ರಾಜ್ಯದಲ್ಲಿ ವಿಸ್ತರಿಸಿಕೊಳ್ಳುತ್ತಿದೆ ಮಾದಕ ಮಾಫಿಯಾ

Update: 2017-06-19 04:26 GMT

ಸುಮಾರು 15ರಿಂದ 30ವರ್ಷ ವಯಸ್ಸಿನ ಶಾಲಾ-ಕಾಲೇಜು ವಿದ್ಯಾರ್ಥಿ- ವಿದ್ಯಾರ್ಥಿನಿಯರೇ ಹೆಚ್ಚಿನ ಸಂಖ್ಯೆಯಲ್ಲಿ ಮಾದಕ ದ್ರವ್ಯಗಳ ಚಟಕ್ಕೆ ದಾಸರಾಗಿದ್ದು, ಶೇ.35ರಿಂದ 40ರಷ್ಟು ಮಂದಿ ದುಶ್ಚಟಕ್ಕೆ ಬಲಿಯಾಗುತ್ತಿದ್ದಾರೆಂಬ ಆಘಾತಕಾರಿ ಅಂಶವೂ ಸಮೀಕ್ಷೆಯಿಂದ ಬಯಲಾಗಿದೆ.

ರಾಜ್ಯದಲ್ಲಿ ಸಂಪೂರ್ಣ ಮದ್ಯ ನಿಷೇಧದ ಮಾತು ಚರ್ಚೆಯಲ್ಲಿರುವಾಗಲೇ ರಾಜ್ಯಾದ್ಯಂತ ಮಾದಕ ಮಾಫಿಯಾ ವಿಸ್ತರಿಸಿಕೊಳ್ಳುತ್ತಿರುವುದು ಸಾರ್ವಜನಿಕರಲ್ಲಿ ಆತಂಕ ತಂದಿದೆ. ಕೇವಲ ಬೆಂಗಳೂರಿಗೆ ಮಾತ್ರ ಸೀಮಿತ ವಾಗದೆ, ಮಂಗಳೂರು, ಉಡುಪಿ, ಮೈಸೂರು ಸಹಿತ ಹಲವು ಪ್ರವಾಸಿ ತಾಣಗಳಲ್ಲೂ ಇದು ತನ್ನ ವಿಷಬೇರುಗಳನ್ನು ಊರುತ್ತಿದೆ ಎನ್ನುವುದು ಪೊಲೀಸ್ ಅಂಕಿ-ಅಂಶಗಳಿಂದ ಬಯಲಾಗಿದೆ. ಇತ್ತೀಚಿನ ಮೂರು ವರ್ಷಗಳಲ್ಲಿ, 1,195 ದಿನಗಳಲ್ಲಿ 998ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿ 1,350ಕ್ಕೂ ಹೆಚ್ಚು ಯುವಕರ ಬಂಧನವಾಗಿದೆ ಎಂದು ಪೊಲೀಸ್ ಅಧಿಕೃತ ಮೂಲಗಳು ತಿಳಿಸಿವೆ. ದಕ್ಷಿಣ ಕನ್ನಡವೂ ಸೇರಿ ದಂತೆ ಹಲವೆಡೆ ನಡೆಯುತ್ತಿರುವ ಕೋಮುಗಲಭೆಗಳಲ್ಲೂ ಈ ಡ್ರಗ್ಸ್ ಮಾಫಿಯಾದ ಪಾತ್ರ ಇದೆ ಎನ್ನುವುದು ಬಹಿರಂಗವಾಗುತ್ತಿದೆ.

ಅಧಿಕೃತವಾಗಿ ಪತ್ತೆಯಾದ ಪ್ರಕರಣಗಳೇ ಇಷ್ಟಾದರೆ, ದಾಖಲಾಗದ ಪ್ರಕರಣಗಳ ಸಂಖ್ಯೆ ಇನ್ನೆಷ್ಟಿರಬಹುದು. ಕೆಲ ಸ್ವಯಂ ಸೇವಾ ಸಂಸ್ಥೆಗಳು (ಎನ್‌ಜಿಒ) ನಡೆಸಿರುವ ಸಮೀಕ್ಷೆ ಪ್ರಕಾರ ರಾಜ್ಯದ ಜನಸಂಖ್ಯೆಯ ಶೇ.20ರಷ್ಟು ಮಂದಿ ಮಾದಕ ವಸ್ತು ಜಾಲಕ್ಕೆ ಸಿಲುಕಿದ್ದು, ಇದರಲ್ಲಿ ಅರ್ಧದಷ್ಟು ಯುವಕರು. ಇದರೊಳಗೂ ಶೇ.15 ರಷ್ಟು ಶಿಕ್ಷಣ ಪಡೆದ ಯುವ ಪೀಳಿಗೆ ಮಾದಕ ವಸ್ತು ಸೇವನೆಗೆ ಬಲಿಯಾಗಿದೆ ಎನ್ನಲಾಗುತ್ತಿದೆ. ಕೇಂದ್ರ ಮಾದಕ ವಸ್ತು ನಿಯಂತ್ರಣ ದಳ ಹಾಗೂ ರಾಜ್ಯ ಪೊಲೀಸರ ತನಿಖೆ (ಸಿಸಿಬಿ ಒಳಗೊಂಡಂತೆ) ಅಷ್ಟೆ ಅಲ್ಲ, ಕೆಲ ಸ್ಥಳೀಯ ಸ್ವಯಂ ಸೇವಾ ಸಂಸ್ಥೆಗಳು ಡ್ರಗ್ ಮಾಫಿಯಾಗೆ ಕಡಿವಾಣ ಹಾಕಲು ಶ್ರಮ ಪಡುತ್ತಿವೆ. ಆದರೆ, ಇದಕ್ಕೆ ಹೆಚ್ಚಾಗಿ ಅಂತಾರಾಷ್ಟ್ರೀಯ ಮತ್ತು ವಾಣಿಜ್ಯ ನಂಟು ಇರುವ ಕಾರಣ ಇದುವರೆಗೂ ಶೇ.2ರಷ್ಟನ್ನು ತಡೆಗಟ್ಟಲೂ ಆಗುತ್ತಿಲ್ಲ ಎಂದು ಕೆಲವು ಅಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮಾದಕ ವಸ್ತು ವ್ಯವಹಾರವು ವ್ಯವಸ್ಥಿತ ‘ಆರ್ಥಿಕ ಉದ್ಯಮ’ವಾಗಿ ಮಾರ್ಪಡುತ್ತಿದೆ. ಅಂತಾರಾಷ್ಟ್ರೀಯ ಡ್ರಗ್ ಮಾರಾಟಗಾರರು ಸ್ಥಳೀಯರೊಂದಿಗೆ ನೇರವಾಗಿ ಸಂಪರ್ಕ ಸಾಧಿಸುವಷ್ಟರ ಮಟ್ಟಿಗೆ ಅದರ ಮಾರುಕಟ್ಟೆ ವಿಸ್ತರಣೆಯಾಗುತ್ತಿದೆ. ದಶಕಗಳ ಹಿಂದೆ ಹತ್ತಾರು ಕೋಟಿ ರೂ. ವ್ಯವಹಾರ ನಡೆಸುತ್ತಿದ್ದ ಡ್ರಗ್ಸ್ ಜಾಲ, ಈಗ ಸಾವಿ ರಾರು ಕೋಟಿ ರೂ. ವಹಿವಾಟು ನಡೆಸುವ ಮಟ್ಟಿಗೆ ಬೆಳೆದುನಿಂತಿದೆ ಎಂಬ ಆಘಾತಕಾರಿ ವಿಷಯ ವಿದೇಶಿ ಆರೋಪಿಗಳ ವಿಚಾರಣೆಗಳಲ್ಲಿ ಹೊರಬಿದ್ದಿದೆ. ಅಲ್ಲದೆ, ಮಾದಕ ವಸ್ತು ವ್ಯವಹಾರಕ್ಕಾಗಿಯೇ ವಿದೇಶಿಯರು ದೇಶಕ್ಕೆ ಅಕ್ರಮವಾಗಿ ಪ್ರವೇಶ ಮಾಡುತ್ತಿದ್ದಾರೆ.

