ನೂತನ ಕೃತಕ ಮರಳು ನೀತಿಯನ್ನು ಜಾರಿಗೊಳಿಸಲು ಆಗ್ರಹಿಸಿ ಧರಣಿ

Update: 2017-06-19 12:24 GMT

ಬೆಂಗಳೂರು, ಜೂ.19: ಎಂ ಸ್ಯಾಂಡ್‌ನ ಗುತ್ತಿಗೆ ನವೀಕರಣಕ್ಕೆ ತಿದ್ದುಪಡಿಗೊಳಿಸಿರುವ ನೂತನ ಕೃತಕ ಮರಳು ನೀತಿ-2016(ಕರ್ನಾಟಕ ಮೈನರ್ ಮಿನರಲ್ ಕನ್ಸೇಷನ್ ರೂಲ್ಸ್) ಅನ್ನು ಜಾರಿಗೊಳಿಸಬೇಕು ಹಾಗೂ ಇತರೆ ಬೇಡಿಕೆಗಳ ಈಡೇರಿಕೆ ಆಗ್ರಹಿಸಿ ಕ್ರಶರ್ ಮತ್ತು ಕಲ್ಲು ಕ್ವಾರಿ ಮಾಲಕರು ಇಂದು ನಗರದ ಸ್ವಾತಂತ್ರ ಉದ್ಯಾನದಲ್ಲಿ ಧರಣಿ ನಡೆಸಿದರು.

ಧರಣಿಯ ನೇತೃತ್ವ ವಹಿಸಿದ್ದ ಸಂಘಟನೆಯ ಕ್ರಶರ್ ಮತ್ತು ಕಲ್ಲು ಕ್ವಾರಿ ಮಾಲಕರ ಸಂಘದ ಅಧ್ಯಕ್ಷ ಸಂಜೀವ ಹಟ್ಟಿಹೊಳಿ ಮಾತನಾಡಿ, 2016ರ ಆಗಸ್ಟ್‌ನಲ್ಲಿ ತಿದ್ದುಪಡಿಗೊಳಿಸಿದ್ದ ಕರ್ನಾಟಕ ಮೈನರ್ ಮಿನರಲ್ ಕನ್ಸೇಷನ್ ರೂಲ್ಸ್ (1994) ಕಾಯಿದೆ ಅನ್ನು ರಾಜ್ಯ ಸರಕಾರ ಜಾರಿಗೊಳಿಸದೆ, ಪರಿಗಣಿತ ಭೂ ಪರಿವರ್ತನೆ, ರಾಜಧನ ಪಾವತಿಯಂತ ದ್ವಂದ್ವ ನೀತಿಗಳನ್ನು ಅನುಸರಿಸುತ್ತಾ ಅಧಿಕ ದಂಡ ವಸೂಲಿ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಿದ್ದುಪಡಿಗೊಳಿಸಿರುವ ಕಾಯಿದೆಯನ್ನು ಜಾರಿಗೊಳಿಸುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದರು ರಾಜ್ಯ ಸರಕಾರ ಈ ಕುರಿತು ಮೀನಾಮೇಷ ಎಣಿಸುತ್ತಿದೆ. ಒಂದು ವರ್ಷದಲ್ಲಿ ಸರಕಾರಕ್ಕೆ 200 ಕೋಟಿ ಹೆಚ್ಚುವರಿಯಾಗಿ ತೆರಿಗೆಯನ್ನು ಸಂದಾಯ ಮಾಡಿದ್ದೇವೆ. ಆದಷ್ಟೂ ಬೇಗ ನೂತನ ಕಾಯಿದೆಯನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.

ಈಗಾಗಲೇ ಮರಳು ಗಣಿಗಾರಿಕೆಗೆ ನಿಷೇಧ ಹೇರಲಾಗಿದೆ. ಎಂ ಸ್ಯಾಂಡ್‌ಗೂ ನಿಷೇಧ ಹೇರಲು ಸರಕಾರ ಮುಂದಾಗಿದೆ. ಹೀಗಾದರೆ 25 ವರ್ಷಗಳಿಂದ ಲಕ್ಷಾಂತರ ರೂ. ಬಂಡವಾಳ ಹೂಡಿ ನಡೆಸುತ್ತಿರುವ ಕಲ್ಲು ಕ್ವಾರಿ ಮಾಲಕರು ಮತ್ತು ಸಾವಿರಾರು ಕಾರ್ಮಿಕರ ಗತಿಯೇನು ಎಂದು ಪ್ರಶ್ನಿಸಿದರು.
ನಮ್ಮ ಬೇಡಿಕೆಯನ್ನು ಕೂಡಲೆ ಈಡೇರಿಸದಿದ್ದರೆ ಹೋರಾಟದ ತೀವ್ರತೆಯನ್ನು ಹೆಚ್ಚಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.

ಧರಣಿನಿರತರ ಒತ್ತಾಯಕ್ಕೆ ಮಣಿದು ಪ್ರತಿಭಟನೆಯ ಸ್ಥಳಕ್ಕೆ ಆಗಮಿಸಿದ ಗಣಿ ಮತ್ತು ಭೂ ವಿಜ್ಞಾನ ಖಾತೆ ಸಚಿವ ವಿನಯ್ ಕುಲಕರ್ಣಿ ಮಾತನಾಡಿ, ನೂತನ ಕಾಯಿದೆ ಜಾರಿ ಮತ್ತು ಕ್ರಶರ್ ಹಾಗೂ ಕಲ್ಲು ಕ್ವಾರಿ ಮಾಲಕರ ಬೇಡಿಕೆಗಳ ಈಡೇರಿಸುವ ಸಂಬಂಧ ಮಂಗಳವಾರ ಮುಖ್ಯಮಂತ್ರಿಗಳೊಡನೆ ಚರ್ಚಿಸಲಾಗುವುದು ಎಂದು ಭರವಸೆ ನೀಡಿದರು.

ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಮಾತನಾಡಿ, ಕಲ್ಲು ಕ್ವಾರಿ ಮಾಲಕರ ಬೇಡಿಕೆಗಳ ಕುರಿತು ಕೇಂದ್ರ ಮಂತ್ರಿಗಳ ಜೊತೆ ಮಾತುಕತೆ ನಡೆಸುತ್ತೇವೆ ಎಂದು ಭರವಸೆ ನೀಡಿದರು. ಈ ವೇಳೆ ಮುಜರಾಯಿ ಖಾತೆ ಸಚಿವ ರುದ್ರಪ್ಪಲಮಾಣಿ, ಸಂಘದ ಗೌರವಾಧ್ಯಕ್ಷ ವಿ.ಸಿ.ಪಾಟೀಲ್ ಸೇರಿದಂತೆ ಇತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News