"ಗೆಳತಿಯರು ಉಪವಾಸವಿದ್ದಾರೆಂದು ಬುತ್ತಿ ತರದ ನನ್ನ ವಿದ್ಯಾರ್ಥಿನಿಯರು"

Update: 2017-06-18 15:19 GMT

ರಮಝಾನ್ ತಿಂಗಳ ಆರಂಭ ಹಾಗೂ ಮುಕ್ತಾಯವನ್ನು ಪುಟ್ಟ ರೇಡಿಯೋ ಮೂಲಕ ತಿಳಿದುಕೊಳ್ಳುತ್ತಿದ್ದ ದಿನಗಳವು. ತಕ್ಬೀರ್ ಕೇಳಬಹುದು ಎಂದು ತುಸು ಎತ್ತರದ ಜಾಗಕ್ಕೆ ಹೋಗಿ ಮಸೀದಿಯ ಕಡೆಗೆ ಕಿವಿ ಕೊಟ್ಟು ಏನೂ ಕೇಳದೆ ಹಿಂದಿರುಗಿ ಬರುತ್ತಿದ್ದೆವು. ಕೊನೆಗೂ ರೇಡಿಯೋವನ್ನು ವಿವಿಧ ದಿಕ್ಕುಗಳಿಗೆ ತಿರುಗಿಸಿ ಕೊನೆಗೂ ತಕ್ಕ ಮಟ್ಟಿಗೆ ಕೇಳುವಾಗ ಅದೇ ದಿಕ್ಕಿಗೆ ಭದ್ರವಾಗಿಟ್ಟು ರಾತ್ರಿ 10ರಿಂದ 11 ಗಂಟೆಯವರೆಗೂ ಆಲಿಸುತ್ತಿದ್ದೆವು. ಕಡೆಯದಾಗಿ ಒಂದೇ ಒಂದು ಭರವಸೆ ಎಂದರೆ ರಾತ್ರಿ 11 ಗಂಟೆಯ ಆಂಗ್ಲಭಾಷಾ ವಾರ್ತೆಯ ಬಳಿಕ ಮಂಗಳೂರು ಆಕಾಶವಾಣಿಯ ಪ್ರಸಾರ ಕೊನೆಗೊಳ್ಳುವ ಮುನ್ನ ನಿರೂಪಕರು ಪ್ರಕಟಿಸುವ ಕಡೆಯ ಪ್ರಕಟನೆ. ಉಪವಾಸ ಆರಂಭವಾಗುವುದೋ, ಇಲ್ಲವೋ ಎಂಬುದನ್ನು ರೇಡಿಯೋ ಮೂಲಕ ಪ್ರಕಟಿಸುತ್ತಿದ್ದ ಆ ದಿನಗಳಲ್ಲಿ ಮಸೀದಿಯಿಂದ ಬಲು ದೂರವಿದ್ದ ಮುಸಲ್ಮಾನರಿಗೆ ಆಕಾಶವಾಣಿಯು ಒಂದು ಮಹತ್ವದ ಸಂದೇಶವಾಹಕವಾಗಿತ್ತು.

ಉಪವಾಸ ಆರಂಭವಾದ ಮೇಲೆ ಮುಂಜಾನೆಯ ಅತ್ತಾಳ (ಸಹರಿ)ಕ್ಕೆ ಏಳುತ್ತಿದ್ದುದೇ ಒಂದು ವಿಶಿಷ್ಟ ಅನುಭವ. ಗಡಿಯಾರವಿಲ್ಲದ, ಅಲಾರ್ಮ್ ಇಲ್ಲದ, ವಿದ್ಯುತ್ ಕೂಡಾ ಇಲ್ಲದ ಮನೆಯಲ್ಲಿ ಒಂದು ಅಂದಾಜಿನ ಮೇಲೆಯೇ ಮುಂಜಾನೆ ಹೊತ್ತು ಏಳಲಾಗುತ್ತಿತ್ತು. ತಡವಾಗಿ ಎದ್ದ ಫಲವಾಗಿ ಅತ್ತಾಳವಿಲ್ಲದೆ ಉಪವಾಸ ಹಿಡಿಯಬೇಕಾದ ಸಂದರ್ಭ ಕೆಲವು ಬಾರಿ ಬರುತ್ತಿತ್ತು  ಅತ್ತಾಳವಿಲ್ಲದಿದ್ದರೂ ಸರಿಯೇ ಉಪವಾಸ ಹಿಡಿಯಲೇಬೇಕೆಂಬ ಹಠ. ಮಕ್ಕಳಾಗಿದ್ದ ನಮ್ಮನ್ನು ಮುಂಜಾನೆ ಎಬ್ಬಿಸದಿದ್ದರೆ ಮನೆಯವರೊಂದಿಗೆ ಬರುತ್ತಿದ್ದ ಕೋಪ ಅಷ್ಟಿಷ್ಟಲ್ಲ.

