ಅಂತಾರಾಷ್ಟ್ರೀಯ ಯೋಗ ದಿನಾಚರಣೆ: ಗಿನ್ನಿಸ್ ದಾಖಲೆ ಸೇರಿದ ‘ಶೀರ್ಷಾಸನ’

Update: 2017-06-18 14:07 GMT

 ಬೆಂಗಳೂರು, ಜೂ.18: ಮೂರನೆ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಪೂರ್ವಭಾಗಿ ಕಾರ್ಯಕ್ರಮದಲ್ಲಿ 2087 ಮಂದಿ ಶೀರ್ಷಾಸನ ಮಾಡುವ ಮೂಲಕ ಗಿನ್ನಿಸ್ ದಾಖಲೆ ನಿರ್ಮಿಸಿದ್ದಾರೆ.

ರವಿವಾರ ಬೆಳಗ್ಗೆ 7:30 ಸುಮಾರಿಗೆ ನಗರದ ರಾಜಭವನ ಮುಖ್ಯದ್ವಾರದಿಂದ ಬೆಂಗಳೂರಿನ ವಿಧಾನಸೌಧದ ಆವರಣದಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆವರೆಗೆ ನಡೆದ ಯೋಗಥಾನ್ ಕಾರ್ಯಕ್ರಮಕ್ಕೆ ರಾಜ್ಯಪಾಲ ವಜುಬಾಯಿ ವಾಲ ಯೋಗ ಧ್ವಜ ತೋರಿಸುವ ಮೂಲಕ ಚಾಲನೆ ನೀಡಿ, ಗಿನ್ನಿಸ್ ದಾಖಲೆ ನಿರ್ಮಿಸಲು ಮುಂದಾಗಿರುವ ಯೋಗ ಪಟುಗಳಿಗೆ ಶುಭಾ ಕೋರಿದರು.

 ವಿಧಾನಸೌಧದ ಪೂರ್ವದ್ವಾರದ ಮುಂಭಾಗ 2087 ಮಂದಿ ಏಕಕಾಲಕ್ಕೆ ತಲೆ ಕೆಳಗೆ, ಕಾಲು ಮೇಲೆ ಮಾಡಿ ಉಲ್ಟಾ ನಿಂತು ಸಾಮೂಹಿಕವಾಗಿ 25 ಸೆಂಕೆಂಡ್ ಕಾಲ ಶೀರ್ಷಾಸನ ಮಾಡುವ ಮೂಲಕ ಗಿನ್ನಿಸ್ ದಾಖಲೆ ನಿರ್ಮಿಸಿದ್ದಾರೆ. ಈ ಹಿಂದೆ ಚೆನ್ನೈನಲ್ಲಿ ನಿರ್ಮಿಸಲಾಗಿದ್ದ ಗಿನ್ನಿಸ್ ದಾಖಲೆಯನ್ನು ಮುರಿಯಲಾಗಿದೆ ಎಂದು ತಿಳಿದುಬಂದಿದೆ.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಚಿವ ರಮೇಶ್ ಕುಮಾರ್, ಯೋಗ ಮಾಡಲು ಬಂಡವಾಳ ಹಾಕಬೇಕಿಲ್ಲ. ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ನಿಮ್ಮಂತಹ ಯೋಗ ಸಾಧಕರಿಂದ ಸಾಧ್ಯ. ಸಮಾಜದ ಎಲ್ಲ ಅಡ್ಡಗೋಡೆಗಳನ್ನು ತೆಗೆದು ಸಮೃದ್ಧ ಭಾರತ ನಿರ್ಮಿಸಲು ನಿಮ್ಮ ಕೊಡುಗೆ ಅಪಾರ ಎಂದು ಹೇಳಿದರು.