ಡ್ರಗ್ ಮಾರಾಟಗಾರರು: ಮಾದಕ ವಸ್ತುಗಳನ್ನು ಮಾರಾಟ ಮಾಡುವವರಲ್ಲಿ ಹೆಚ್ಚಾಗಿ ವಿದ್ಯಾರ್ಥಿಗಳು, ಐಟಿ-ಬಿಟಿ ಉದ್ಯೋಗಸ್ಥರು, ಸ್ಥಳೀಯ ಆಟೊ, ಟಾಕ್ಸಿ ಚಾಲಕರು ಹಾಗೂ ವಿದೇಶಿ ಪ್ರವಾಸಿಗರೇ ಪ್ರಮುಖ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಪತ್ರಿಕೆಗೆ ಮಾಹಿತಿ ನೀಡಿದರು.

ಅಡ್ಡೆಗಳು: ಮಾದಕ ವ್ಯವಹಾರದ ಜಾಲ ಪ್ರಮುಖ ವಾಗಿ ವಿದ್ಯಾರ್ಥಿ ಬಳಗವನ್ನೇ ಗುರಿಯಾಗಿಸಿಕೊಂಡಿದೆ. ಇನ್ನು ಕಾಲೇಜುಗಳು, ಕೊಳೆಗೇರಿ ಪ್ರದೇಶಗಳು, ನೂತನವಾಗಿ ನಿರ್ಮಿಸುತ್ತಿರುವ ಕಟ್ಟಡಗಳ ಆವರಣ, ಕ್ಲಬ್‌ಗಳು, ಪ್ರವಾಸಿ ತಾಣಗಳು ಮಾದಕ ವಸ್ತು ಮಾರಾಟದ ಅಡ್ಡೆಗಳಾಗಿವೆ ಎಂದು ಹೇಳಲಾಗುತ್ತಿವೆ.

ಹಲವು ವರ್ಷಗಳ ಹಿಂದೆ ಮಾದಕ ವಸ್ತು ಗಾಂಜಾ ಎನ್ನಲಾಗುತ್ತಿತ್ತು. ಆದರೆ, ಇದೀಗ ಮಾದಕ ವಸ್ತು ಮಾರುಕಟ್ಟೆಯಲ್ಲಿ ಹಶೀಶ್, ಹೆರಾಯಿನ್, ಅಫೀಮು, ಕೊಕೈನ್, ಎಲ್‌ಎಸ್‌ಡಿ ಇನ್ನಿತರ ಮಾದಕ ವಸ್ತುಗಳು ಚಾಲ್ತಿಗೆ ಬಂದಿವೆ. ಇದೆಲ್ಲವೂ ಹೆಚ್ಚಾಗಿ ಕರಾವಳಿ ಭಾಗದಿಂದಲೇ ರಾಜ್ಯಕ್ಕೆ ಪ್ರವೇಶ ಪಡೆಯುತ್ತಿವೆ. ಗೋವಾ ರಾಜ್ಯವೂ ಮಾದಕ ವಸ್ತುಗಳ ರಾಜಧಾನಿ ಎನ್ನುವ ಕಳಂಕಕ್ಕೆ ಸಿಲುಕಿಕೊಂಡಿದೆ. ವಾಯು ಹಾಗೂ ಜಲ ಮಾರ್ಗಗಳ ಮೂಲಕ ರಾಜ್ಯ ಪ್ರವೇಶಿಸುವ ಈ ಮಾದಕ ವಸ್ತುಗಳು ಭೂ ಸಾರಿಗೆ ಬಳಸಿದ್ದು ಅಪರೂಪ. ಬಹುತೇಕ ಗೋವಾ ಮೂಲಕ ಮಂಗಳೂರು ಬಂದರಿಗೆ ಬರುವ ವಿದೇಶಿ ಡ್ರಗ್ಸ್, ಅಲ್ಲಿಂದ ಇತರೆಡೆಗೆ ರವಾನೆಯಾಗುತ್ತದೆ.

ಮಾದಕ ದ್ರವ್ಯ ಜಾಲದ ರೂಪ ಹಲವಾರು....!

