×
Ad

ಕೋಮು ಸಂಘರ್ಷಕ್ಕೆ ‘ಕಲ್ಲಡ್ಕ’ ಪ್ರಭಾಕರ್ ಭಟ್ ಕಾರಣ: ಸಚಿವ ರೈ ಆರೋಪ

Update: 2017-06-19 18:41 IST

ಬೆಂಗಳೂರು, ಜೂ. 19: ಬಂಟ್ವಾಳ ಕ್ಷೇತ್ರದ ಕಲ್ಲಡ್ಕದಲ್ಲಿ ಉಂಟಾದ ಕೋಮು ಸಂಘರ್ಷಕ್ಕೆ ಆರೆಸೆಸ್ಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಪ್ರಚೋದನಕಾರಿ ಹೇಳಿಕೆಯೆ ಕಾರಣ. ಹೀಗಾಗಿ ಕಾನೂನು ಅನ್ವಯ ಕ್ರಮ ಕೈಗೊಳ್ಳಲು ಪೊಲೀಸ್ ವರಿಷ್ಟಾಧಿಕಾರಿಗೆ ಸೂಚಿಸಿದ್ದೇನೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಸ್ಪಷ್ಟಪಡಿಸಿದ್ದಾರೆ.

ಸೋಮವಾರ ವಿಧಾನಸಭೆ ಕಲಾಪ ಆರಂಭಗೊಳ್ಳುತ್ತಿದ್ದಂತೆ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಆರೆಸೆಸ್ಸ್ ಮುಖಂಡ ಪ್ರಭಾಕರ್ ಭಟ್ ವಿರುದ್ಧ ಕೊಲೆಯತ್ನ (307) ಮೊಕದ್ದಮೆ ದಾಖಲಿಸುವಂತೆ ಸಚಿವರು ಸೂಚಿಸಿದ್ದಾರೆಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಪೊಲೀಸ್ ತನಿಖೆಯಲ್ಲಿ ಯಾವುದೇ ರೀತಿಯ ಹಸ್ತಕ್ಷೇಪ ಮಾಡಿಲ್ಲ ಎಂದು ಸ್ಪಷ್ಟಣೆ ನೀಡಿದರು.

ಕರೋಪಾಡಿ ಗ್ರಾ.ಪಂ.ಉಪಾಧ್ಯಕ್ಷ ಜಲೀಲ್ ರನ್ನು ಹಾಡುಹಗಲೆ ಹತ್ಯೆ ಮಾಡಿದ್ದು, ಇದರ ಹಿಂದೆ ಸಂಘಪರಿವಾರದ ಮುಖಂಡರ ಕೈವಾಡವಿದೆ. ಪೊಲೀಸರು ಸಂಘ ಪರಿವಾರದ ಕೆಲವರನ್ನು ಬಂಧಿಸಿದ್ದಾರೆ. ಆರೋಪಿಗಳಿಗೆ ಕೆಲವರು ಆಶ್ರಯ ನೀಡುತ್ತಾರೆಂದು ಪ್ರಭಾಕರ್ ಭಟ್ ವಿರುದ್ಧ ಆರೋಪ ಮಾಡಿದರು.

ಮನುಷ್ಯ ದ್ವೇಷಿ-ದೈವ ದ್ವೇಷಿ : ತಾನು 6 ಬಾರಿ ಶಾಸಕನಾಗಿ ಆಯ್ಕೆಯಾಗಿದ್ದು, ಇದಕ್ಕೆ ನನ್ನಲ್ಲಿರುವ ಜಾತ್ಯತೀತತೆ ಬಲಿಷ್ಠವಾಗಿರುವುದು ಮುಖ್ಯ ಕಾರಣ ಎಂದ ಅವರು, ನಾನು ಸಕಲ ಜೀವರಾಶಿಯನ್ನು ಪ್ರೀತಿಸುತ್ತೇನೆ. ಹೀಗಾಗಿ ನನ್ನನ್ನು ಬಹುಸಂಖ್ಯಾತ ಮತ್ತು ಅಲ್ಪಸಂಖ್ಯಾತ ಮತೀಯ ಸಂಘಟನೆಗಳು ವಿರೋಧಿಸುತ್ತಿವೆ ಎಂದು ಗದ್ಗದಿತರಾದರು.