 ಯೋಗದ ಬಗ್ಗೆ ನಮಗೆ ಕೀಳರಿಮೆ ಬೇಕಿಲ್ಲ. ನಮ್ಮಲ್ಲಿ ಎಷ್ಟು ನಿಧಿ ಹುದುಗಿದೆ ಎಂದು ತಿಳಿದುಕೊಳ್ಳುವ ಗೋಜಿಗೆ ನಾವು ಹೋಗುವುದಿಲ್ಲ. ಜಗತ್ತು ನಮ್ಮನ್ನು ಅನುಸರಿಸುತ್ತಿದೆ, ನಾವು ಬೇರೆ ಯಾವುದನ್ನೋ ಅನುಸರಿಸುತ್ತೇವೆ. ನಮ್ಮ ಖಜಾನೆಯ ಸಂಪತ್ತು ದೊಡ್ಡದಿದೆ ಮೊದಲು ಅದನ್ನು ಅರಿತುಕೊಳ್ಳಬೇಕು ಎಂದ ಅವರು, ಶೀರ್ಷಾಸನದಲ್ಲಿ ಗುರುತ್ವಾಕರ್ಷಣೆ ಹಿಮ್ಮುಖವಾಗಿ ಕೆಲಸ ಮಾಡುತ್ತದೆ. ಆಂಟಿ ಗ್ರಾವಿಟೇಷನ್‌ನಲ್ಲಿ ಮೆದುಳಿಗೆ ಸರಾಗ ರಕ್ತ ಪರಿಚಲನೆಯಾಗಿ ಕೆಟ್ಟ ಯೋಚನೆಗಳು ದೂರವಾಗುತ್ತವೆ. ಆರೋಗ್ಯ ಸುಧಾರಣೆಗೆ ಇದು ಬಹಳ ಸಹಕಾರಿ ಎಂದರು.

ಕೇಂದ್ರ ಸಚಿವ ಸದಾನಂದಗೌಡ ಮಾತನಾಡಿ, ಸಾವಿರಾರು ವರ್ಷಗಳ ಹಿಂದೆ ಭಾರತ ಜಗತ್ತಿಗೆ ಎಲ್ಲ ವಿಷಯಗಳನ್ನು ಬೋಧಿಸಿ, ತೋರಿಸಿ ಕೊಟ್ಟ ಪುಣ್ಯ ಭೂಮಿ. ನಾವು ಜಗತ್ತಿಗೆ ಮತ್ತೆ ಯಶಸ್ವಿ ಕೊಡುಗೆಗಳನ್ನು ಕೊಡಬೇಕಿದೆ, ಕೆಲ ವರ್ಷಗಳಲ್ಲಿ ಭಾರತ ಈ ಕೆಲಸ ಮಾಡಲು ಆಗಲಿಲ್ಲ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ ಮಾತನಾಡಿ, ಆರೋಗ್ಯ ಎಷ್ಟು ಮುಖ್ಯ ಎಂದು ನಾವು ಮಾಜಿ ಪ್ರಧಾನಿ ಎಚ್.ಡಿ.ದೇವೆಗೌಡ ಅವರನ್ನು ನೋಡಿ ಕಲಿಯಬೇಕು. 86ನೆ ವಯಸ್ಸಿನಲ್ಲೂ ಅವರು ದಿನನಿತ್ಯ ಯೋಗ ಮಾಡಿ ಆರೋಗ್ಯವಾಗಿದ್ದಾರೆ. ಯೋಗದಿಂದ ಸರ್ವರೋಗ ಮುಕ್ತಿ ಎಂಬ ಮಾತಿದೆ, ಅದು ಅಕ್ಷರಶಃ ನಿಜ ಎಂದು ಅಭಿಪ್ರಾಯಪಟ್ಟರು.

ಜೂ.21ಕ್ಕೆ ಮೂರನೆ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಡೆಯಲಿದ್ದು, ಅದರ ಅಂಗವಾಗಿ ವಿಧಾನಸೌಧದ ಮುಂದೆ ಬೆಳಗ್ಗೆ 6:30ರಿಂದ 8.30ರವರೆಗೆ ಸಾಮೂಹಿಕ ಯೋಗ ಪ್ರದರ್ಶನ ನಡೆಯಲಿದೆ ಎಂದು ಶ್ವಾಸ ಗುರು ಸ್ವಾಮಿ ವಚನಾನಂದ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಆರೋಗ್ಯ ಇಲಾಖೆ ವೆಬ್ಸೈಟ್‌ನಲ್ಲಿ ಆನ್‌ಲೈನ್ ಅಂಗಾಂಗದಾನಕ್ಕೆ ಚಾಲನೆ ನೀಡಲಾಯಿತು. ಇಲಾಖೆಯ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಆನ್‌ಲೈನ್ ಅಂಗಾಂಗ ದಾನವನ್ನು ಪರಿಚಯಿಸಿ ರಮೇಶ್ ಕುಮಾರ್, ಸದಾನಂದಗೌಡ, ಸಭಾಪತಿ ಡಿ.ಎಚ್.ಶಂಕರಮೂರ್ತಿ ಆನ್‌ಲೈನ್ ಅಂಗಾಂಗ ದಾನಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News