ಮಾದಕ ವಸ್ತುಗಳಲ್ಲಿ ಅನೇಕ ವಿಧಗಳಿವೆ. ನರಕೋಶಗಳ ಕ್ರಿಯೆಗಳು ಕುಗ್ಗುವಂತೆ ಮಾಡುವ ಅಫೀಮುಗಳಲ್ಲಿ ಮಾರ್ಫಿನ್, ಕೊಕೈನ್, ಹೆರಾಯಿನ್, ಬ್ರೌನ್‌ಶುಗರ್, ಮೆಥಡೋನ್, ಪೆಥಿಡನ್, ಟಿಡಿಜೆಸಿಕ್ ಹಾಗೂ ಮದ್ಯಸಾರದಲ್ಲಿ ಹೆಂಡ, ಸಾರಾಯಿ, ಬೀರ್, ಬ್ರಾಂದಿ, ವಿಸ್ಕಿ, ಜಿನ್, ರಮ್, ಅರಾಕ್ ಸೇರಿದೆ.

ಅಂಫಿಟಮಿನ್ಸ್, ಬೆಂಜ್ ಆಂಫಿಟಮಿನ್, ಡೆಕ್ಟ್ರೋ ಆಂಫಿಟಮಿನ್, ಕೆಫಿನ್, ಕೊಕೇನ್ ಇತ್ಯಾದಿ ಪ್ರಚೋದನೆಗೆ ಎಡೆಮಾಡಿಕೊಡುತ್ತದೆ. ಕೆನಬಿಸ್, ಗಾಂಜಾ, ಭಂಗಿ, ಚರಸ್, ಹಶೀಶ್, ಮಾರಿಹೋನ, ಎಲ್‌ಎಸ್‌ಡಿ, ಮೆಸ್ಕಲಿನ, ಪಿಯೋಟ್, ಡೈಜೆಪಾಂ, ಮೆಥಕೊಲಾನ್, ನೈಟ್ರಜೆಪಾಮ್, ಅಲ್‌ಪ್ರೊಜೊಲಾಮ್ ಇತ್ಯಾದಿ ಭ್ರಮಾಜನಕ ಸೃಷ್ಟಿಸುತ್ತದೆ ಎಂದು ಮಾನಸಿಕ ತಜ್ಞ ವೈದ್ಯರು ಹೇಳುತ್ತಾರೆ.

ಕಾರ್ಕೋಟಕ ವಿಷಕ್ಕಿಂತಲೂ ಅಪಾಯಕಾರಿ!

                                                                                 

 ಮಾದಕ ದ್ರವ್ಯವು ಕಾರ್ಕೋಟಕ ವಿಷಕ್ಕಿಂತಲೂ ಅಪಾಯಕಾರಿ ಎಂದು  ಹೇಳಲಾಗುತ್ತದೆ. ಇದು ಇಂದು ನಿನ್ನೆಯ ಬೆಳವಣಿಗೆಯಲ್ಲ. ಮನುಷ್ಯ ತನ್ನ ನೋವಿಗೆ,  ನರಳುವಿಕೆಗೆ, ದು:ಖ ದುಮ್ಮಾನಗಳಿಗೆ ಇದನ್ನೇ ‘ಯಕ್ಷಿಣಿ’ ಪರಿಹಾರ ಎಂದು  ಭಾವಿಸಿದ್ದಾನೆ. ಒಮ್ಮೆ ಈ ಯಕ್ಷದೊಳಗೆ ಸಿಲುಕಿದರೆ ಮತ್ತೆ ಅಲ್ಲಿಂದ ಜೀವಂತವಾಗಿ  ಪಾರಾಗಿ ಬರಲು ಅಸಾಧ್ಯ. ಅದು ಕ್ಷಣ ಕ್ಷಣಕ್ಕೂ ಮಾದಕ ದ್ರವ್ಯ ವ್ಯಸನಿಯನ್ನು  ಕೊಲ್ಲುತ್ತಲೇ ಇರುತ್ತದೆ. ಇದು ಕೇವಲ ಜಿಲ್ಲೆ, ರಾಜ್ಯ, ರಾಷ್ಟ್ರ ಮಟ್ಟದ ಜಾಲದ  ಕೊಂಡಿಯಲ್ಲ. ಇದರ ಜಾಲ ಅಂತಾರಾಷ್ಟ್ರೀಯ ಮಟ್ಟಕ್ಕೂ ವ್ಯಾಪಿಸಿದೆ. ಇದರ ನಿಗ್ರಹ  ಯಾವುದೋ ಸಂಸ್ಥೆಯಿಂದ, ಕೌನ್ಸ್ಸೆಲಿಂಗ್‌ನಿಂದ, ಸರಕಾರದಿಂದ, ಪೊಲೀಸ್ ಇಲಾಖೆ  ಯಿಂದ ಮಾತ್ರ ಸಾಧ್ಯವಿಲ್ಲ. ಇವೆಲ್ಲಾ ಅಲ್ಲಿಂದ ಹೊರಬರಲು ಒಂದು ಮಾರ್ಗವಷ್ಟೆ. ಮನುಷ್ಯ ಸ್ವಯಂ ಆಗಿ ಮನಪರಿವರ್ತನೆ ಮಾಡಿಕೊಂಡರೆ ಮಾತ್ರ ಇದರ ನಿರ್ಮೂಲನೆ ಸಾಧ್ಯ ಎಂದು ಕಾರ್ಮಿಕ ಮುಖಂಡ ಮುಹಮ್ಮದ್ ರಫಿ ಹೇಳುತ್ತಾರೆ.

ಮಾದಕ ವಸ್ತುಗಳ ಚಟಕ್ಕೆ ತುತ್ತಾದವರು ತಮ್ಮ ಈ ಚಟದಿಂದ ತಕ್ಷಣ ಹೊರಬರಲಾರರು. ಯಾರದೋ ಮಾತಿಗೆ ಮನ್ನಣೆ ನೀಡಿ ಒಂದೆರಡು ದಿನ ಸುಮ್ಮನಾದರೂ ಬಳಿಕ ತನ್ನ ಚಟಕ್ಕೆ ಅಂಟಿಕೊಳ್ಳುತ್ತಾರೆ. ಅಷ್ಟೇ ಅಲ್ಲ, ಹಣಕ್ಕಾಗಿ ಯಾವುದೇ ಕಾನೂನು ಬಾಹಿರ ಕೃತ್ಯ ಎಸಗಲು ಹಿಂದೇಟು ಹಾಕಲಾರರು. ಅದಕ್ಕಿಂತ ಮುಂಚೆ ಹೆತ್ತವರು, ಪೋಷಕರು, ಸಮಾಜದ ಮುಖಂಡರು ಎಚ್ಚೆತ್ತುಕೊಳ್ಳುವ ಅಗತ್ಯವಿದೆ ಎಂದು ವಿವಿಧ ಸಾಮಾಜಿಕ ಸಂಘಟನೆಗಳಲ್ಲಿ ತೊಡಗಿಸಿಕೊಂಡಿರುವ ಅಲಿ ಹಸನ್ ಅಭಿಪ್ರಾಯಪಡುತ್ತಾರೆ.

