ಸಭಾಪತಿ ಪದಚ್ಯುತಿ ನಿರ್ಣಯ: ಉಗ್ರಪ್ಪ, ರೇವಣ್ಣ ವಿರುದ್ಧ ಶಿಸ್ತು ಕ್ರಮಕ್ಕೆ ಡಾ. ಪರಮೇಶ್ವರ್‌ಗೆ ‘ಕೈ’ ಶಾಸಕರ ಪತ್ರ

Update: 2017-06-17 15:45 GMT

ಬೆಂಗಳೂರು, ಜೂ. 17: ಮೇಲ್ಮನೆ ಸಭಾಪತಿ ಶಂಕರಮೂರ್ತಿ ಪದಚ್ಯುತಿ ನಿರ್ಣಯ ಮಂಡಿಸಿ ಸರಕಾರ ಹಾಗೂ ಪಕ್ಷಕ್ಕೆ ತೀವ್ರ ಮುಜುಗರ ಸೃಷ್ಟಿಸಿದ ವಿಧಾನ ಪರಿಷತ್ ಸದಸ್ಯರಾದ ವಿ.ಎಸ್.ಉಗ್ರಪ್ಪ, ಎಚ್.ಎಮ್.ರೇವಣ್ಣ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ‘ಕೈ’ ಶಾಸಕರು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರಿಗೆ ಪತ್ರ ಬರೆದಿದ್ದಾರೆ.

ಸಭಾಪತಿ ಶಂಕರಮೂರ್ತಿ ಪದಚ್ಯುತಿ ನಿರ್ಣಯ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಜೊತೆ ಸಮಾಲೋಚನೆ ನಡೆಸದೆ ಏಕಪಕ್ಷೀಯವಾಗಿ ನಿರ್ಣಯ ಮಂಡಿಸಿದ್ದು, ರಾಜ್ಯ ಸರಕಾರಕ್ಕೆ ಮುಜುಗರ ಸೃಷ್ಟಿಸಿದ್ದು ಸರಿಯಲ್ಲ ಎಂದು ಆಕ್ಷೇಪಿಸಲಾಗಿದೆ.

ಶಾಸಕರಾದ ಎಸ್.ಟಿ.ಸೋಮಶೇಖರ್. ಕೆ.ಎನ್.ರಾಜಣ್ಣ, ಡಿ.ಜಿ.ಶಾಂತನಗೌಡ, ಮುನಿರತ್ನ, ಕೆ.ಶಿವಮೂರ್ತಿ, ಷಡಕ್ಷರಿ, ವಡ್ನಾಳ್ ರಾಜಣ್ಣ, ರಘುಮೂರ್ತಿ ಸೇರಿದಂತೆ ಒಟ್ಟು 12 ಮಂದಿ ಶಾಸಕರು, ಪರಮೇಶ್ವರ್ ಅವರಿಗೆ ಪತ್ರ ಬರೆದಿದ್ದು, ಉಗ್ರಪ್ಪ, ರೇವಣ್ಣ, ಮುಖ್ಯ ಸಚೇತಕ ಐವಾನ್ ಡಿಸೋಜ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಲಾಗಿದೆ.

ಪದಚ್ಯುತಿ ನಿರ್ಣಯ ಮಂಡಿಸಿದ ಬಳಿಕವೂ ಆ ಬಗ್ಗೆ ಕಾರ್ಯಗತಗೊಳಿಸುವ ಸಂಬಂಧ ತಂತ್ರವನ್ನು ರೂಪಿಸಲಿಲ್ಲ. ಇದರಿಂದ ಮೇಲ್ಮನೆಯಲ್ಲಿ ಪದಚ್ಯುತಿ ನಿರ್ಣಯಕ್ಕೆ ಸೋಲಾಗಿದೆ. ಇದರಿಂದ ಪಕ್ಷ-ಸರಕಾರಕ್ಕೆ ಮುಜುಗರ ಉಂಟಾಗಿದೆ ಎಂದು ಪತ್ರದಲ್ಲಿ ಶಾಸಕರು ಬೇಸರ ವ್ಯಕ್ತಪಡಿಸಿದ್ದಾರೆ.

ಇನ್ನು ಮುಂದೆ ಇಂತಹ ಯಾವುದೇ ನಿರ್ಧಾರ ಕೈಗೊಳ್ಳುವ ಮೂಲಕ ಪಕ್ಷದ ಪ್ರಮುಖರೊಂದಿಗೆ ಸಮಾಲೋಚನೆ ನಡೆಸಬೇಕು. ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಇಂತಹ ಅಚಾತುರ್ಯಗಳು ಸಂಭವಿಸದಂತೆ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕೆಂದು ಕೋರಲಾಗಿದೆ. ಈ ಸಂಬಂಧ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ಗೆ ದೂರು ನೀಡಲು ತೀರ್ಮಾನಿಸುವ ಶಾಸಕರು ನಿರ್ಧರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News