ಹೆಣ್ಣು ಮಕ್ಕಳ ರಕ್ಷಣೆಗಾಗಿ ಹೊಸ ನೀತಿ ಜಾರಿ: ಉಮಾಶ್ರೀ

Update: 2017-06-19 12:20 GMT

ಬೆಂಗಳೂರು, ಜೂ. 19: ಹೆಣ್ಣು ಮಕ್ಕಳ ರಕ್ಷಣೆಗಾಗಿ ರಾಜ್ಯ ಸರಕಾರ ಹೊಸ ನೀತಿಯನ್ನು ತರಲು ಮುಂದಾಗಿದ್ದು, ಇದರ ಕರಡು ಸಿದ್ಧವಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಉಮಾಶ್ರೀ ಹೇಳಿದ್ದಾರೆ.

ಸೋಮವಾರ ವಿಧಾನ ಪರಿಷತ್‌ನ ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್ ಸದಸ್ಯೆ ಜಯಮಾಲಾ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, ಈಗಾಗಲೇ ಹೆಣ್ಣು ಮಕ್ಕಳ ಹಕ್ಕುಗಳ ರಕ್ಷಣೆ ಮಾಡಲು ಸರಕಾರ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಹಾಗೂ ಹೆಣ್ಣು ಮಕ್ಕಳ ರಕ್ಷಣೆಗಾಗಿ ನೀತಿಯನ್ನು ಸರಕಾರ ರೂಪಿಸಲು ಮುಂದಾಗಿದೆ ಎಂದು ಹೇಳಿದರು. ರಾಜ್ಯದಲ್ಲಿರುವ 4 ರಂಗಾಯಣಗಳ ಪೈಕಿ ಮೈಸೂರು, ಶಿವಮೊಗ್ಗ, ಕಲ್ಬುರ್ಗಿ ರಂಗಾಯಣಗಳಿಗೆ ನಿರ್ದೇಶಕರನ್ನು ಇತ್ತೀಚೆಗಷ್ಟೆ ನೇಮಕ ಮಾಡಲಾಗಿದೆ ಎಂದು ಹೇಳಿದರು.

ಎಚ್.ಎಂ. ರೇವಣ್ಣ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕಳೆದ ಒಂದು ವರ್ಷಗಳಿಂದ ಈ ಹುದ್ದೆಗಳು ಖಾಲಿ ಇದ್ದವು. ಆದರೆ, ರಂಗಾಯಣದ ಕಾರ್ಯ ಚಟುವಟಿಕೆಗೆ ತೊಂದರೆಯಾಗದಂತೆ ಇಲಾಖೆಯ ಅಧಿಕಾರಿಗಳನ್ನು ನೇಮಕ ಮಾಡಲಾಗಿತ್ತು. ಇತ್ತೀಚೆಗಷ್ಟೆ ಮೈಸೂರು ರಂಗಾಯಣಕ್ಕೆ ಭಾಗೀರಥಿ ಬಾಯಿ ಕದಂ, ಶಿವಮೊಗ್ಗ ರಂಗಾಯಣಕ್ಕೆ ಡಾ.ಎಂ.ಗಣೇಶ್, ಕಲ್ಬುರ್ಗಿ ರಂಗಾಯಣಕ್ಕೆ ಮಹೇಶ್ ವಿ. ಪಾಟೀಲ್ ಅವರನ್ನು ನೇಮಕ ಮಾಡಲಾಗಿದೆ ಎಂದರು.

ರಂಗಾಯಣದ ಕಾರ್ಯ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ರಂಗ ಸಮಾಜ ಅಸ್ತಿತ್ವಕ್ಕೆ ತರಲಾಗಿದ್ದು, ಅದು ಕಾಲ ಕಾಲಕ್ಕೆ ಸಭೆ ನಡೆಸಿ ರಂಗಾಯಣದಲ್ಲಿ ಏನು ಆಗಬೇಕು ಎನ್ನುವ ಬಗ್ಗೆ ನಿರ್ಧಾರ ಕೈಗೊಳ್ಳಲಿದೆ ಎಂದರು.

ಒಂದು ವರ್ಷದಿಂದ ರಂಗಾಯಣದಲ್ಲಿ ನಿರ್ದೇಶಕರಿಲ್ಲದೆ ಖಾಲಿ ಇವೆ. ಹೀಗಿರುವಾಗ ರಂಗಾಯಣಗಳ ಅಗತ್ಯವೇನಿದೆ ಎಂದು ಎಚ್.ಎಂ.ರೇವಣ್ಣ ಪ್ರಶ್ನಿಸಿದ್ದು, ಉಮಾಶ್ರೀ ಅವರಿಗೆ ಕೋಪ ತರಿಸಿತು. ಇದಕ್ಕೆ ಪ್ರತಿಕ್ರಿಯಿಸಿದ ಅವರು, ನಾವೇನೂ ಸುಮ್ಮನೆ ಕುಳಿತಿಲ್ಲ, ಕಳೆದ ಒಂದು ವರ್ಷಗಳಿಂದ ನಿರಂತರವಾಗಿ ಸಭೆ ನಡೆಸಿ ಅರ್ಹರನ್ನು ನೇಮಕ ಮಾಡಿದ್ದೇವೆ ಎಂದರು.

ಆಗ ಎಚ್.ಎಂ. ರೇವಣ್ಣ, ಸಚಿವರು ನೀಡಿರುವ ಉತ್ತರದಲ್ಲಿ ಹೊಸ ನಿರ್ದೇಶಕರನ್ನು ಪ್ರಸ್ತಾಪಿಸಿಲ್ಲ, ಸದನಕ್ಕೆ ತಪ್ಪುಮಾಹಿತಿ ನೀಡಿದ್ದಾರೆ. ಇದಕ್ಕೆ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು. ಆಗ ಉಮಾಶ್ರೀ ತಪ್ಪು ಉತ್ತರ ನೀಡುವ ಉದ್ದೇಶ ತಮಗಿಲ್ಲ, ಸದನದಲ್ಲೇ ಉತ್ತರ ನೀಡುವ ಸಲುವಾಗಿ ಈ ರೀತಿಯ ಉತ್ತರ ನೀಡಿದ್ದೇನೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News