ಆಲ್ಕೋಹಾಲ್-ಗಾಂಜಾ ಮತ್ತಿತರ ಮಾದಕ ವಸ್ತುಗಳು ಚಟವಾಗಿ ಬೆಳೆಯಲು ಕೆಲವು ತಿಂಗಳು ಬೇಕು. ಆದರೆ, ಹೆರಾಯಿನ್-ಬ್ರೌನ್‌ಶುಗರ್ ಹಾಗಲ್ಲ. ಇದು ತನ್ನ ಕೆಲಸ ಮಾಡಲು ಒಂದೆರಡು ದಿನ ಸಾಕು. ಹೆರಾಯಿನನ್ನು ಸೂಜಿಮದ್ದಿನ ರೂಪದಲ್ಲಿ ಪಡೆದರೆ, ಬ್ರೌನ್‌ಶುಗರನ್ನು ಹೊಗೆ ಬತ್ತಿಯೊಂದಿಗೆ ಸೇದುತ್ತಾರೆ. ಇವೆರಡೂ ಮೆದುಳು ಸೇರಿ ತನ್ನ ಕೆಲಸ ಆರಂಭಿಸುತ್ತದೆ. ಆ ಬಳಿಕ ಅಂತಹ ವ್ಯಕ್ತಿಯಲ್ಲಿ ಯಾವ ನೋವು, ಆತಂಕ ಕಾಣಿಸದು. ಎಲ್ಲದಕ್ಕೂ ತಾನು ‘ಫಿಟ್’ ಎಂಬ ಭ್ರಮಾಲೋಕದಲ್ಲಿರುತ್ತಾರೆ. ಈ ಭ್ರಮಾ ಲೋಕವೇ ಎಲ್ಲ ಅನಾಹುತಗಳಿಗೆ ಕಾರಣವಾಗುತ್ತದೆ. ಇಂತಹವರಿಗೆ ತನ್ನ ತಂದೆ-ತಾಯಿ, ಒಡಹುಟ್ಟಿದವರು, ಹೆಂಡತಿ-ಮಕ್ಕಳು ಯಾರೂ ಮುಖ್ಯವಲ್ಲ. ಇವರಿಗೆ ಇವರದೇ ಲೋಕ. ಒಂದೇ ಸೂಜಿನಿಂದ ಹಲವಾರು ಮಂದಿ ಹೆರಾಯಿನ್ ತೆಗೆದುಕೊಳ್ಳುವ ಕಾರಣ ರೋಗವನ್ನು ಪರಸ್ಪರ ಹಂಚಿಕೊಳ್ಳಲಾಗುತ್ತದೆ. ಇವು ಲಿವರ್‌ಗೆ ಹೊಡೆತ, ಹೃದಯದ ಸೊಂಕು, ಕ್ಷಯ ಮಿದುಳ ಪೊರೆ ಉರಿತ, ರಕ್ತ ನಂಜು, ಫಿಟ್ಸ್, ಶ್ವಾಸಕೋಶಗಳ ಕ್ಯಾನ್ಸರ್, ಕೊನೆಗೆ ಏಯ್ಡ್ಸಾ ರೋಗಕ್ಕೂ ತುತ್ತಾದವರಿದ್ದಾರೆ. ಈ ಮಧ್ಯೆ ಇದು ವಿಕೃತಕಾಮ, ಸಲಿಂಗ ಕಾಮಕ್ಕೆ ಎಡೆ ಮಾಡಿಕೊಡುವ ಅಪಾಯವೂ ಇದೆ.

ಅಪಘಾತಕ್ಕೂ ಕಾರಣವಾಗಬಲ್ಲುದು!

ಮಾದಕ ದ್ರವ್ಯ ಸೇವನೆಯಿಂದ ಬಹುವಿಧದ ಅನಾಹುತಗಳು ಮಾತ್ರವಲ್ಲ, ಅಪಘಾತಕ್ಕೂ ಕಾರಣವಾಗಬಹುದು. ದೇಹ ಮತ್ತು ಮನಸ್ಸು ಸ್ಥಿಮಿತಕಳಕೊಳ್ಳುವ ಕಾರಣ ತಾನು ವಾಹನ ಚಲಾಯಿಸುತ್ತಿದ್ದೇನೆ ಎಂಬ ಪ್ರಜ್ಞೆಯೇ ಆ ವ್ಯಕ್ತಿಯಲ್ಲಿರುವುದಿಲ್ಲ. ಹಾಗಾಗಿ ಮಾದಕ ದ್ರವ್ಯ ಸೇವಿಸಿದ ಬಳಿಕ ವಾಹನ ಚಲಾಯಿಸಿದರೆ ಅಪಘಾತ ಕಟ್ಟಿಟ್ಟ ಬುತ್ತಿ.

ಹೆರಾಯಿನ್ ಅನುಭವವೇ ವಿಚಿತ್ರ!