ಉಪವಾಸ ಆರಂಭವಾಗಿ ಒಂದೆರಡು ದಿನಗಳವರೆಗೆ ಪರಿಸರದ ಹಿಂದೂ ಬಾಂಧವರು ಉಪವಾಸ ಆರಂಭವಾದ ಬಗ್ಗೆ ಗೊತ್ತಿಲ್ಲದೆ ಅಥವಾ ವಾಡಿಕೆಯಂತೆ, ನಮ್ಮಲ್ಲಿ ಬೆಳಗ್ಗೆ- ಮಧ್ಯಾಹ್ನ “ಚಾ ಪರ್ದ್ ಆಂಡಾ? ಒಣಸಾಂಡ?” (ಚಾ ಆಯಿತಾ, ಊಟ ಆಯಿತಾ) ಎಂದು ಪ್ರಶ್ನಿಸುತ್ತಿದ್ದರು. “ಇಜ್ಜಿ, ಎಂಕ್ಲೆಗ್ ‘ಪಾಸ’ ಅತ್ತಾ?” (ಇಲ್ಲ ನಮಗೆ ಉಪವಾಸ) ಎಂದು ಹೇಳಿದಾಗ ಹಿಂದೂ ಬಾಂಧವರು “ಓ ಎಂಕ್ ಗೊತ್ತಿಜ್ಜಾಂಡ್, ಬೇಜಾರ್  ಮಲ್ಪೊಡ್ಚಿ” (ಓ ಗೊತ್ತಿರಲಿಲ್ಲ, ಬೇಸರ ಮಾಡಬೇಡಿ) ಎಂದು ಹೇಳಿ ಪಶ್ಚಾತಾಪ ಪಡುತ್ತಿದ್ದರು. ಇನ್ನೂ ಕೆಲವರು ಉಪವಾಸ ಮುಂದುವರಿದಂತೆ, "ಪಾಸ ಪತ್ತಾಂಡತ್ತೆ” “ಇರ್ವಾಂಡತ್ತೆ”, (ಉಪವಾಸ 10 ಆಯ್ತಲ್ಲ, 20 ಆಯ್ತಲ್ಲ) ಎಂದು ಕರಾರುವಕ್ಕಾಗಿ ಲೆಕ್ಕ ಹೇಳುತ್ತಿದ್ದರು. ಇಫ್ತಾರ್‍ನ ಸಮಯದಲ್ಲಿ ಬಂದು ಆ ಸಮಯಕ್ಕಾಗಿ ಕಾದು ಕುಳಿತು, ಗಸಗಸೆ ಶರಬತ್ತನ್ನೋ, ಕಡ್ಲೆ ಬೇಳೆ ಮಣ್ಣಿಯನ್ನೋ ತಿಂದು ತೃಪ್ತಿಯಿಂದ ಹೋಗುತ್ತಿದ್ದರು. ನಾವು ಮಾತ್ರವಲ್ಲ  ನೆರೆಹೊರೆಯ ಆ ಬಂಧುಗಳು ಕೂಡ ‘ಪೆರ್ನಾಳ್’ಗಾಗಿ ಕಾಯುತ್ತಿದ್ದರು.

