ಸಜ್ಜಾದ ಜರ್ಮನ್ ಶೆಫರ್ಡ್ ಪಡೆ

Update: 2017-06-19 16:53 GMT

ಹೆಚ್ಚಾಗಿ ಯುವ ಸಮುದಾಯವನ್ನು ದಿಕ್ಕುತಪ್ಪಿಸುತ್ತಿರುವ ಡ್ರಗ್ಸ್ ಮಾಫಿಯಾ ತಡೆಯಲು ಪೊಲೀಸ್ ಇಲಾಖೆ ಪ್ರತ್ಯೆಕ ಶ್ವಾನಪಡೆ ತಯಾರಿಗೆ ಮುಂದಾಗಿದೆ. ಬೆಂಗಳೂರು ನಗರಕ್ಕೆ ಅಕ್ರಮವಾಗಿ ಮಾದಕವಸ್ತುಗಳು ಸರಬರಾಜಾಗುತ್ತಿರುವ ಪ್ರಕರಣಗಳಿಗೆ ಕಡಿವಾಣ ಹಾಕಲು ಇಲಾಖೆ ನಿರ್ಧರಿಸಿದ್ದು, ಇದಕ್ಕಾಗಿಯೇ ಡ್ರಗ್ಸ್ ಪತ್ತೆ ಮಾಡುವಲ್ಲಿ ಚುರುಕಾಗಿರುವ 35 ಜರ್ಮನ್ ಶೆಫರ್ಡ್ ಶ್ವಾನಗಳನ್ನು ಖರೀದಿಸಲು ಚಿಂತನೆ ನಡೆಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕರಾವಳಿ ಪ್ರದೇಶ, ವಾಯು, ರಸ್ತೆ ಮಾರ್ಗದಲ್ಲಿ ಪ್ರತಿನಿತ್ಯ ರಾಜಧಾನಿಗೆ ಮಾದಕದ್ರವ್ಯವನ್ನು ಕಳ್ಳಸಾಗಣೆ ಮಾಡಲಾಗುತ್ತಿದೆ. ಈ ಜಾಲದಲ್ಲಿ ಸ್ಥಳೀಯರು ಮತ್ತು ವಿದೇಶಿಯರು ಸಕ್ರಿಯರಾಗಿದ್ದಾರೆ. ವಿಮಾನ ನಿಲ್ದಾಣಗಳಲ್ಲಿ ಎಲ್ಲ ಪ್ರಯಾಣಿಕರನ್ನೂ ತಪಾಸಣೆಗೆ ಒಳಪಡಿಸಲು ಪೊಲೀಸರಿಗೆ ಕಷ್ಟವಾಗುತ್ತಿದೆ. ಯಂತ್ರದಲ್ಲೂ ಕೆಲವೊಮ್ಮೆ ಮಾದಕವಸ್ತುಗಳು ಪತ್ತೆಯಾಗುವುದಿಲ್ಲ ಎನ್ನುವ ಆರೋಪಗಳು ಕೇಳಿ ಬಂದಿವೆ.

ಈ ನಿಟ್ಟಿನಲ್ಲಿ ನಗರ ವ್ಯಾಪ್ತಿಯಲ್ಲಿರುವ 60 ಶ್ವಾನಪಡೆಗೆ ಅಪರಾಧ ಪ್ರಕರಣಗಳ ಪತ್ತೆ, ಗಣ್ಯರ ಭದ್ರತೆ, ವಿಮಾನ ನಿಲ್ದಾಣ, ಬಸ್ ನಿಲ್ದಾಣ ಭದ್ರತಾ ಕಾರ್ಯದಲ್ಲೇ ಹೆಚ್ಚು ಸಮಯ ಕಳೆದು ಹೋಗುತ್ತಿದೆ. ಹಾಗಾಗಿ ಮಾದಕದ್ರವ್ಯ ಜಾಲವನ್ನು ಪತ್ತೆ ಮಾಡಿ ನಿಷ್ಕ್ರಿಯಗೊಳಿಸಲು ಪ್ರತ್ಯೆಕ ಜರ್ಮನ್ ಶೆಫರ್ಡ್ ಶ್ವಾನಪಡೆ ಸಜ್ಜುಗೊಳಿಸಲು ಇಲಾಖೆ ನಿರ್ಧರಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News