ಹೆರಾಯಿನನ್ನು ರಕ್ತನಾಳಕ್ಕೆ ಚುಚ್ಚಿಕೊಂಡ ಬಳಿಕದ ಅನುಭವ ವಿಚಿತ್ರ. ನಮಗೆ ಆವಾಗ ಯಾವುದೂ ಬೇಡ. ಕೆಲಸದಲ್ಲಿ ಆಸಕ್ತಿ ಇಲ್ಲ. ಹೆಂಡತಿ-ಮಕ್ಕಳ ಮೇಲೆ ಪ್ರೀತಿ ಇಲ್ಲ. ನಮಗೆ ರಾತ್ರಿಯೂ ಒಂದೆ, ಹಗಲೂ ಒಂದೆ. ಎಲ್ಲಿಯವರೆಗೆ ಅಂದರೆ ನಮಗೆ ಲೈಂಗಿಕ ಆಸಕ್ತಿಯೇ ಇರುವುದಿಲ್ಲ. ಆದರೂ ನಾವು ಷಂಡ ಅಲ್ಲ ಎಂದು ಭಾವಿಸಿ ಸುಖಕ್ಕಾಗಿ ಯಾರ್ಯಾರದೋ ಬೆನ್ನು ಹತ್ತಿ ಒದೆ ತಿಂದು ಚರಂಡಿ ಪಾಲಾದ ದಿನಗಳೂ ಇವೆ ಎಂದು ಈ ಜಾಲಕ್ಕೆ ಸಿಲುಕಿ ಅದ್ಹೇಗೋ ಅಪಾಯ ದಿಂದ ಪಾರಾಗಿ ಬಂದ ಹೆಸರು ಹೇಳಲಿಚ್ಛಿಸದ ವ್ಯಕ್ತಿಯೊಬ್ಬರು ಹೇಳುತ್ತಾರೆ.

ಬೇಕಾಬಿಟ್ಟಿ ದುಡ್ಡು ಮಕ್ಕಳ ಕೈಸೇರದಂತೆ ಇರಲಿ ನಿಗಾ

ಪೋಷಕರು ಮಕ್ಕಳಿಗೆ ಬೇಕಾಬಿಟ್ಟಿಯಾಗಿ ದುಡ್ಡು ನೀಡುವುದು ಕೂಡಾ ಮಕ್ಕಳು ಮಾದಕ ದ್ರವ್ಯಗಳಂತಹ ಕೆಟ್ಟ ಚಟಗಳಿಗೆ ದಾಸರಾಗಲು ಕಾರಣವಾಗುತ್ತಿದೆ. ಕೆಲ ವರ್ಷಗಳ ಹಿಂದೆ ಮೂಡಿಗೆರೆಯ ನನ್ನ ಸ್ನೇಹಿತೆಯ ಮಗಳೊಬ್ಬಳನ್ನು ಮಂಗಳೂರಿನ ಪ್ರತಿಷ್ಠಿತ ಕಾಲೇಜಿಗೆ ಸೇರಿಸಲಾಗಿತ್ತು. ಮಗಳು ಉನ್ನತ ಶಿಕ್ಷಣ ಪಡೆಯುವ ಆಸೆಯಿಂದ ಆಕೆಗೆ ಯಾವುದೇ ಕೊರತೆ ಆಗದಂತೆ ಆಕೆಯನ್ನು ಹಾಸ್ಟೆಲ್‌ನಲ್ಲಿ ಸೇರಿಸಿ ಆಕೆಗೆ ಸಾಕಷ್ಟು ಹಣವನ್ನೂ ಅವರು ಒದಗಿಸುತ್ತಿದ್ದರು. ಆದರೆ ಮುಗ್ಧೆಯಾಗಿದ್ದ ಅವರ ಪುತ್ರಿ ಇಲ್ಲಿ ಅದು ಹೇಗೋ ತನ್ನ ಸ್ನೇಹಿತರ ಜತೆ ಡ್ರಗ್ಸ್ ಚಟಕ್ಕೆ ಬಲಿಯಾಗಿ ಶಿಕ್ಷಣ ಪೂರೈಸುವ ಮೊದಲೇ ಆತ್ಮಹತ್ಯೆಗೆ ಶರಣಾಗಿದ್ದಳು. ಪೋಷಕರಿಗೂ ಈ ವಿಷಯ ಅರಿವಾಗಿದ್ದು ಮಗಳು ತಮ್ಮಿಂದ ಶಾಶ್ವತವಾಗಿ ದೂರವಾದಾಗ. ಈ ಘಟನೆಯಿಂದ ತೀರಾ ಹತಾಶರಾದ ಆ ಬಾಲಕಿಯ ಪೋಷಕರು ತಮ್ಮೆಲ್ಲಾ ಸ್ನೇಹಿತರು, ಕುಟುಂಬದವರ ಜತೆಗೂ ಸಂಬಂಧವನ್ನು ಕಳೆದುಕೊಂಡು ದೂರವಾಗಿದ್ದಾರೆ. ಇಂತಹ ಅನೇಕ ಪ್ರಕರಣಗಳು ನಮ್ಮ ಕಣ್ಣ ಮುಂದೆ ನಡೆದಿವೆ. ಇಂತಹ ಪರಿಸ್ಥಿತಿಯಲ್ಲಿ ಶಾಲಾ ಕಾಲೇಜುಗಳಿಗೆ ಕಳುಹಿಸುವ ತಮ್ಮ ಮಕ್ಕಳಿಗೆ ಒಂದಿಷ್ಟು ಸಮಯದ ಜತೆ ಅವರ ಚಟುವಟಿಕೆಗಳ ಬಗ್ಗೆ ಗಮನ ಹರಿಸುವುದು ಪೋಷಕರ ಪರಮ ಕರ್ತವ್ಯ ಎನ್ನುತ್ತಾರೆ ಪತ್ರಕರ್ತೆಯಾಗಿಯೂ ಸೇವೆ ಸಲ್ಲಿಸಿರುವ ಅನುಷಾ ಹೊನೆಕೋಲು.

