×
Ad

ಅಧಿಕಾರಿಗಳ ನಿರ್ಲಕ್ಷದಿಂದ ಅಂಬೇಡ್ಕರ್ ಭವನ ವಿಳಂಬ: ಕೆ.ಎಸ್.ಈಶ್ವರಪ್ಪ

Update: 2017-06-20 18:20 IST

ಬೆಂಗಳೂರು, ಜೂ.20: ಅಧಿಕಾರಿಗಳ ನಿರ್ಲಕ್ಷದಿಂದಾಗಿ ರಾಜ್ಯದಲ್ಲಿ ಅಂಬೇಡ್ಕರ್ ಭವನಗಳ ನಿರ್ಮಾಣದಲ್ಲಿ ವಿಳಂಬವಾಗುತ್ತಿದೆ ಎಂದು ವಿಧಾನ ಪರಿಷತ್‌ನ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ವಾಗ್ದಾಳಿ ನಡೆಸಿದರು.

ಮಂಗಳವಾರ ವಿಧಾನಪರಿಷತ್‌ನಲ್ಲಿ ಅಂಬೇಡ್ಕರ್ ಭವನಗಳ ನಿರ್ಮಾಣದಲ್ಲಿ ಆಗುತ್ತಿರುವ ವಿಳಂಬದ ಕುರಿತು ಮಾತನಾಡಿದ ಅವರು, ಸರಕಾರ ಹಣ ಬಿಡುಗಡೆ ಮಾಡಿ ಹತ್ತಾರು ವರ್ಷ ಕಳೆದರು ಹಲವು ಜಿಲ್ಲೆಗಳಲ್ಲಿ ಅಂಬೇಡ್ಕರ್ ಭವನ ನಿರ್ಮಾಣವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಮೈಸೂರು ಜಿಲ್ಲೆಗೆ 212 ಅಂಬೇಡ್ಕರ್ ಭವನಗಳು ಮಂಜೂರಾಗಿವೆ. ಅದರಲ್ಲಿ 12 ಭವನಗಳು ಮಾತ್ರ ಪೂರ್ಣಗೊಂಡಿದ್ದು, 93 ಭವನಗಳು ನಿರ್ಮಾಣದ ಹಂತದಲ್ಲಿವೆ. ಹಾಗೆಯೇ ಚಾಮರಾಜನಗರದಲ್ಲಿ 54 ಅಂಬೇಡ್ಕರ್ ಭವನಗಳು ಮಂಜೂರಾಗಿವೆ. ಅದರಲ್ಲಿ 4 ಭವನಗಳು ಪೂರ್ಣಗೊಂಡಿದ್ದು, 24 ನಿರ್ಮಾಣದ ಹಂತದಲ್ಲಿವೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ಇದೇ ಪರಿಸ್ಥಿತಿಯಿದೆ ಎಂದು ಅವರು ಆರೋಪಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಎಚ್.ಆಂಜನೇಯ, ಕೆಲವು ಕಡೆ ನಿವೇಶನ ಹಾಗೂ ವಿನ್ಯಾಸದ ಕೊರತೆಯಿಂದಾಗಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ವಿಳಂಬವಾಗಿದೆ. ಈ ಸಮಸ್ಯೆಯನ್ನು ಶೀಘ್ರವಾಗಿ ಬಗೆಹರಿಸಿ ನಿರ್ದಿಷ್ಟಾವಧಿಯಲ್ಲಿ ಪೂರ್ಣಗೊಳಿಸಲಾಗುವುದು ಎಂದು ಭರವಸೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News