ತಾನು ಇಂತಹದ್ದೆ ಜಾತಿಯಲ್ಲಿ ಹುಟ್ಟಬೇಕೆಂದು ಅರ್ಜಿ ಹಾಕಿಲ್ಲ. ಯಾವುದೇ ಒಂದು ಜಾತಿ-ಧರ್ಮಕ್ಕೂ ತಾನು ಸೇರಿದವನಲ್ಲ. ಮತೀಯ ಸಂಘಟನೆಗಳು ತನ್ನ ವಿರುದ್ದ ಇಲ್ಲ-ಸಲ್ಲದ ಆರೋಪಗಳನ್ನು ಮಾಡುವ ಮೂಲಕ ಮುಗಿಬೀಳುತ್ತಿವೆ. ಅದರ ನಡುವೆಯೂ ಜಿಲ್ಲೆ ಕೋಮು ಸಾಮರಸ್ಯ ಕಾಪಾಡಿಕೊಳ್ಳಲು ಬದ್ಧತೆ ತೋರಿದ್ದೇನೆ. ಕೊಲೆ ಆರೋಪಿಗಳಿಗೆ ಬೆಂಬಲ ನೀಡಿರುವುದನ್ನು ಸಾಬೀತುಪಡಿಸಿದರೆ ರಾಜಕೀಯ ನಿವೃತ್ತಿ ಹೊಂದುತ್ತೇನೆ ಎಂದು ರಮಾನಾಥ ರೈ ಸವಾಲು ಹಾಕಿದರು.

ಸಮಾಜದ ಎಲ್ಲ ವರ್ಗದವರ ಪ್ರೀತಿ-ವಿಶ್ವಾಸಗಳಿಸುವ ಕಾರಣಕ್ಕೆ ಸುದೀರ್ಘ ಕಾಲ ರಾಜಕೀಯದಲ್ಲಿದ್ದು, ಸ್ಥಳೀಯ ಸಂಸ್ಥೆ ಸೇರಿದಂತೆ ಬಹುತೇಕ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ಕಲ್ಲಡ್ಕದಲ್ಲಿಯೂ ನನಗೆ ಅಪಾರ ಜನ ಬೆಂಬಲವಿದೆ ಎಂದು ಸ್ಪಷ್ಟಪಡಿಸಿದರು.

ಕಲ್ಲಡ್ಕ ಪ್ರಭಾಕರ್ ಭಟ್ ಕೆಲವರಿಗೆ ದಿವ್ಯಸಂಭೂತರು. ಕಲ್ಲಡ್ಕ ಸಂಘರ್ಷದ ಹಿನ್ನೆಲೆಯಲ್ಲಿ ಅಲ್ಲಿನ ಮಸೀದಿ ಸಮಿತಿ ಸದಸ್ಯರು ತನ್ನನ್ನು ಭೇಟಿ ಮಾಡಲು ಪ್ರವಾಸಿ ಮಂದಿರಕ್ಕೆ ಆಗಮಿಸಿದ್ದರು. ಈ ವೇಳೆ ತಾನು ಎಸ್ಪಿಯವರೊಂದಿಗೆ ಸಮಾಲೋಚನೆ ನಡೆಸಿದ್ದು ಸತ್ಯ.
ರಮಝಾನ್ ಹಬ್ಬದ ಸಂದರ್ಭದಲ್ಲಿ ಸಾಮರಸ್ಯ ಕಾಪಾಡುವ ದೃಷ್ಟಿಯಿಂದ ಕೆಲ ಸೂಚನೆಗಳನ್ನು ನೀಡಿದ್ದೆ. ಅಲ್ಲದೆ, ಯಾವುದೇ ಕಾರಣಕ್ಕೂ ಅಮಾಯಕರನ್ನು ಬಂಧಿಸಿ ಕಿರುಕುಳ ನೀಡಬೇಡಿ ಎಂದು ಹೇಳಿದ್ದೇನೆ. ಜಿಲ್ಲೆಯಲ್ಲಿ ಶಾಂತಿ-ಸೌಹಾರ್ದತೆ ಹದಗೆಡಲು ಪ್ರಚೋದನಕಾರಿ ಹೇಳಿಕೆಗಳೇ ಮೂಲ ಕಾರಣ. ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳನ್ನೆ ‘ನರಸತ್ತ’ ವ್ಯಕ್ತಿ ಎಂದು ಹಿಯ್ಯಿಳಿಸಿದ್ದಾರೆಂದು ಗಮನಕ್ಕೆ ತಂದರು.