‘‘ಒಮ್ಮೆ ಡ್ರಗ್ಸ್ ಚಟಕ್ಕೆ ಬಿದ್ದವರು ಮತ್ತೆ ಅದರಿಂದ ಹೊರಬರಲಾಗದೆ ಅದು ಸಿಗದಿದ್ದರೆ ಇತರ ನಶೆ ನೀಡುವ ವಸ್ತುಗಳನ್ನು ಆಶ್ರಯಿಸುತ್ತಾರೆ. ಈ ಚಟಕ್ಕೆ ಅಂಟಿಕೊಂಡವರನ್ನು ಒಂದೊಮ್ಮೆ ಅದರಿಂದ ಹೊರತರಲು ಪ್ರಯತ್ನಗಳನ್ನು ಮಾಡಿದರೂ ಅವರು ಖಿನ್ನರಾಗುತ್ತಾರೆ. ನಶೆಗೆ ತಾವು ಆಶ್ರಯಿಸಿದ್ದ ಮಾದಕ ದ್ರವ್ಯಗಳು ದೊರೆಯದಿದ್ದರೆ ಅವರು ಕೊನೆಗೆ ಬಿಪಿ ಮಾತ್ರೆಗಳು, ಸಿರಪ್‌ಗಳಂತಹ ಔಷಧಿಗಳನ್ನು ಉಪಯೋಗಿಸಿ ನಶೆ ಪಡೆಯಲು ಪ್ರಯತ್ನಿಸುತ್ತಾರೆ. ಇದರಿಂದ ಪ್ರಾಣ ಕಳೆದುಕೊಳ್ಳುವ ಸಂಭವವೇ ಅಧಿಕ. ಈ ಬಗ್ಗೆ ಎಚ್ಚರಿಕೆ ವಹಿಸಬೇಕಾದದ್ದು ಪೋಷಕರು. ಜತೆಗೆ ಮೆಡಿಕಲ್ ಸ್ಟೋರ್‌ಗಳಲ್ಲಿ ವೈದ್ಯರ ಚೀಟಿ ಇಲ್ಲದೆ ಮಕ್ಕಳ ಕೈಗೆ ಔಷಧಿಗಳನ್ನು ನೀಡುವ ಬಗ್ಗೆ ಕಡಿವಾಣ ಹಾಕಬೇಕಾದ ಅಗತ್ಯವಿದೆ.

ಕುಟುಂಬ ನಿರ್ವಹಣೆಗಾಗಿ ತಂದೆ ತಾಯಿ ಇಬ್ಬರೂ ಇಂದು ದುಡಿಯುವುದು ಅನಿವಾರ್ಯವಾಗಿರುವ ಕಾಲಘಟ್ಟದಲ್ಲಿ ಮಕ್ಕಳು ಪೋಷಕರ ಪ್ರೀತಿಯನ್ನು ಕಳೆದುಕೊಳ್ಳುತ್ತಾ, ಇಂತಹ ಕೆಟ್ಟ ಚಟಗಳತ್ತ ಆಕರ್ಷಿತರಾಗುವುದು ಸುಲಭ. ಹಾಗಾಗಿ ತಮ್ಮ ಕೆಲಸದ ಒತ್ತಡದ ನಡುವೆ ಮಕ್ಕಳಿಗೆ ಒಂದಿಷ್ಟು ಸಮಯದ ಜತೆ ಪ್ರೀತಿಯನ್ನು ಹಂಚಿಕೊಳ್ಳುವುದು ಅತೀ ಅಗತ್ಯ. ಮಕ್ಕಳಿಗೆ ತಿಂಡಿ ತಿನಿಸು, ವಸ್ತುಗಳು ಸೇರಿದಂತೆ ಅಗತ್ಯವಿರುವುದನ್ನು ಅವರ ಜತೆಗೇ ಖರೀದಿಸಿ ನೀಡುವ ಬದಲು ಅವರ ಕೈಗೆ ದುಡ್ಡನ್ನು ನೀಡುವುದು ಅಪಾಯಕ್ಕೆ ಆಹ್ವಾನ ನೀಡಿದಂತೆ. ಕಳೆದು ಹೋದ ಮೇಲೆ ಕಣ್ಣೀರು ಹಾಕಿ ಪರಿತಪಿಸುವ ಮೊದಲು ಮುಂಜಾಗರೂಕತೆಯೂ ಅತೀ ಅಗತ್ಯ ಎಂದು ಓರ್ವ ಪೋಷಕಿಯಾಗಿಯೂ ಅನುಷಾ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಪೂರೈಕೆಗೆ ಮಕ್ಕಳ ಬಳಕೆ

ಗಾಂಜಾ ಮಾರಾಟಗಾರರು ಗಾಂಜಾವನ್ನು ಪೂರೈಸಲು ಮಕ್ಕಳನ್ನು ಬಳಸಿಕೊಳುತ್ತಿದ್ದಾರೆ. ಗಾಂಜಾ ಮಾರಾಟಗಾರ ಗ್ರಾಹಕನನ್ನು ಸಂಪರ್ಕಿಸಿ ನಿರ್ದಿಷ್ಟ ಸ್ಥಳಕ್ಕೆ ಬರುವಂತೆ ಸೂಚಿಸು ತ್ತಾನೆ. ಗ್ರಾಹಕ ನಿರ್ದಿಷ್ಟ ಸ್ಥಳಕ್ಕೆ ತಲುಪಿದ ಬಳಿಕ ಈ ಮಾರಾಟಗಾರ ಗ್ರಾಹಕನನ್ನು ನೇರವಾಗಿ ಭೇಟಿಯಾಗದೆ ಮಕ್ಕಳ ಕೈಗೆ 10 ರೂ. ಇಟ್ಟು ಕಳುಹಿಸಿಕೊಡುತ್ತಾನೆ. ಈ ಮಕ್ಕಳಿಗೆ ಆತ ಕೊಟ್ಟಿರುವ ವಸ್ತುವಿನಲ್ಲಿ ಏನಿದೆ ಎಂಬುದು ತಿಳಿದಿರುವುದಿಲ್ಲ. ಸಾಮಾನ್ಯವಾಗಿ ಮಕ್ಕಳ ಮೇಲೆ ಅನುಮಾನ ವ್ಯಕ್ತಪಡಿಸುವ ಅಥವಾ ಅವರ ಬಳಿಯ ಲ್ಲಿರುವ ವಸ್ತುವನ್ನು ವಿಚಾರಿಸುವ ಗೋಜಿಗೆ ಯಾರೂ ಹೋಗುವುದಿಲ್ಲ ಎನ್ನುವುದು ಈ ಸಮಿತಿ ಸದಸ್ಯರ ಅಭಿಪ್ರಾಯ.

 

ಬೆಂಗಳೂರೇ ಮುಂದೆ...

ಕರ್ನಾಟಕದಲ್ಲಿ ಅತಿ ಹೆಚ್ಚು ಮಾದಕ ವಸ್ತು ಮಾರಾಟವಾಗುತ್ತಿರುವ ಪ್ರದೇಶಗಳಲ್ಲಿ ಸಿಲಿಕಾನ್ ಸಿಟಿ ಬೆಂಗಳೂರು ಮೊಟ್ಟ ಮೊದಲ ಸ್ಥಾನ ವನ್ನು ಪಡೆದುಕೊಂಡಿದೆ. ಅದೇ ರೀತಿ, ಶೈಕ್ಷಣಿಕ ಹಾಗೂ ಪ್ರವಾಸಿ ತಾಣವಾ ಗಿರುವ ಮಂಗಳೂರು, ಮೈಸೂರು, ಹುಬ್ಬಳ್ಳಿ, ಬೆಳಗಾವಿ ಅನಂತರದ ಸ್ಥಾನ ಪಡೆದಿವೆ ಎಂದು ಕೆಲ ಸಮೀಕ್ಷೆಗಳ ವರದಿಗಳಲ್ಲಿ ಉಲ್ಲೇಖವಾಗಿದೆ.

