ಪರಭಾಷಿಕರು ಕನ್ನಡ ಕಟ್ಟುತ್ತಿದ್ದಾರೆ: ಮಾಯಣ್ಣ
ಬೆಂಗಳೂರು, ಜೂ.18: ಕನ್ನಡವನ್ನು ಬೆಳೆಸಬೇಕಾದ ಕನ್ನಡಿಗರೇ ಕಾಲು ಎಳೆಯುತ್ತಿದ್ದಾರೆ. ಆದರೆ, ಪರಭಾಷಿಕರು ಕನ್ನಡವನ್ನು ಕಟ್ಟುತ್ತಿದ್ದಾರೆ ಎಂದು ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಂ.ಮಾಯಣ್ಣ ಅಭಿಪ್ರಾಯಪಟ್ಟಿದ್ದಾರೆ.
ರವಿವಾರ ನಗರದ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಗರ ಜಿಲ್ಲಾ ಕಸಾಪದಿಂದ ಆಯೋಜಿಸಿದ್ದ ಕವಿಗೋಷ್ಠಿ ಹಾಗೂ ವಿವಿಧ ಪ್ರಶಸ್ತಿಗಳ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಕನ್ನಡಿಗರ ಸಂಖ್ಯೆ ಕಡಿಮೆಯಾಗುತ್ತಿದೆ, ಕನ್ನಡ ಭಾಷೆ ನಾಶವಾಗುತ್ತಿದೆ ಎನ್ನುವುದು ಸತ್ಯಕ್ಕೆ ದೂರವಾದದ್ದು. ಕನ್ನಡವನ್ನು ಉಳಿಸಬೇಕಾದ ಕನ್ನಡಿಗರು, ಈಗಾಗಲೇ ಕನ್ನಡಕ್ಕಾಗಿ ಕೆಲಸ ಮಾಡುತ್ತಿರುವವರನ್ನು ಕಾಲೆಳೆಯುವ ಕೆಲಸ ಮಾಡುತ್ತಿರುವುದು ದುರದುಷ್ಟಕರ ಎಂದು ವಿಷಾಧಿಸಿದರು.
ಕನ್ನಡ ಕೆಲಸ ಮಾಡುವುದಕ್ಕಾಗಿ ಸಮ್ಮೇಳನ, ಸನ್ಮಾನ, ಪುಸ್ತಕ ಬಿಡುಗಡೆ ಕಾರ್ಯಕ್ರಮ ಮಾಡುವುದು ಸರಿಯಷ್ಟೇ. ಆದರೆ, ಇದೇ ವೇಳೆ ನಾಡಿನಲ್ಲಿ ಕನ್ನಡಕ್ಕಾಗಿ ಕೆಲಸ ಮಾಡುತ್ತಿರುವ ಕ್ರೀಯಾಶೀಲರನ್ನು ಗುರುತಿಸಿ, ಪ್ರೋತ್ಸಾಹಿಸುವುದರ ಮೂಲಕ ಕನ್ನಡ ಉಳಿಸಿ-ಬೆಳೆಸಲು ಸಹಕಾರಿಯಾಗಬೇಕು ಎಂದರು.
ನಗರದಲ್ಲಿ ಎಲ್ಲ ವಾರ್ಡ್ ಹಾಗೂ ವಿಧಾನಸಭಾ ಕ್ಷೇತ್ರದಲ್ಲಿ ಕನ್ನಡ ಕೆಲಸಕ್ಕಾಗಿ ವಿಶೇಷ ಕಾಳಜಿ ವಹಿಸಲಿದ್ದು, ಎಲ್ಲ ಹಂತದಲ್ಲಿಯೂ ಕಾರ್ಯಕರ್ತರನ್ನು ಹುರಿದುಂಬಿಸುವ ಕೆಲಸ ಮಾಡಲಾಗುತ್ತದೆ. ಮುಂದಿನ ದಿನಗಳಲ್ಲಿ ಕನ್ನಡದ ಬಗ್ಗೆ ಪ್ರೀತಿ ತೋರಿಸುವ ಚಿಂದಿ ಆಯುವವರಿಂದ ಹಿಡಿದು, ಯಾವುದೇ ಜಾತಿ, ಧರ್ಮ ಭೇದವಿಲ್ಲದೆ ಎಲ್ಲರನ್ನೂ ಗುರುತಿಸಿ ಸನ್ಮಾನದ ಮೂಲಕ ಪ್ರೋತ್ಸಾಹಿಸಲಾಗುತ್ತದೆ ಎಂದು ನುಡಿದರು.
ಲೇಖಕಿ ಸುನಂದಾ ಪ್ರಭುರಾಜ್ ಮಾತನಾಡಿ, ತೃತೀಯ ಲಿಂಗಿಗಳನ್ನು ಸಮಾಜದಲ್ಲಿ ಅತ್ಯಂತ ಕೀಳಾಗಿ ಕಾಣುತ್ತಿದ್ದಾರೆ. ಅವರು ನಮ್ಮಂತೆ ಮನುಷ್ಯರು, ಅವರಿಗೂ ಬದುಕುವ ಹಕ್ಕಿದೆ ಎಂಬ ಮಾನವೀಯ ಗುಣಗಳು ಮರೆಯಾಗಿವೆ. ಇಂತಹ ಸಂದರ್ಭದಲ್ಲಿ ತೃತೀಯ ಲಿಂಗಿಗಳಿಗೆ ಸಮಾನವಾದ ಅವಕಾಶಗಳನ್ನು ಕಲ್ಪಿಸುವುದರ ಮೂಲಕ ಸಮಾಜದಲ್ಲಿ ಸಾಮಾನ್ಯ ಮನುಷ್ಯರಂತೆ ಬದಕಲು ಅವಕಾಶ ಕಲ್ಪಿಸಬೇಕು. ಇದು ನಮ್ಮೆಲ್ಲರ ಜವಾಬ್ದಾರಿ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕನ್ನಡ ಕಾರ್ಯಕರ್ತ ಶಂಕರ್ ಹೂಗಾರ್, ಆನೇಕಲ್ ಕಸಾಪ ಅಧ್ಯಕ್ಷ ರಾ.ನವೀನ್ ಕುಮಾರ್ ಉಪಸ್ಥಿತರಿದ್ದರು. ಇದೇ ವೇಳೆ ಟಿ.ಪಿಪ್ರಭುದೇವ್ ಮತ್ತು ಸುನಂದಾ ಹಾಗೂ ರಾಮಕೃಷ್ಣ ಮತ್ತು ಸರಸ್ವತಿ ದಂಪತಿಗಳಿಗೆ ‘ಆದರ್ಶ ದಂಪತಿ ಪ್ರಶಸ್ತಿ’, ಮೂರೂರು ಚಂದ್ರ, ಕೆ.ಚನ್ನಯ್ಯ, ಬಾಪುಗೌಡ ಮತ್ತು ಟಿ.ಎಸ್. ಚಂದ್ರಶೇಖರ್‌ರಾವ್‌ಗೆ ‘ಆದರ್ಶ ಕನ್ನಡಿಗ ಪ್ರಶಸ್ತಿ’, ಶಿವಪ್ರಕಾಶ ರು.ಕುಂಬಾರ ಗೆ ‘ಯುವಕಾವ್ಯ ಪ್ರತಿಭಾ ಪ್ರಶಸ್ತಿ’ ನೀಡಿ ಸನ್ಮಾನಿಸಲಾಯಿತು.