ಬೇಕಾಬಿಟ್ಟಿ ದುಡ್ಡು ಮಕ್ಕಳ ಕೈಸೇರದಂತೆ ಇರಲಿ ನಿಗಾ

Update: 2017-06-19 16:57 GMT

ಪೋಷಕರು ಮಕ್ಕಳಿಗೆ ಬೇಕಾಬಿಟ್ಟಿಯಾಗಿ ದುಡ್ಡು ನೀಡುವುದು ಕೂಡಾ ಮಕ್ಕಳು ಮಾದಕ ದ್ರವ್ಯಗಳಂತಹ ಕೆಟ್ಟ ಚಟಗಳಿಗೆ ದಾಸರಾಗಲು ಕಾರಣವಾಗುತ್ತಿದೆ. ಕೆಲ ವರ್ಷಗಳ ಹಿಂದೆ ಮೂಡಿಗೆರೆಯ ನನ್ನ ಸ್ನೇಹಿತೆಯ ಮಗಳೊಬ್ಬಳನ್ನು ಮಂಗಳೂರಿನ ಪ್ರತಿಷ್ಠಿತ ಕಾಲೇಜಿಗೆ ಸೇರಿಸಲಾಗಿತ್ತು. ಮಗಳು ಉನ್ನತ ಶಿಕ್ಷಣ ಪಡೆಯುವ ಆಸೆಯಿಂದ ಆಕೆಗೆ ಯಾವುದೇ ಕೊರತೆ ಆಗದಂತೆ ಆಕೆಯನ್ನು ಹಾಸ್ಟೆಲ್‌ನಲ್ಲಿ ಸೇರಿಸಿ ಆಕೆಗೆ ಸಾಕಷ್ಟು ಹಣವನ್ನೂ ಅವರು ಒದಗಿಸುತ್ತಿದ್ದರು. ಆದರೆ ಮುಗ್ಧೆಯಾಗಿದ್ದ ಅವರ ಪುತ್ರಿ ಇಲ್ಲಿ ಅದು ಹೇಗೋ ತನ್ನ ಸ್ನೇಹಿತರ ಜತೆ ಡ್ರಗ್ಸ್ ಚಟಕ್ಕೆ ಬಲಿಯಾಗಿ ಶಿಕ್ಷಣ ಪೂರೈಸುವ ಮೊದಲೇ ಆತ್ಮಹತ್ಯೆಗೆ ಶರಣಾಗಿದ್ದಳು. ಪೋಷಕರಿಗೂ ಈ ವಿಷಯ ಅರಿವಾಗಿದ್ದು ಮಗಳು ತಮ್ಮಿಂದ ಶಾಶ್ವತವಾಗಿ ದೂರವಾದಾಗ. ಈ ಘಟನೆಯಿಂದ ತೀರಾ ಹತಾಶರಾದ ಆ ಬಾಲಕಿಯ ಪೋಷಕರು ತಮ್ಮೆಲ್ಲಾ ಸ್ನೇಹಿತರು, ಕುಟುಂಬದವರ ಜತೆಗೂ ಸಂಬಂಧವನ್ನು ಕಳೆದುಕೊಂಡು ದೂರವಾಗಿದ್ದಾರೆ. ಇಂತಹ ಅನೇಕ ಪ್ರಕರಣಗಳು ನಮ್ಮ ಕಣ್ಣ ಮುಂದೆ ನಡೆದಿವೆ. ಇಂತಹ ಪರಿಸ್ಥಿತಿಯಲ್ಲಿ ಶಾಲಾ ಕಾಲೇಜುಗಳಿಗೆ ಕಳುಹಿಸುವ ತಮ್ಮ ಮಕ್ಕಳಿಗೆ ಒಂದಿಷ್ಟು ಸಮಯದ ಜತೆ ಅವರ ಚಟುವಟಿಕೆಗಳ ಬಗ್ಗೆ ಗಮನ ಹರಿಸುವುದು ಪೋಷಕರ ಪರಮ ಕರ್ತವ್ಯ ಎನ್ನುತ್ತಾರೆ ಪತ್ರಕರ್ತೆಯಾಗಿಯೂ ಸೇವೆ ಸಲ್ಲಿಸಿರುವ ಅನುಷಾ ಹೊನೆಕೋಲು. ‘‘ಒಮ್ಮೆ ಡ್ರಗ್ಸ್ ಚಟಕ್ಕೆ ಬಿದ್ದವರು ಮತ್ತೆ ಅದರಿಂದ ಹೊರಬರಲಾಗದೆ ಅದು ಸಿಗದಿದ್ದರೆ ಇತರ ನಶೆ ನೀಡುವ ವಸ್ತುಗಳನ್ನು ಆಶ್ರಯಿಸುತ್ತಾರೆ. ಈ ಚಟಕ್ಕೆ ಅಂಟಿಕೊಂಡವರನ್ನು ಒಂದೊಮ್ಮೆ ಅದರಿಂದ ಹೊರತರಲು ಪ್ರಯತ್ನಗಳನ್ನು ಮಾಡಿದರೂ ಅವರು ಖಿನ್ನರಾಗುತ್ತಾರೆ. ನಶೆಗೆ ತಾವು ಆಶ್ರಯಿಸಿದ್ದ ಮಾದಕ ದ್ರವ್ಯಗಳು ದೊರೆಯದಿದ್ದರೆ ಅವರು ಕೊನೆಗೆ ಬಿಪಿ ಮಾತ್ರೆಗಳು, ಸಿರಪ್‌ಗಳಂತಹ ಔಷಧಿಗಳನ್ನು ಉಪಯೋಗಿಸಿ ನಶೆ ಪಡೆಯಲು ಪ್ರಯತ್ನಿಸುತ್ತಾರೆ. ಇದರಿಂದ ಪ್ರಾಣ ಕಳೆದುಕೊಳ್ಳುವ ಸಂಭವವೇ ಅಧಿಕ. ಈ ಬಗ್ಗೆ ಎಚ್ಚರಿಕೆ ವಹಿಸಬೇಕಾದದ್ದು ಪೋಷಕರು. ಜತೆಗೆ ಮೆಡಿಕಲ್ ಸ್ಟೋರ್‌ಗಳಲ್ಲಿ ವೈದ್ಯರ ಚೀಟಿ ಇಲ್ಲದೆ ಮಕ್ಕಳ ಕೈಗೆ ಔಷಧಿಗಳನ್ನು ನೀಡುವ ಬಗ್ಗೆ ಕಡಿವಾಣ ಹಾಕಬೇಕಾದ ಅಗತ್ಯವಿದೆ. ಕುಟುಂಬ ನಿರ್ವಹಣೆಗಾಗಿ ತಂದೆ ತಾಯಿ ಇಬ್ಬರೂ ಇಂದು ದುಡಿಯುವುದು ಅನಿವಾರ್ಯವಾಗಿರುವ ಕಾಲಘಟ್ಟದಲ್ಲಿ ಮಕ್ಕಳು ಪೋಷಕರ ಪ್ರೀತಿಯನ್ನು ಕಳೆದುಕೊಳ್ಳುತ್ತಾ, ಇಂತಹ ಕೆಟ್ಟ ಚಟಗಳತ್ತ ಆಕರ್ಷಿತರಾಗುವುದು ಸುಲಭ. ಹಾಗಾಗಿ ತಮ್ಮ ಕೆಲಸದ ಒತ್ತಡದ ನಡುವೆ ಮಕ್ಕಳಿಗೆ ಒಂದಿಷ್ಟು ಸಮಯದ ಜತೆ ಪ್ರೀತಿಯನ್ನು ಹಂಚಿಕೊಳ್ಳುವುದು ಅತೀ ಅಗತ್ಯ. ಮಕ್ಕಳಿಗೆ ತಿಂಡಿ ತಿನಿಸು, ವಸ್ತುಗಳು ಸೇರಿದಂತೆ ಅಗತ್ಯವಿರುವುದನ್ನು ಅವರ ಜತೆಗೇ ಖರೀದಿಸಿ ನೀಡುವ ಬದಲು ಅವರ ಕೈಗೆ ದುಡ್ಡನ್ನು ನೀಡುವುದು ಅಪಾಯಕ್ಕೆ ಆಹ್ವಾನ ನೀಡಿದಂತೆ. ಕಳೆದು ಹೋದ ಮೇಲೆ ಕಣ್ಣೀರು ಹಾಕಿ ಪರಿತಪಿಸುವ ಮೊದಲು ಮುಂಜಾಗರೂಕತೆಯೂ ಅತೀ ಅಗತ್ಯ ಎಂದು ಓರ್ವ ಪೋಷಕಿಯಾಗಿಯೂ ಅನುಷಾ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಪೂರೈಕೆಗೆ ಮಕ್ಕಳ ಬಳಕೆ