ಉಳ್ಳಾಲದಲ್ಲಿ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ನಡೆಸಿದ್ದ ಕೊಲೆ ಪ್ರಕರಣವನ್ನು ಮುಂದಿಟ್ಟುಕೊಂಡು ಲೋಕಸಭಾ ಸದಸ್ಯರೊಬ್ಬರು ಇಡೀ ಜಿಲ್ಲೆಗೆ ಬೆಂಕಿ ಹಚ್ಚುವ ಮಾತುಗಳನ್ನು ಆಡಿದ್ದರು. ಇದೀಗ ಅದೇ ಜನರು ರಾಜ್ಯಕ್ಕೆ ಬೆಂಕಿ ಹಚ್ಚಲು ಹೊರಟ್ಟಿದ್ದಾರೆಂದು ಸಂಘಪರಿವಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಇದರಿಂದ ಕೆಲಕಾಲ ಆಡಳಿತ ಮತ್ತು ವಿಪಕ್ಷ ಸದಸ್ಯರ ಮಧ್ಯೆ ತೀವ್ರ ವಾಗ್ವಾದ, ಏರಿದ ಧ್ವನಿಯಲ್ಲಿ ಮಾತಿನ ಚಕಮಕಿ, ಆರೋಪ-ಪ್ರತ್ಯಾರೋಪ ನಡೆಯಿತು. ಬಳಿಕ ಮಾತು ಮುಂದುವರಿಸಿದ ಶೆಟ್ಟರ್, ಕಲ್ಲಡ್ಕ ಕೋಮು ಘರ್ಷಣೆಗೆ ಡ್ರಗ್ಸ್ ಮಾಫಿಯಾ ಕಾರಣ ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳು ಹೇಳಿಕೆ ನೀಡಿದ್ದಾರೆಂದು ಉಲ್ಲೇಖಿಸಿದರು.

ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಮೋಹಿದ್ದೀನ್ ಬಾವಾ, ಅಭಯಚಂದ್ರ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇನ್ನು ನಿಮ್ಮ ದಬ್ಬಾಳಿಕೆ ನಡೆಯುವುದಿಲ್ಲ. ಕಲ್ಲಡ್ಕ ಪ್ರಭಾಕರ್ ಭಟ್ ಸಾರ್ವಜನಿಕ ಸಭೆಗಳಲ್ಲಿ ಪ್ರಚೋಧನಕಾರಿ ಭಾಷಣ ಮಾಡುತ್ತಿದ್ದು, ಒಂದು ಸಮುದಾಯದ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಈ ಹಂತದಲ್ಲಿ ಮಧ್ಯ ಪ್ರವೇಶಿಸಿ ಸ್ಪೀಕರ್ ಕೆ.ಬಿ.ಕೋಳಿವಾಡ, ಈ ಸಂಬಂಧ ಪರಿಶೀಲಿಸಿ ಮಧ್ಯಾಹ್ನವೇ ಗೃಹ ಸಚಿವರಿಂದ ಸದನಕ್ಕೆ ಉತ್ತರ ಕೊಡಿಸಲು ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡುವ ಮೂಲಕ ಕಾವೇರಿದ ಚರ್ಚೆಗೆ ತೆರೆ ಎಳೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News