ಗಾಂಜಾ ಬೆಳೆ: ಕಾನೂನು-ನಿಯಮ ಉಲ್ಲಂಘಿಸಿ ಆಂಧ್ರಪ್ರದೇಶ, ತಮಿಳುನಾಡು, ಒಡಿಶಾ ಹಾಗೂ ಪಶ್ಚಿಮಘಟ್ಟ ವಲಯದಲ್ಲಿ ಕೆಲವರು ಗಾಂಜಾ ಬೆಳೆಸುವಲ್ಲಿ ನಿರತರಾಗಿದ್ದಾರೆ. ಹೀಗಾಗಿ, ಆ ರಾಜ್ಯಗಳ ಗಡಿಯಿಂದಲೂ ಕರ್ನಾಟಕಕ್ಕೆ ಗಾಂಜಾ ಪ್ರವೇಶಿಸುತ್ತಿದೆ. ಗಾಂಜಾ ಮಾರಾಟ ದಲ್ಲಿ ಸ್ಥಳೀಯರ ಕೈವಾಡವಿದೆ ಎನ್ನುವುದು ಬಿಟ್ಟರೆ, ಬೆಂಗಳೂರು ಸೇರಿ ನಾನಾ ಕಡೆ ಹೆಚ್ಚಾಗಿ ಮಾರಾಟವಾಗುತ್ತಿರುವುದು ಎಲ್‌ಎಸ್‌ಡಿ, ಕೊಕೇನ್ ಹಾಗೂ ಹೆರಾಯಿನ್ ಎನ್ನಲಾಗಿದೆ.

ಗೂಡ್ಸ್ ರೈಲೇ ರಹದಾರಿ: ನಿತ್ಯ ರಾಜ್ಯಕ್ಕೆ ಹಲವು ಗೂಡ್ಸ್ ರೈಲುಗಳು ಬಂದು ಹೋಗುತ್ತವೆ. ಗೂಡ್ಸ್ ರೈಲಿನಲ್ಲಿ ಎಲ್ಲಿಯೂ ಚಕ್ಕಿಂಗ್ ಪಾಯಿಂಟ್ ಇರುವುದಿಲ್ಲ. ಕೇವಲ ವಸ್ತುಗಳನ್ನಷ್ಟೇ ಸಾಗಿಸುವುದರಿಂದ ರೈಲ್ವೆ ಇಲಾಖೆ ಸಿಬ್ಬಂದಿ ಹಾಗೂ ರೈಲ್ವೇ ಪೊಲೀಸರು ವಸ್ತುಗಳನ್ನು ಸೂಕ್ಷ್ಮವಾಗಿ ಪರಿಶೀಲಿಸುವುದಿಲ್ಲ. ಇದನ್ನು ಚೆನ್ನಾಗಿ ತಿಳಿದ ಡ್ರಗ್ಸ್ ಮಾಫಿಯಾ, ಈ ಮಾರ್ಗವನ್ನು ತಮ್ಮ ಅನುಕೂಲಕ್ಕಾಗಿ ಬಳಸಿಕೊಂಡು ಕೊಕೇನ್, ಗಾಂಜಾದಂಥ ಮಾದಕ ವಸ್ತುಗಳ ಸರಬರಾಜಿಗೆ ರಹದಾರಿ ನಿರ್ಮಿಸಿಕೊಂಡಿದೆ.

ಡಾರ್ಕ್ ಸೈಟ್ ಮಾರಾಟ: ಆನ್‌ಲೈನ್ ಮೂಲಕವೂ ಈಗ ಮಾದಕ ವಸ್ತುಗಳು ಮಾರಾಟವಾಗುತ್ತಿವೆ. ಇದಕ್ಕಾಗಿಯೇ ಪ್ರತ್ಯೇಕ ವೆಬ್‌ಸೈಟ್ ಸೃಷ್ಟಿಸಿಕೊಳ್ಳುವ ಆರೋಪಿಗಳು, ಪರಿಚಿತ ವ್ಯಕ್ತಿಗಳನ್ನು ಮಾತ್ರ ಅದರಲ್ಲಿ ಸದಸ್ಯರನ್ನಾಗಿ ಮಾಡಿಕೊಂಡಿರುತ್ತಾರೆ. ತಮಗೆ ಯಾವ ಡ್ರಗ್ಸ್ ಬೇಕು, ಎಷ್ಟು ಪ್ರಮಾಣದಲ್ಲಿ ಬೇಕು ಎಂಬುದನ್ನು ವ್ಯಸನಿಗಳು ವೆಬ್‌ಸೈಟ್‌ನಲ್ಲೇ ತಿಳಿಸುತ್ತಾರೆ. ಆ ಬೇಡಿಕೆಗೆ ಅನುಗುಣವಾಗಿ ಕೊರಿಯರ್ ಮೂಲಕವೇ ಮಾದಕ ವಸ್ತುವನ್ನು ಮನೆಗೇ ತಲುಪಿಸುತ್ತಿದ್ದಾರೆ ಎಂದು ಸಿಸಿಬಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಸದಸ್ಯರನ್ನು ಹೊರತುಪಡಿಸಿದರೆ ಬೇರೆ ವ್ಯಕ್ತಿಗಳು ಆ ವೆಬ್‌ಸೈಟ್ ಪ್ರವೇಶಿಸಲು ಸಾಧ್ಯವಿಲ್ಲ. ಇದನ್ನು ಡಾರ್ಕ್ ಸೈಟ್ ವಹಿವಾಟು ಎನ್ನಲಾಗುತ್ತದೆ. ನಗರದಲ್ಲೂ ಇಂಥ ವಹಿವಾಟು ಚಾಲ್ತಿಗೆ ಬಂದಿದ್ದು, ಈ ಆರೋಪಿಗಳನ್ನು ಪತ್ತೆ ಮಾಡುವುದು ಬಹಳ ಕಷ್ಟ ಎಂದು ಮಾಹಿತಿ ನೀಡಿದರು. ಕೆಜಿಗೆ ಕೋಟಿ: ಕೊಕೇನ್ ಒಂದು ಕೆಜಿಗೆ 6 ಕೋಟಿ ರೂ. ಹೆರಾಯಿನ್ 30ರಿಂದ 40 ಲಕ್ಷ ರೂ.ವರೆಗೆ ಬೆಲೆ ಹೊಂದಿದೆ. ಅದೇ ರೀತಿ, ಎಲ್‌ಎಸ್‌ಡಿ ಎಂಬ ಮಾದಕ ದ್ರವ್ಯ ಬೋಲ್ಟ್ ಲೆಕ್ಕದಲ್ಲಿ ಮಾರಾಟವಾಗುತ್ತದೆ. ಒಂದು ಗ್ರಾಂನಲ್ಲಿ 60 ಬೋಲ್ಟ್‌ಗಳನ್ನು ತಯಾರಿಸಲಾಗುತ್ತದೆ. ತಲಾ ಒಂದಕ್ಕೆ 2 ಸಾವಿರ ರೂ. ಬೆಲೆ ಇದೆ. ಇನ್ನು ಗಾಂಜಾ 20ರಿಂದ 30 ಸಾವಿರ ರೂ.ಗೆ ಲಭ್ಯವಿದ್ದರೆ, ಮ್ಯಾಜಿಕ್ ಮಶ್ರೂಮ್(ಹುಚ್ಚು ಅಣಬೆ)ಗೂ ಹೆಚ್ಚಿನ ಬೆಲೆ ಇದೆ ಎಂದು ಅಧಿಕಾರಿಗಳು ವಿವರಿಸುತ್ತಾರೆ.

