ಹಾಸ್ಟೆಲ್ ವಿದ್ಯಾರ್ಥಿಗಳ ಭೋಜನ ವೆಚ್ಚ ಹೆಚ್ಚಿಸಿ: ವೀಣಾ ಅಚ್ಚಯ್ಯ
ಬೆಂಗಳೂರು, ಜೂ.20: ಸಮಾಜ ಕಲ್ಯಾಣ ಇಲಾಖೆಯಡಿ ನಡೆಸುವ ಮೆಟ್ರಿಕ್ ಪೂರ್ವ ಹಾಗೂ ಮೆಟ್ರಿಕ್ ನಂತರದ ಹಾಸ್ಟೆಲ್ ವಿದ್ಯಾರ್ಥಿಗಳ ಪ್ರತಿ ದಿನದ ಭೋಜನ ವೆಚ್ಚವನ್ನು 46ರೂ.ನಿಂದ 75ಕ್ಕೆ ಹಾಗೂ 50ರೂ.ನಿಂದ 90ಕ್ಕೆ ಹೆಚ್ಚಳ ಮಾಡಬೇಕೆಂದು ಪರಿಷತ್‌ನ ಕಾಂಗ್ರೆಸ್ ಸದಸ್ಯೆ ವೀಣಾ ಅಚ್ಚಯ್ಯ ಒತ್ತಾಯಿಸಿದ್ದಾರೆ.
ಮಂಗಳವಾರ ವಿಧಾನಪರಿಷತ್‌ನಲ್ಲಿ ಮಾತನಾಡಿದ ಅವರು, ಪ್ರಸ್ತುತ ದಿನಗಳಲ್ಲಿ ಎಲ್ಲ ಪದಾರ್ಥಗಳ ಬೆಲೆಯೂ ಏರಿಕೆಯಾಗಿದೆ. ಹೀಗಾಗಿ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಪೌಷ್ಟಿಕಾಂಶಯುಕ್ತ ಆಹಾರವನ್ನು ನೀಡಬೇಕಾದರೆ ಅವರಿಗೆ ನೀಡುವ ಭೋಜನ ವೆಚ್ಚವನ್ನು ಹೆಚ್ಚಳ ಮಾಡುವುದು ಅನಿವಾರ್ಯ ಎಂದು ತಿಳಿಸಿದರು.
ಹಾಗೆಯೇ ಪಠ್ಯ ಪುಸ್ತಕ ಮತ್ತು ಲೇಖನ ಸಾಮಗ್ರಿಗಳ ಖರೀದಿಗೆ ಕೇವಲ 400ರೂ. ನೀಡಲಾಗುತ್ತಿದೆ. ಅದರ ಮೊತ್ತವನ್ನು 1000ರೂ.ಗೆ ಹೆಚ್ಚಿಸಬೇಕು. ವೈದ್ಯಕೀಯ ವೆಚ್ಚ, ದಿನ ಹಾಗೂ ಶುಚಿತ್ವಕ್ಕೆ ಮೊದಲ ಆದ್ಯತೆ ಕೊಡುವ ನಿಟ್ಟಿನಲ್ಲಿ ಇವುಗಳ ವೆಚ್ಚದಲ್ಲಿ ಹೆಚ್ಚಳ ಮಾಡಬೇಕೆಂದು ಅವರು ತಿಳಿಸಿದರು.
ರಾಜ್ಯದಲ್ಲಿ ಪ್ರತಿಜಿಲ್ಲೆಯಲ್ಲೂ ಒಂದೊಂದು ರೀತಿಯ ಆಹಾರ ವೈಶಿಷ್ಟಗಳಿರುತ್ತವೆ. ಅದರ ಅನುಸಾರವಾಗಿ ಆಯಾ ಜಿಲ್ಲೆಯ ಹಾಸ್ಟೆಲ್‌ಗಳಲ್ಲಿ ಸ್ಥಳೀಯ ಮಟ್ಟದ ಆಹಾರವನ್ನೇ ನೀಡಬೇಕಾಗಿದೆ. ಹೀಗಾಗಿ ಕೊಡಗು ಜಿಲ್ಲೆಯಲ್ಲಿರುವ ಹಾಸ್ಟೆಲ್‌ಗಳಲ್ಲಿ ಕೊಡಗು ಸಂಪ್ರದಾಯದಂತೆ ಆಹಾರ ನೀಡಬೇಕೆಂದು ಅವರು ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಎಚ್.ಆಂಜನೇಯ, ನಮ್ಮ ಹಾಸ್ಟೆಲ್‌ನ ವಿದ್ಯಾರ್ಥಿಗಳ ಯಾವ ಆಹಾರವನ್ನು ತಿನ್ನಲು ಭಯಸುತ್ತಾರೆಯೋ ಅದನ್ನೇ ನೀಡಲಾಗುತ್ತಿದೆ. ಮೀನು, ಬನ್ನೂರು ಕುರಿ ಮಾಂಸ, ಕೋಳಿ ಸೇರಿದಂತೆ ಹಲವು ರೀತಿಯ ಆಹಾರಗಳನ್ನು ನೀಡಲಾಗುತ್ತಿದೆ ಎಂದು ಅವರು ಹೇಳಿದರು.