಲಾಘಿಸಿದರು.

ರಾಜ್ಯಪಾಲ ವಜೂಭಾಯಿ ವಾಲಾ, ಕೇಂದ್ರ ಮೆಟ್ರೋ ರೈಲು ಸಂಪರ್ಕವನ್ನು ದೇಶದ ಹಲವು ನಗರಗಳಿಗೆ ವಿಸ್ತರಿಸುತ್ತಿರುವುದು ಸ್ವಾಗತ. ಆದರೆ, ಶೇ.100ರಷ್ಟು ವೆಚ್ಚವನ್ನು ಕೇಂದ್ರವೇ ಭರಿಸಬೇಕು. ಆಗ ಮಾತ್ರ ಮೆಟ್ರೋ ಕಾಮಗಾರಿಗಳು ನಿಗದಿತ ಅವಧಿಯಲ್ಲಿ ಪೂರ್ಣಗೊಂಡು ಜನರ ಸೇವೆಗೆ ಲಭ್ಯವಾಗಲಿವೆ ಎಂದರು.

ಸಮಾರಂಭದಲ್ಲಿ ಕೇಂದ್ರ ಸಚಿವರಾದ ಅನಂತಕುಮಾರ್, ಡಿ.ವಿ.ಸದಾನಂದಗೌಡ, ಬೆಂ.ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್, ನಗರಾಭಿವೃದ್ಧಿ ಸಚಿವ ಆರ್. ರೋಷನ್ ಬೇಗ್, ಸಭಾಪತಿ ಶಂಕರಮೂರ್ತಿ, ಸ್ಪೀಕರ್ ಕೆ.ಬಿ.ಕೋಳಿವಾಡ, ಜಪಾನ್ ರಾಯಭಾರಿ ಕೆಂಜಿ ಹಿರಮಟ್ಟು, ಸಂಸದರಾದ ಕೆ.ರೆಹ್ಮಾನ್‌ಖಾನ್, ಪಿ.ಸಿ.ಮೋಹನ್, ಡಿ.ಕೆ.ಸುರೇಶ್, ಪ್ರೊ.ರಾಜೀವ್ ಗೌಡ, ಕೆ.ಸಿ. ರಾಮಮೂರ್ತಿ, ಬಿಬಿಎಂಪಿ ಮೇಯರ್ ಪದ್ಮಾವತಿ, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಸುಭಾಶ್ಚಂದ್ರ ಕುಂಟಿಯಾ, ಬಿಎಂಆರ್‌ಸಿಎಲ್‌ನ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News