ವೈದ್ಯಾಧಿಕಾರಿಗಳು-ಸಿಬ್ಬಂದಿ ವರ್ಗಾವಣೆ: ಶೇ.15ಕ್ಕೆ ಏರಿಸಲು ಅವಕಾಶ ಕಲ್ಪಿಸುವ ವಿಧೇಯಕಕ್ಕೆ ಅಸ್ತು

Update: 2017-06-20 14:44 GMT

ಬೆಂಗಳೂರು, ಜೂ. 20: ಸರಕಾರಿ ವೈದ್ಯಾಧಿಕಾರಿಗಳು ಮತ್ತು ಇತರೆ ಸಿಬ್ಬಂದಿ ವರ್ಗಾವಣೆ ಪ್ರಮಾಣವನ್ನು ವಾರ್ಷಿಕ ಶೇ.5ರಿಂದ 15ಕ್ಕೆ ಏರಿಸಲು ಅವಕಾಶ ಕಲ್ಪಿಸುವ ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ(ವೈದ್ಯಾಧಿಕಾರಿಗಳು ಮತ್ತು ಇತರ ಸಿಬ್ಬಂದಿಯ ವರ್ಗಾವಣೆ ನಿಯಂತ್ರಣ ತಿದ್ದುಪಡಿ) ವಿಧೇಯಕಕ್ಕೆ ವಿಧಾನಸಭೆ ಸರ್ವಾನುಮತದ ಅನುಮೋದನೆ ನೀಡಿತು.

ಮಂಗಳವಾರ ವಿಧಾನಸಭೆಯಲ್ಲಿ ಆರೋಗ್ಯ ಸಚಿವ ಕೆ.ಆರ್.ರಮೇಶ್‌ಕುಮಾರ್ ವಿಧೇಯಕವನ್ನು ಮಂಡಿಸಿ ಪರ್ಯಾಲೋಚಿಸಿ-ಅಂಗೀಕರಿಸುವಂತೆ ಎಲ್ಲ ಸದಸ್ಯರಿಗೆ ಮನವಿ ಮಾಡಿದರು. ಬಳಿಕ ವಿವರಣೆ ನೀಡಿದ ಅವರು, ಕೌನ್ಸಿಲಿಂಗ್ ಮೂಲಕ ಶೇ. 5ರಷ್ಟು ವೈದ್ಯರನ್ನು ವಾರ್ಷಿಕ ವರ್ಗಾವಣೆಗಿದ್ದ ಅವಕಾಶವನ್ನು ಶೇ.15ಕ್ಕೆ ವಿಸ್ತರಿಸಲಾಗಿದೆ ಎಂದರು.

ಪ್ರಸ್ತುತ ಶೇ.5ರಷ್ಟು ವೈದ್ಯರ ವರ್ಗಾವಣೆಗೆ ನಿಗದಿಪಡಿಸಿದ್ದರಿಂದ ಗ್ರಾಮೀಣ ಸೇವೆಗೆ ವೈದ್ಯರ ನೇಮಕಕ್ಕಿದ್ದ ಸಮಸ್ಯೆಯನ್ನು ವಿಧೇಯಕದ ಜಾರಿಯಾದರೆ ಪರಿಹಾರ ಕಲ್ಪಿಸಲಿದೆ. ಒಂದೆ ಸ್ಥಳದಲ್ಲಿ 10ವರ್ಷಗಳನ್ನು ಪೂರೈಸಿದ ವೈದ್ಯಾಧಿಕಾರಿಗಳು-ಸಿಬ್ಬಂದಿ ಇದ್ದಾರೆ. ಸಾರ್ವಜನಿಕರ ಹಿತದೃಷ್ಟಿಯಿಂದ ಅವರನ್ನು ಬೇರೆಡೆಗೆ ವರ್ಗಾವಣೆಗೆ ಈ ತಿದ್ದುಪಡಿ ತರಲಾಗಿದೆ ಎಂದು ಸ್ಪಷ್ಟಣೆ ನೀಡಿದರು.

ಆರೋಗ್ಯ ಇಲಾಖೆಯಲ್ಲಿ 40 ಸಾವಿರ ಉದ್ಯೋಗಿಗಳಿದ್ದು, ವರ್ಗಾವಣೆ ಕೋರಿ 10ಸಾವಿರ ಮನವಿಗಳು ಬರುತ್ತವೆ. ಇಂತಹ ಪರಿಸ್ಥಿತಿ ಹಿನ್ನೆಲೆಯಲ್ಲಿ ವೈದ್ಯರ ವರ್ಗಾವಣೆ ಪ್ರಮಾಣವನ್ನು ಹೆಚ್ಚಿಸಲಾಗಿದೆ ಎಂದ ಅವರು, ಜನಾನುರಾಗಿ ವೈದ್ಯರು ಎಷ್ಟೆ ವರ್ಷ ಒಂದೆಡೆ ಇದ್ದರೂ ಅವರನ್ನು ಮುಟ್ಟುವುದಿಲ್ಲ. ದೂರುಗಳು ಬಂದಲ್ಲಿ ಮಾತ್ರ ಅವರನ್ನು ವರ್ಗಾವಣೆ ಮಾಡಲಾಗುವುದು ಎಂದು ವಿವರಿಸಿದರು.

ಬಿಜೆಪಿ ಸದಸ್ಯ ವಿಶ್ವೇಶ್ವರ ಹೆಗಡೆ ಕಾಗೇರಿ, ಜೀವರಾಜ್, ವಿಧೇಯಕವನ್ನು ಸ್ವಾಗತಿಸಿದರು. ಅಲ್ಲದೆ, ವೈದ್ಯರು ಮತ್ತು ಸಿಬ್ಬಂದಿ ಕಾರ್ಯ ನಿರ್ವಹಣೆ ಬಗ್ಗೆ ಸೂಕ್ತ ನಿಗಾ ವಹಿಸಬೇಕು ಎಂದು ಸಲಹೆ ನೀಡಿದರು. ಆ ಬಳಿಕ ಸ್ಪೀಕರ್ ಕೆ.ಬಿ.ಕೋಳಿವಾಡ ವಿಧೇಯಕವನ್ನು ಮತಕ್ಕೆ ಹಾಕಿದಾಗ ಅದಕ್ಕೆ ಸಭೆ ಸರ್ವಾನುಮತದ ಒಪ್ಪಿಗೆ ನೀಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News