ಆಹಾರ ನಿರೀಕ್ಷಕರ ಹುದ್ದೆ ಶೀಘ್ರ ಭರ್ತಿ: ರಮೇಶ್‌ ಕುಮಾರ್

Update: 2017-06-19 12:18 GMT

ಬೆಂಗಳೂರು, ಜೂ. 19: ರಾಜ್ಯದಲ್ಲಿ ಆಹಾರ ಸುರಕ್ಷತೆಯನ್ನು ಕಾಪಾಡುವ ದೃಷ್ಟಿಯಿಂದ ಶೀಘ್ರದಲ್ಲಿಯೇ ಆಹಾರ ನಿರೀಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ರಮೇಶ್‌ಕುಮಾರ್ ಹೇಳಿದ್ದಾರೆ.

ಸೋಮವಾರ ವಿಧಾನ ಪರಿಷತ್‌ನ ಪ್ರಶ್ನೋತ್ತರ ವೇಳೆಯಲ್ಲಿ ಪಕ್ಷೇತರ ಸದಸ್ಯ ಬಸವನಗೌಡ ಆರ್. ಪಾಟೀಲ್ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, ಆಹಾರ ಸುರಕ್ಷತೆಯನ್ನು ಕಾಪಾಡಲು ಹುದ್ದೆಗಳ ಕೊರತೆ ಇರುವುದು ನಿಜ. ಹೀಗಾಗಿ, ಶೀಘ್ರದಲ್ಲಿಯೇ ಆಹಾರ ನಿರೀಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ಹೇಳಿದರು. ಹುದ್ದೆಗಳನ್ನು ತುಂಬುವುದು ಮುಖ್ಯವಲ್ಲ. ಆ ಹುದ್ದೆಗಳಲ್ಲಿ ಸೇವೆ ಸಲ್ಲಿಸುವವರು ಸಮರ್ಥರಾಗಿರಬೇಕು ಎಂದು ಹೇಳಿದರು.

ಹಾಲು, ಹಣ್ಣು, ತರಕಾರಿ, ಸಿಹಿ ಪದಾರ್ಥಗಳು ಕಲಬೆರಕೆಯಾಗುತ್ತಿರುವುದು ಸರಕಾರದ ಗಮನಕ್ಕೆ ಬಂದಿದ್ದು, ಹಾಲಿನ ಕಲಬೆರಕೆಗೆ ಸಂಬಂಧಪಟ್ಟಂತೆ ಪ್ರಸಕ್ತ ಸಾಲಿನಲ್ಲಿ ಸಂಬಂಧಪಟ್ಟವರ ವಿರುದ್ಧ 3 ಕೋಟಿ 38 ಲಕ್ಷ ದಂಡ ವಿಧಿಸಿ ಮೊಕದ್ದಮೆ ಹೂಡಲಾಗಿದೆ ಎಂದು ತಿಳಿಸಿದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ರತಿವಾರ ಕ್ಷೇತ್ರ ಮಟ್ಟದ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆ ನಡೆಸಲಾಗುತ್ತಿದೆ. ಅವಶ್ಯ ಇರುವ ಕಡೆ ಆಹಾರ ವಹಿವಾಟುದಾರರ ಮೇಲೆ ದಾಳಿ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News