ಗಾಂಜಾ ಮಾರಾಟಗಾರರು ಗಾಂಜಾವನ್ನು ಪೂರೈಸಲು ಮಕ್ಕಳನ್ನು ಬಳಸಿಕೊಳುತ್ತಿದ್ದಾರೆ. ಗಾಂಜಾ ಮಾರಾಟಗಾರ ಗ್ರಾಹಕನನ್ನು ಸಂಪರ್ಕಿಸಿ ನಿರ್ದಿಷ್ಟ ಸ್ಥಳಕ್ಕೆ ಬರುವಂತೆ ಸೂಚಿಸು ತ್ತಾನೆ. ಗ್ರಾಹಕ ನಿರ್ದಿಷ್ಟ ಸ್ಥಳಕ್ಕೆ ತಲುಪಿದ ಬಳಿಕ ಈ ಮಾರಾಟಗಾರ ಗ್ರಾಹಕನನ್ನು ನೇರವಾಗಿ ಭೇಟಿಯಾಗದೆ ಮಕ್ಕಳ ಕೈಗೆ 10 ರೂ. ಇಟ್ಟು ಕಳುಹಿಸಿಕೊಡುತ್ತಾನೆ. ಈ ಮಕ್ಕಳಿಗೆ ಆತ ಕೊಟ್ಟಿರುವ ವಸ್ತುವಿನಲ್ಲಿ ಏನಿದೆ ಎಂಬುದು ತಿಳಿದಿರುವುದಿಲ್ಲ. ಸಾಮಾನ್ಯವಾಗಿ ಮಕ್ಕಳ ಮೇಲೆ ಅನುಮಾನ ವ್ಯಕ್ತಪಡಿಸುವ ಅಥವಾ ಅವರ ಬಳಿಯ ಲ್ಲಿರುವ ವಸ್ತುವನ್ನು ವಿಚಾರಿಸುವ ಗೋಜಿಗೆ ಯಾರೂ ಹೋಗುವುದಿಲ್ಲ ಎನ್ನುವುದು ಈ ಸಮಿತಿ ಸದಸ್ಯರ ಅಭಿಪ್ರಾಯ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News