ನಮ್ಮ ನೆರೆಯ ಮೇರಿಯಮ್ಮ, ಶಿಸ್ತುಬದ್ದ ಶಿಕ್ಷಕ ದೇರಣ್ಣ ಶೆಟ್ರಿಗೆ ಅಲ್ಪ ಸ್ವಲ್ಪ ಜಾಗವಿತ್ತು. ಅವರ ಮನೆಯಲ್ಲಿ ಕೆಲವು ಹಣ್ಣು, ತರಕಾರಿಗಳು ಬೆಳೆಯುತ್ತಿದ್ದರು. ಅವರು ಏನೂ ಬೆಳೆದರೂ ಅದರಲ್ಲಿ ಒಂದು ಪಾಲು ನಮಗಿತ್ತು. ಬಹುತೇಕ ಬೆಳಗ್ಗೆ ಏನಾದರೂ ನೀಡುತ್ತಿದ್ದ ಅವರು ಉಪವಾಸದ ದಿನಗಳಲ್ಲಿ ಸಾಯಂಕಾಲ ನಮಗೆ ಅವುಗಳನ್ನು ನೀಡಿ “ಇಂದೆನ್ ಪಾಸ ಬುಡ್ದು ತಿನ್ಲೆ” (ಇದನ್ನು ಉಪವಾಸ ತೊರೆದ ಬಳಿಕ ತಿನ್ನಿ) ಎಂದು ಹೇಳುತ್ತಿದ್ದರು. ಉಪವಾಸದದ ಬಗ್ಗೆ ಅವರಿಗೂ ಬಹಳ ಗೌರವ. ನಮ್ಮೆದುರು ಏನೂ ತಿನ್ನಲೂ ಕೂಡಾ ಕೆಲವರು ಹಿಂಜರಿಯುತ್ತಿದ್ದರು. ನಮ್ಮೂರಿನ ಬೀಡಿ ಕಂಪೆನಿಯೊಂದರಲ್ಲಿ ಕಾರ್ಮಿಕನಾಗಿ ದುಡಿಯುತ್ತಿದ್ದ ಹಿಂದೂ ಸಹೋದರನೊಬ್ಬ ರಮಝಾನ್ ಉಪವಾಸವನ್ನು ನಿರಂತರವಾಗಿ ಒಂದೂ ಬಿಡದೆ ಹಿಡಿಯುತ್ತಿದ್ದುದು ನಮಗೇ ಆಶ್ಚರ್ಯ ಉಂಟುಮಾಡುತ್ತಿತ್ತು.

ನಂತರದ ದಿನಗಳಲ್ಲಿ ನಾನು ಶಾಲೆಯೊಂದರಲ್ಲಿ ಕರ್ತವ್ಯವನ್ನು ನಿರ್ವಹಿಸುತ್ತಿದ್ದ ಸಂದರ್ಭ ವಿದ್ಯಾರ್ಥಿಗಳ ನಡುವಿನ ಅನ್ಯೋನ್ಯತೆ ನೋಡಿ ಬೆರಗಾದೆ. ನಾಲ್ಕೈದು ಮಂದಿ ಹಿಂದೂ-ಮುಸ್ಲಿಂ ವಿದ್ಯಾರ್ಥಿನಿಯರ ಒಂದು ಗುಂಪು. ಅವರು ಶಾಲೆಗೆ ಬರುವ ದಾರಿಯೂ ಒಂದೇ, ಶಾಲೆಯಲ್ಲಿ ಕುಳಿತುಕೊಳ್ಳುತ್ತಿದ್ದ ಬೆಂಚೂ ಒಂದೇ. ಮಾತುಕತೆ, ಹರಟೆ, ಆಟ ಒಟ್ಟಿಗೆಯೇ ಸಾಗುತ್ತಿತ್ತು. ರಮಝಾನ್ ತಿಂಗಳು ಆರಂಭವಾದಾಗ ಮುಸ್ಲಿಂ ವಿದ್ಯಾರ್ಥಿನಿಯರು ಉಪವಾಸದಲ್ಲಿ ನಿರತರಾಗುತ್ತಿದ್ದರು. ಒಂದು ದಿನ ಆ ಗುಂಪಿನಲ್ಲಿದ್ದ ವಿದ್ಯಾಥಿರ್ನಿಯ ತಾಯಿ ಬಂದು “ಅವಳು ಮಧ್ಯಾಹ್ನ ಬುತ್ತಿ ತರಲು ಕೇಳುವುದಿಲ್ಲ ಅವಳಿಗೆ ಸ್ವಲ್ಪ ತಿಳಿ ಹೇಳಿ” ಎಂದು ಹೇಳಿದರು. ನಾನು ಕರೆಸಿ ಅವಳನ್ನು ವಿಚಾರಿಸಿದಾಗ ಅವಳ ಸ್ನೇಹಿತೆಯರು ಉಪವಾಸವಿರುವುದರಿಂದ "ನಾನು ಊಟ ತರುವುದಿಲ್ಲ" ಎಂದು ಹೇಳಿ ಬಿಟ್ಟಳು. ಎಷ್ಟೇ ಹೇಳಿದರು ಉಪವಾಸ ಮುಗಿಯುವವರೆಗೆ ಅವಳು ಬುತ್ತಿ ತರಲೇ ಇಲ್ಲ. ಇಂತಹ ಸಾಮರಸ್ಯದ ರಮಝಾನ್  ದಿನಗಳನ್ನು ನನಗೆ ಕಾಣಲು ಸಾಧ್ಯವಾದದ್ದು ಒಂದು ಸೌಭಾಗ್ಯವೇ ಸರಿ.

Writer - ಅನಂತಾಡಿ ಅಬ್ದುಲ್ ರಝಾಕ್

contributor

Editor - ಅನಂತಾಡಿ ಅಬ್ದುಲ್ ರಝಾಕ್

contributor

Similar News