ಫಿಲ್ಮ್ ಸ್ಟಾರ್ಸ್‌, ಮಾಡೆಲ್‌ಗಳು: ಮಾದಕ ವಸ್ತು ಮಾರಾಟ ಪ್ರಕರಣ ದಲ್ಲಿ ನಟಿಯರು, ಮಾಡೆಲ್‌ಗಳು ಭಾಗಿಯಾಗಿರುವ ಆತಂಕಕಾರಿ ಸಂಗತಿ ಗಳಂಟು. ಸುಮಾರು 2 ಸಾವಿರ ಕೋಟಿ ರೂ. ಮೌಲ್ಯದ ಮಾದಕ ವಸ್ತು ಮಾರಾಟ ನಡೆಸುವ ದೇಶದ ಅತಿ ದೊಡ್ಡ ಜಾಲದಲ್ಲಿ ನಟಿ ಮಮತಾ ಕುಲಕರ್ಣಿ ಹೆಸರು ಕೇಳಿ ಬಂದಿದೆ. ಮಹಾರಾಷ್ಟ್ರದ ಥಾಣೆ ಪೊಲೀಸರು ಈಕೆಯನ್ನು ಡ್ರಗ್ಸ್ ಪ್ರಕರಣದಲ್ಲಿ ಆರೋಪಿಯಾಗಿಸಿದ್ದಾರೆ. ಅದೇ ರೀತಿ, ಬೆಂಗಳೂರಿನಲ್ಲೂ ರೂಪದರ್ಶಿ ದರ್ಶಿತ್ ಮಿತಾ ಗೌಡ ಡ್ರಗ್ಸ್ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪ ಕೇಳಿಬಂದಿದೆ.

ಸಜ್ಜಾದ ಜರ್ಮನ್ ಶೆಫರ್ಡ್ ಪಡೆ

ಹೆಚ್ಚಾಗಿ ಯುವ ಸಮುದಾಯವನ್ನು ದಿಕ್ಕುತಪ್ಪಿಸುತ್ತಿರುವ ಡ್ರಗ್ಸ್ ಮಾಫಿಯಾ ತಡೆಯಲು ಪೊಲೀಸ್ ಇಲಾಖೆ ಪ್ರತ್ಯೆಕ ಶ್ವಾನಪಡೆ ತಯಾರಿಗೆ ಮುಂದಾಗಿದೆ. ಬೆಂಗಳೂರು ನಗರಕ್ಕೆ ಅಕ್ರಮವಾಗಿ ಮಾದಕವಸ್ತುಗಳು ಸರಬರಾಜಾಗುತ್ತಿರುವ ಪ್ರಕರಣಗಳಿಗೆ ಕಡಿವಾಣ ಹಾಕಲು ಇಲಾಖೆ ನಿರ್ಧರಿಸಿದ್ದು, ಇದಕ್ಕಾಗಿಯೇ ಡ್ರಗ್ಸ್ ಪತ್ತೆ ಮಾಡುವಲ್ಲಿ ಚುರುಕಾಗಿರುವ 35 ಜರ್ಮನ್ ಶೆಫರ್ಡ್ ಶ್ವಾನಗಳನ್ನು ಖರೀದಿಸಲು ಚಿಂತನೆ ನಡೆಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕರಾವಳಿ ಪ್ರದೇಶ, ವಾಯು, ರಸ್ತೆ ಮಾರ್ಗದಲ್ಲಿ ಪ್ರತಿನಿತ್ಯ ರಾಜಧಾನಿಗೆ ಮಾದಕದ್ರವ್ಯವನ್ನು ಕಳ್ಳಸಾಗಣೆ ಮಾಡಲಾಗುತ್ತಿದೆ. ಈ ಜಾಲದಲ್ಲಿ ಸ್ಥಳೀಯರು ಮತ್ತು ವಿದೇಶಿಯರು ಸಕ್ರಿಯರಾಗಿದ್ದಾರೆ. ವಿಮಾನ ನಿಲ್ದಾಣಗಳಲ್ಲಿ ಎಲ್ಲ ಪ್ರಯಾಣಿಕರನ್ನೂ ತಪಾಸಣೆಗೆ ಒಳಪಡಿಸಲು ಪೊಲೀಸರಿಗೆ ಕಷ್ಟವಾಗುತ್ತಿದೆ. ಯಂತ್ರದಲ್ಲೂ ಕೆಲವೊಮ್ಮೆ ಮ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News